×
Ad

ಹಾಥರಸ್ ಅತ್ಯಾಚಾರ ಪ್ರಕರಣ : ನ್ಯಾಯಾಲಯದ ತೀರ್ಪು ಖಂಡಿಸಿದ ದಲಿತ ಬಹುಜನ ಆದಿವಾಸಿ ವಿಮುಕ್ತಿ

Update: 2023-03-11 23:30 IST

ಹೊಸದಿಲ್ಲಿ, ಮಾ. 10: ಹಾಥರಸ್‌ನಲ್ಲಿ 2020 ಸೆಪ್ಟಂಬರ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಖುಲಾಸೆಗೊಳಿಸಿ ಉತ್ತರಪ್ರದೇಶದ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ದಲಿತ ಬಹುಜನ ಆದಿವಾಸಿ ವಿಮುಕ್ತಿ (ಡಿಬಿಎವಿ)ಯ ಹೋರಾಟಗಾರರು ಖಂಡಿಸಿದ್ದಾರೆ. 

ನ್ಯಾಯ ಸಮ್ಮತ ವಿಚಾರಣೆಗೆ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ವಿಳಂಬಿಸದೆ  ಮೇಲ್ಮನವಿ ಸಲ್ಲಿಸುವಂತೆ ಸಾಮಾಜಿಕ ಹೋರಾಟಗಾರರ ಗುಂಪು ಉತ್ತರ ಪ್ರದೇಶ ಸರಕಾರಕ್ಕೆ ಮನವಿ ಮಾಡಿದೆ. 

ಪ್ರಕರಣದಲ್ಲಿ ಸಂತ್ರಸ್ತೆ ವಾಲ್ಮಿಕಿ ಸಮುದಾದ 19 ವರ್ಷದ ಯುವತಿ. ಆರೋಪಿಗಳೆಲ್ಲರೂ ಪ್ರಬಲ ಜಾತಿಯಾದ ಠಾಕೂರ ಸಮುದಾಯಕ್ಕೆ ಸೇರಿದವರು. ಆದುದರಿಂದ ನ್ಯಾಯದ ದಾರಿ ತಪ್ಪಿಸಿರುವುದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರರು ಕೋರಿದ್ದಾರೆ. 

‘‘ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಈ ತೀರ್ಪು ಹೊರಬಿದ್ದಿದೆ. ಆದರೆ, ದಮನಿತ ಜಾತಿಯ ಮಹಿಳೆಯರು ಈ ದಿನವನ್ನು  ಆಚರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಇದರ ಬದಲು ಜಾತಿವಾದದಿಂದ ಪೀಡಿತವಾದ ಸಮಾಜದಲ್ಲಿ ನಮ್ಮ ಸ್ತ್ರೀತ್ವಕ್ಕೆ ಗೌರವ ಸಿಗಲಾರದು ಎಂದು ನಮಗೆ ಆಗಾಗ ನೆನಪಿಸಲಾಗುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ. 

ತೀರ್ಪನ್ನು ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರರು, ‘‘ಕೆಲವರು  ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಕೆಲವು ಆರೋಪಿಗಳ ಹೆಸರು ಉಲ್ಲೇಖಿಸಿದ ಹೊರತಾಗಿಯೂ ನ್ಯಾಯಾಲಯ ಈ ತೀರ್ಪು ನೀಡಿದೆ. ಸಂಪೂರ್ಣ ಪ್ರಕ್ರಿಯೆ ಅನ್ಯಾಯದಿಂದ ಕೂಡಿದೆ. ಬ್ರಾಹ್ಮಣ್ಯದ ಪಿತೃಪ್ರಭುತ್ವದಲ್ಲಿ ಮುಳುಗಿದೆ’’ ಎಂದು ಅದು ಹೇಳಿದೆ. 

ಹಾಥರಸ್ ಪ್ರಕರಣ ಹಾಗೂ ಖೈರ್ಲಾಂಜಿ  ಪ್ರಕರಣದ ತೀರ್ಪಿನ ನಡುವೆ ಸಾದೃಶವಿದೆ ಎಂದು ಹೇಳಿಕೆ ತಿಳಿಸಿದೆ.  ಖೈರ್ಲಾಂಜಿ ಪ್ರಕರಣದಲ್ಲಿ ಲೈಂಗಿಕ ಹಿಂಸಾಚಾರ ಹಾಗೂ ದೌರ್ಜನ್ಯದ ಕಾಯ್ದೆ ಅಡಿಯ ಆರೋಪದಿಂದ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು ಎಂದು ಹೇಳಿಕೆ ತಿಳಿಸಿದೆ. ನ್ಯಾಯಾಲಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಯ್ದೆ ಅನ್ವಯಿಸಲು ನಿರಾಕರಿಸಿತು ಹಾಗೂ ಹತ್ಯೆ ಸೇಡಿನ ಹಿನ್ನೆಲೆಯಲ್ಲಿ ನಡೆದಿದೆ. ಇದಲ್ಲಿ ಜಾತಿ ಯಾವುದೇ ಪಾತ್ರ ವಹಿಸಿಲ್ಲ ಎಂದು ಹೇಳಿತ್ತು ಎಂದು ಹೇಳಿಕೆ ತಿಳಿಸಿದೆ. 

Similar News