ನಕಲಿ ವೈದ್ಯರ ಹಾವಳಿ ತಡೆಗೆ IMA ರಾಜ್ಯ ಘಟಕ ಆಗ್ರಹ

Update: 2023-03-12 04:28 GMT

ಮಂಗಳೂರು, ಮಾ.12: ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು, ವೈದ್ಯರ ಹಾಗೂ ವೈದ್ಯ ಸಿಬ್ಬಂದಿಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ(IMA)ದ ರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ್ ಬಿ. ಲಕ್ಕೋಳ್ ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕೃತ ಅಧ್ಯಯನದ ಪ್ರಕಾರ ದೇಶದಲ್ಲಿ ನೋಂದಾಯಿಸದೆ ಇರುವ ಸುಮಾರು ಒಂದು ಲಕ್ಷದಷ್ಟು ಅನರ್ಹ ವೈದ್ಯರಿದ್ದಾರೆ. ರೋಗಿಗಳು ಅಸಹಾಯಕತೆಯನ್ನು ಬಂಡವಾಳವಾಗಿಸಿಕೊಂಡಿರುವ ಈ ನಕಲಿ ವೈದ್ಯರುಗಳಿಗೆ ಸರಕಾರ ಉದಾರತೆ ತೋರಬಾರದು. ನಕಲಿ ವೈದ್ಯರ ಹಾವಳಿ ಹತ್ತಿಕ್ಕಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿ ವೈದ್ಯರ ಕೊರತೆ ಇದೆ, ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸಲು ವೈದ್ಯರು  ಹಿಂದೇಟು ಹಾಕುತ್ತಾರೆ ಹಾಗೂ ಇರುವ ಖಾಸಗಿ ವೈದ್ಯರು ದುಬಾರಿ ಎನ್ನುವುದು ಸತ್ಯಕ್ಕೆದೂರವಾದದ್ದು. ವಿಪರ್ಯಾಸವೆಂದರೆ ಪದವಿ ಪಡೆದ ವೈದ್ಯರಿಗೆ ಲಗಾಮು ಹಾಕಲು ಹಲವಾರು ಕಾನೂನುಗಳಿವೆ. ಆದರೆ ಯಾವುದೇ ಅರ್ಹ ಪದವಿ ಇಲ್ಲದೇ ಇರುವ ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಸೂಕ್ತ ಕಾನೂನುಗಳಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕಾರ್ಯ ಪ್ರವೃತ್ತವಾಗಬೇಕು ಎಂದು ಅವರು ಒತ್ತಾಯಿಸಿದರು.  

 ಆಧುನಿಕ ವೈದ್ಯ ಪದ್ಧತಿಯನ್ನು ಇನ್ನಿತರ ವೈದ್ಯ ಪದ್ಧತಿ ಜೊತೆ ಸೇರಿಸುವ ಅವೈಜ್ಞಾನಿಕ ವಿಧಾನ ವನ್ನು ತಡೆದು ಅಲೋಪತಿಕ್ ಔಷಧಿಗಳನ್ನು ಅಲೋಪತಿ ವೈದ್ಯರು ಮಾತ್ರ ವೃತ್ತಿಯಲ್ಲಿ ಬಳಸುವ ಪದ್ಧತಿ ಜಾರಿಗೊಳಿಸಬೇಕು ಎಂದವರು ಆಗ್ರಹಿಸಿದರು.

ಭಾರತೀಯ ವೈದ್ಯಕೀಯ ಸಂಘವು ಅಧುನಿಕ ವೈದ್ಯ ಪದ್ಧತಿಯನ್ನು ಗೌರವಿಸುವಷ್ಟೇ ಇತರ ವೈದ್ಯ ಪದ್ಧತಿಗಳನ್ನು ಗೌರವ ದಿಂದ ಕಾಣುತ್ತದೆ. ಆದರೆ ಬ್ರಿಡ್ಜ್ ಕೋರ್ಸ್ ಮುಖಾಂತರ ಇತರ ಪದ್ಧತಿಯವರು ಆಧುನಿಕ ಅಲೋಪತಿ ವೈದ್ಯ ಪದ್ಧತಿಯನ್ನು ವೃತ್ತಿಯಲ್ಲಿ ಅನುಸರಿಸಲು ಅವಕಾಶ ನೀಡುವುದನ್ನು ವಿರೋಧಿಸುತ್ತದೆ. ಏಕೆಂದರೆ ಇದು ಅಧುನಿಕ ವೈದ್ಯ ಪದ್ಧತಿಗೆ ಮಾರಕವಾಗಲಿದೆ. ಇಂತಹ ಅರೆ ಬೆಂದ ವೈದ್ಯರ ಸಂಖ್ಯೆ ಹೆಚ್ಚಾಗಿ ಮುಂದಿನ ದಿನಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆಯಿಂದಾಗಿಯೇ ಆಗುವ ಸಾವು ನೋವುಗಳ ಸಂಖ್ಯೆಹೆಚ್ಚಾಗಬಹುದು. ಇದರಿಂದ ಜನರ ಜೀವದ ಜೊತೆ ಚೆಲ್ಲಾಟವಾಡಿದಂತಾಗುತ್ತದೆ. ಈ ರೀತಿಯ ನೀತಿಗಳನ್ನು ಸರಕಾರ ಜಾರಿಗೊಳಿಸದಿದ್ದರೆ ಉತ್ತಮ ಎಂದು ಡಾ.ಶಿವ ಕುಮಾರ್ ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಐಎಂಎ ಹಿರಿಯ ಉಪಾಧ್ಯಕ್ಷ ಡಾ.ಪ್ರಸನ್ನ ಶಂಕರ್, ಜಂಟಿ ಕಾರ್ಯದರ್ಶಿ ಡಾ.ವೆಂಕಟಾಚಲಪತಿ, ಕರ್ನಾಟಕ ಘಟಕದ ಪದಾಧಿಕಾರಿಗಳಾದ ಡಾ.ಮಧುಸೂದನ್, ಹಿರಿಯ ಉಪಾಧ್ಯಕ್ಷ ಡಾ.ಪ್ರಸನ್ನ ಶಂಕರ್, ಡಾ.ಲಕ್ಷ್ಮಣ್, ಡಾ.ಗೀತಾ ಡೊಪ್ಪ, ಡಾ.ಸದಾನಂದ ಪೂಜಾರಿ ಮತ್ತು ಮಂಗಳೂರು ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ ಡಿ., ಪದಾಧಿಕಾರಿಗಳಾದ ಡಾ.ರಂಜನ್ ರಾವ್, ಡಾ.ಅರ್ಚನಾ ಬೋಳೂರು, ಡಾ.ನಂದ ಕಿಶೋರ್ ಬಿ. ಮತ್ತಿತರರು ಉಪಸ್ಥಿತರಿದ್ದರು.

Similar News