ಲಲಿತಾ ಕಲಾ ಅಕಾಡಮಿಯಿಂದ ಕಲಾವಿದರಿಗೆ ಪ್ರೋತಾಹ ಅಗತ್ಯ: ಸುರೇಶ್ ವಾಗ್ಮೋರೆ

ಕನ್ನಡ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ‘ಮೀರಾಜ್-2023'

Update: 2023-03-12 05:15 GMT

ಬೆಂಗಳೂರು, ಮಾ.11: ಬ್ಯಾರೀಸ್ ಗ್ರೂಪ್ ಪ್ರಾಯೋಜ ಕತ್ವದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಆ್ಯಂಡ್ ಕಲ್ಚರ್(ಐಐಐಎಸಿ) ಬೆಂಗಳೂರಿನಲ್ಲಿ ಸಂಘಟಿಸಿರುವ ಅಂತರ್‌ರಾಷ್ಟ್ರೀಯ ಪ್ರಥಮ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ‘ಮೀರಾಜ್-2023’ ಕನ್ನಡ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಕ್ಯಾಲಿಗ್ರಫಿ ಎಂದರೆ ಅರೆಬಿಕ್, ಚೀನಾ, ಜಪಾನ್, ಪರ್ಷಿಯನ್, ದೇವನಾಗರಿ ಭಾಷೆಗಳಿಗೆ ಸೀಮಿತ ಎಂದು ಭಾವಿಸಲಾಗುತ್ತಿತ್ತು. ಆದರೆ, ‘ಮೀರಾಜ್-2023’ ಭಾರತದಲ್ಲಿರುವ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿರುವ ಕ್ಯಾಲಿಗ್ರಫಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಿದೆ.

ಕನ್ನಡದ ನೆಲದಲ್ಲಿ ಆಯೋಜನೆಗೊಂಡಿರುವ ಈ ಪ್ರಥಮ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನದ ಕುರಿತು ಕನ್ನಡದ ಕ್ಯಾಲಿಗ್ರಫಿ ಕಲಾವಿದರಾದ ಸುರೇಶ್ ವಾಗ್ಮೋರೆ ಹಾಗೂ ಅಮಿನಿಷ ಎಸ್.ನಾಗನೂರ್ ತಮ್ಮ ಅನಿಸಿಕೆಗಳನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ. 1992ರಲ್ಲಿ ನಾನು ದಾವಣಗೆರೆಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಕ್ಯಾಲಿಗ್ರಫಿಯ ವಿಷಯ ಇತ್ತು. ನಮಗೆ ಕ್ಯಾಲಿಗ್ರಫಿ ಮಾಡಲು ಅಗತ್ಯವಿರುವ ಸಲಕರಣೆಗಳು ಇರುತ್ತಿರಲಿಲ್ಲ. ಬಿದಿರು ಹಾಗೂ ಇಂಕ್‌ಪೆನ್ ಅನ್ನು ಬಳಸಿ ಕ್ಯಾಲಿಗ್ರಫಿ ಬರೆಯಲು ಪ್ರಯತ್ನ ಮಾಡುತ್ತಿದ್ದೆವು. ಶಿಕ್ಷಣದ ನಂತರ ಬೆಂಗಳೂರಿನಲ್ಲಿ ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ಆದರೆ, ಕ್ರಾಲಿಗ್ರಫಿಯತ್ತ ನನ್ನ ಆಕರ್ಷಣೆ ಕಡಿಮೆಯಾಗಿರಲಿಲ್ಲ ಎಂದು ಸುರೇಶ್ ವಾಗ್ಮೋರೆ ಹೇಳಿದರು.

ಕ್ಯಾಲಿಗ್ರಫಿಗೆ ಅಗತ್ಯವಿದ್ದ ಸಲಕರಣೆಗಳು ತುಂಬಾ ದುಬಾರಿಯಾಗಿದ್ದವು. ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಭಾರತದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಇದರ ಉಪಕರಣಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಆದುದರಿಂದ, ನಾನು ನನ್ನದೇ ಉಪಕರಣಗಳನ್ನು ಸಿದ್ಧಪಡಿಸಿದೆ. ಇವತ್ತು ನಮ್ಮ ದೇಶದ ಕೇರಳದಿಂದ ದಿಲ್ಲಿಯವರೆಗೆ ಹಾಗೂ ವಿದೇಶಗಳಿಗೂ ಅವುಗಳು ಸರಬರಾಜು ಆಗುತ್ತಿವೆ ಎಂದು ಮಾಹಿತಿ ನೀಡಿದರು.

ಕನ್ನಡದಲ್ಲಿ ಕ್ಯಾಲಿಗ್ರಫಿ ತುಂಬಾ ಕಡಿಮೆ. ಚಲನಚಿತ್ರಗಳ ಪೋಸ್ಟರ್ ಹಾಗೂ ಪುಸ್ತಕಗಳ ಮುಖಪುಟಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ದೇವನಾಗರಿ ಹಾಗೂ ಇಂಗ್ಲಿಷ್ ಕ್ಯಾಲಿಗ್ರಫಿಗಳು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಬೆಳೆದಿವೆ. ಸರಿಯಾದ ಉಪಕರಣಗಳಿದ್ದರೆ ಮಾತ್ರ ಕ್ಯಾಲಿಗ್ರಫಿ ಮಾಡಲು ಸಾಧ್ಯ ಎಂದು ಸುರೇಶ್ ವಾಗ್ಮೋರೆ ಹೇಳಿದರು. ದೇವನಾಗರಿಯನ್ನು ಪಾಶ್ಚಿಮಾತ್ಯರು ಕಲಿಯುತ್ತಿದ್ದಾರೆ, ಬಳಸುತ್ತಿದ್ದಾರೆ. ಆದರೆ, ಕನ್ನಡ ಸೀಮಿತವಾಗಿ ಬಿಟ್ಟಿದೆ. ಕ್ಯಾಲಿಗ್ರಫಿ ಮೂಲಕ ಕನ್ನಡಕ್ಕೆ ಕೊಡುಗೆ ನೀಡಲು, ಅದನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು ಎಂಬುದು ನಮ್ಮ ಉದ್ದೇಶ. ಕನ್ನಡವನ್ನು ಈಗಿರುವುದಕ್ಕಿಂತ ಮತ್ತಷ್ಟು ಆಕರ್ಷಕವಾಗಿ, ಕ್ರಿಯಾತ್ಮಕವಾಗಿ ಬಳಸಬಹುದು ಎಂದು ಅವರು ಹೇಳಿದರು.

ಕನ್ನಡ ಕಲಾವಿದರಿಗೆ ಉತ್ತಮ ವೇದಿಕೆ: ಈ ಮೀರಾಜ್ ಪ್ರದರ್ಶನ ಕನ್ನಡ ಕಲಾವಿದರಿಗೆ ಪ್ರೋತ್ಸಾಹ ನೀಡಿದೆ. ಈ ಪ್ರದರ್ಶನದ ಉದ್ಘಾಟನೆ ದಿನ ಬಂದಿದ್ದ ಬಹಳಷ್ಟು ಮಂದಿ ಕನ್ನಡದ ಕ್ಯಾಲಿಗ್ರಫಿಯನ್ನು ನೋಡಿ ಆಶ್ಚರ್ಯಪಟ್ಟರು. ಕನ್ನಡವನ್ನು ಈ ರೀತಿಯೂ ಬರೆಯಬಹುದೇ ಎಂದು ಹುಬ್ಬೇರಿಸಿದರು. ಈ ವರ್ಷ ನವೆಂಬರ್‌ನಲ್ಲಿ ಕಲಾವಿದರು ಸೇರಿ ಕನ್ನಡ ಕ್ಯಾಲಿಗ್ರಫಿಯ ಪ್ರದರ್ಶನ ಏರ್ಪಡಿಸುವ ಚಿಂತನೆ ಇದೆ ಎಂದು ಸುರೇಶ್ ವಾಗ್ಮೋರೆ ತಿಳಿಸಿದರು.

ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದ ಕ್ಯಾಲಿಗ್ರಫಿ: ಬರವಣಿಗೆ, ಚಿತ್ರಕಲೆ ನನ್ನ ಆಸಕ್ತಿ ಹಾಗೂ ಹವ್ಯಾಸ. ನಾನು ಲೇಖನಿಯಲ್ಲಿ ಸರಿಯಾಗಿ ಬರೆಯುವುದಿಲ್ಲ. ಆದರೆ, ನನ್ನ ಕೈಗೆ ಕುಂಚ ಬಂದ ನಂತರ ಅದರಿಂದ ಸುಂದರವಾಗಿ ಬರೆಯುವುದನ್ನು ಪ್ರಾರಂಭಿಸಿದೆ. 1994ರಿಂದಲೂ ಈ ಹವ್ಯಾಸ ಇದೆ. ಆದರೆ, ಇದು ಕಲೆ ಎಂದು ಗೊತ್ತಿರಲಿಲ್ಲ ಎಂದು ಕ್ಯಾಲಿಗ್ರಫಿ ಕಲಾವಿದ ಅನಿಮಿಷಾ ಹೇಳಿದರು. ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದ ಕ್ಯಾಲಿಗ್ರಫಿ ಆರಂಭಿಸಿದ್ದು ನಾನು. ನನ್ನ ಬರವಣಿಗೆ ಶೈಲಿ ನೋಡಿ, ಹಲವಾರು ಯುವಕರು ಈ ಕಲೆಯ ಕಡೆ ಆಕರ್ಷಿತರಾದರು. ಬೆಂಗಳೂರು ತಂತ್ರಜ್ಞಾನದ ತವರು. ಇಲ್ಲಿ ಯಾವುದೆ ಹೊಸತು ಕಂಡುಬಂದರೆ ಕೂಡಲೇ ಅದನ್ನು ತಂತ್ರಜ್ಞಾನದ ಜೊತೆಗೆ ತಳುಕು ಹಾಕುವ ಹವ್ಯಾಸವಿದೆ ಎಂದು ಅವರು ತಿಳಿಸಿದರು.

ಮೊದಲು ಸೂಚನಾ ಫಲಕಗಳನ್ನು ಬಹಳಷ್ಟು ಸುಂದರವಾಗಿ ಬರೆಯುತ್ತಿದ್ದರು. ಆದರೆ, ಇತ್ತೀಚೆಗೆ ಎಲ್ಲ ಸೂಚನಾ ಫಲಕಗಳಲ್ಲಿ ಬಳಸುವ ಪದಗಳ ರಚನೆ, ಸ್ವರೂಪ ಒಂದೇ ರೀತಿ ಆಗಿದೆ. ಕನ್ನಡದಲ್ಲೂ ಹೊಸ ಬಗೆಯ ಅಕ್ಷರ ರೂಪಗಳನ್ನು ರಚನೆ ಮಾಡಬೇಕು ಎಂಬುದು ನಮ್ಮ ಬಯಕೆ. ಕನ್ನಡದವನಾಗಿ ಕನ್ನಡಕ್ಕೆ ಏನು ಕೊಟ್ಟಿದ್ದೀಯಾ ಎಂದು ನಾವು ಆಲೋಚನೆ ಮಾಡಬೇಕಿದೆ. ಮುಖ್ತಾರ್ ಅಹ್ಮದ್ ನೀಡಿದ ಸಹಕಾರದಿಂದಾಗಿ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು ಎಂದು ಅಮಿನಿಷ ಹೇಳಿದರು.

ಇಂದು ಕ್ಯಾಲಿಗ್ರಫಿ ಪ್ರದರ್ಶನಕ್ಕೆ ತೆರೆ;

ಬೆಂಗಳೂರು ನಗರದ ಬೃಂಗ್ಟನ್ ರಸ್ತೆ ಸಮೀಪದ ಪ್ರೆಸ್ಟೀಜ್ ಫಾಲ್ಕನ್ ಟವರ್ಸ್‌ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಅಂತರ್ ರಾಷ್ಟ್ರೀಯ ಪ್ರಥಮ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ರವಿವಾರ(ಮಾ.12) ಸಂಜೆ ಸಮಾಪನಗೊಳ್ಳಲಿದ್ದು, ವೀಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

Similar News