ಕಾಶ್ಮೀರ: ಯುವತಿಯ ಹತ್ಯೆಗೈದು ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ವಿಲೇವಾರಿ
ಶ್ರೀನಗರ, ಮಾ. 12: ವ್ಯಕ್ತಿಯೋರ್ವ 30 ವರ್ಷದ ಯುವತಿಯನ್ನು ಹತ್ಯೆಗೈದ ಬಳಿಕ ತಲೆ ಕತ್ತರಿಸಿ, ಮೃತದೇಹವನ್ನು ತುಂಡರಿಸಿ ಕೇಂದ್ರ ಕಾಶ್ಮೀರದ ಬುಡ್ಗಾಂವ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೂತು ಹಾಕಿದ ಘಟನೆ ನಡೆದಿದೆ.
ತನ್ನ 30 ವರ್ಷ ವಯಸ್ಸಿನ ಸಹೋದರಿ ಮಾರ್ಚ್ 7ರಿಂದ ನಾಪತ್ತೆಯಾಗಿದ್ದಾಳೆ ಎಂದು ಕೇಂದ್ರ ಕಾಶ್ಮೀರದ ಬುಡ್ಗಾಂವ್ ಜಿಲ್ಲೆಯ ಸೋಯಿಬಗ್‌ನ ತನ್ವೀರ್ ಅಹ್ಮದ್ ಖಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾರ್ಚ್ 8ರಂದು ತಿಳಿಸಿದ್ದಾರೆ.
ಕೋಚಿಂಗ್ ಕ್ಲಾಸ್‌ಗೆಂದು ಮಾರ್ಚ್ 7ರಂದು ಮನೆಯಿಂದ ತೆರಳಿದ್ದ ಯುವತಿ ಸಂಜೆಯಾದರೂ ಹಿಂದಿರುಗಿ ಬಂದಿರಲಿಲ್ಲ.
ನಾಪತ್ತೆ ಪ್ರಕರಣದ ದಾಖಲಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘‘ಪ್ರಕರಣಕ್ಕೆ ಸಂಬಂಧಿಸಿ ಬುಡ್ಗಾಂವ್‌ನ ಮೋಹಂದಪೋರಾದ ಸಬೀರ್ ಅಹ್ಮದ್ ವಾನಿ ಸೇರಿದಂತೆ ಹಲವು ಶಂಕಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ಸಂದರ್ಭ ಶಬೀರ್ ನಾಪತ್ತೆಯಾದ ಯುವತಿಯ ಅಪಹರಣ ಹಾಗೂ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
‘‘ಆಕೆಯ ಹತ್ಯೆಗೈದ ಬಳಿಕ ತಲೆ ಕತ್ತರಿಸಿದೆ. ಆಕೆಯ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದೆ’’ ಎಂದು ವಾನಿ ತಿಳಿಸಿದ್ದಾನೆ. ನಾವು ಯುವತಿಯನ್ನು ಹತ್ಯೆಗೈದಿರುವ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ವಾನಿ ಯುವತಿಯ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತು ಹಾಕಿದ್ದಾನೆ’’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಆರೋಪಿ ಬಹಿರಂಗಪಡಿಸಿದ ಬಳಿಕ ಮೃತದೇಹದ ತುಂಡುಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.