ಹೊಸ ವಿಮಾನಯಾನ ಸಂಸ್ಥೆ ಆರಂಭಿಸಿದ ಸೌದಿ ಅರೆಬಿಯಾ

Update: 2023-03-12 17:21 GMT

ರಿಯಾದ್, ಮಾ.12: ಗಲ್ಫ್ ನ ಇತರ ದೇಶಗಳೊಂದಿಗೆ ಸ್ಪರ್ಧಿಸಲು ಮತ್ತು ರಾಜಧಾನಿ ರಿಯಾದ್ ಅನ್ನು ಜಾಗತಿಕ ವಾಯುಯಾನ ಕೇಂದ್ರವಾಗಿ ಬದಲಿಸುವ ಯೋಜನೆಯ ಭಾಗವಾಗಿ ಹೊಸ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಆರಂಭಿಸುವುದಾಗಿ ಸೌದಿ ಅರೆಬಿಯಾ ರವಿವಾರ ಘೋಷಿಸಿದೆ.

ರಿಯಾದ್ ಏರ್ ಎಂದು ಹೆಸರಿಸಿರುವ ಈ ವಿಮಾನಯಾನ ಸಂಸ್ಥೆಯು 2030ರ ವೇಳೆಗೆ ವಿಶ್ವದಾದ್ಯಂತದ 100ಕ್ಕೂ ಅಧಿಕ ಸ್ಥಳಗಳಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಮಹಾತ್ವಾಕಾಂಕ್ಷೆಯ ‘ ವಿಷನ್ 2030’ರ ಭಾಗವಾಗಿ ಈ ವಿಮಾನಯಾನ ಸಂಸ್ಥೆಯನ್ನು ಆರಂಭಿಸಲಾಗಿದ್ದು ಈ ದಶಕದ ಅಂತ್ಯದ ವೇಳೆಗೆ ವಾರ್ಷಿಕ 330 ದಶಲಕ್ಷ ಪ್ರಯಾಣಿಕರು ಈ ವಿಶ್ವದರ್ಜೆಯ ವಿಮಾನಯಾನ ಸಂಸ್ಥೆಯ ಮೂಲಕ ಪ್ರಯಾಣಿಸಲಿದ್ದಾರೆ. ಜತೆಗೆ, ಪ್ರತೀ ವರ್ಷ 5 ದಶಲಕ್ಷ ಟನ್ಗಳವರೆಗೆ ಸರಕನ್ನು ಸಾಗಿಸುವ ಗುರಿ ಹೊಂದಲಾಗಿದೆ ಎಂದು  ಅಧಿಕಾರಿಗಳನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜೆನ್ಸಿ(ಎಸ್ಪಿಎ) ವರದಿ ಮಾಡಿದೆ.

ಅಬುಧಾಬಿ ಮೂಲದ ಇತಿಹಾದ್ ಏರ್ವೇಸ್ನ ಮಾಜಿ ಮುಖ್ಯಸ್ಥ ಟೋನಿ ಡಗ್ಲಾಸ್ರನ್ನು ರಿಯಾದ್ ಏರ್ ಸಂಸ್ಥೆಯ ಸಿಇಒ ಆಗಿ ನೇಮಕಗೊಳಿಸಲಾಗಿದೆ.

Similar News