ಕೇಂದ್ರ ಆಯವ್ಯಯದಲ್ಲಿ ಕಾಣೆಯಾದ ರಾಷ್ಟ್ರೀಯ ಶಿಕ್ಷಣ ನೀತಿ

Update: 2023-03-13 09:14 GMT

ಫೆಬ್ರವರಿಯಲ್ಲಿ ಕೇಂದ್ರದ ಆರ್ಥಿಕ ಸಚಿವರು ಮಂಡಿಸಿದ ಆಯವ್ಯಯ ಬಹು ಚರ್ಚಿತ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಅಥವಾ ಶಾಲಾ ಶಿಕ್ಷಣದ ಜ್ವಲಂತ 

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ದಯನೀಯವಾಗಿ ಸೋತಿದೆ. ಈ ಆಯವ್ಯಯ ಕುರಿತಂತೆ ವಸ್ತುನಿಷ್ಠವಾಗಿ ವಿಮರ್ಶಿ ಸುವ ಆಶಯವನ್ನು ಈ ಲೇಖನ ಹೊಂದಿದೆ. ಕೇಂದ್ರ ಹಣಕಾಸು ಸಚಿವರು 2023-24 ನೇ ಹಣಕಾಸು ವರ್ಷಕ್ಕೆ ಮಂಡಿಸಿದ ಭಾರತ ಒಕ್ಕೂಟದ ಆಯವ್ಯಯದಲ್ಲಿ, ಭಾರತದ ಸಂವಿಧಾನ ಎಲ್ಲಾ ಮಕ್ಕಳಿಗೆ ಕೊಡಮಾಡಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಗೌರವಿಸಿ ಜಾರಿಗೊಳಿಸಲು ರೂಪಿಸಲಾಗಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ2009 ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಯಾವ ಪ್ರಸ್ತಾಪವೂ ಇಲ್ಲ.

ಬಹಳ  ಆಶ್ಚರ್ಯವೆಂದರೆ, ಬಹು ಚರ್ಚಿತ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸುವ ಯಾವ ಪ್ರಸ್ತಾಪವು ಆಯವ್ಯಯದಲ್ಲಿಲ್ಲ.ಈ ಆಯವ್ಯಯ, ಎಲ್ಲಾ ಮಕ್ಕಳಿಗೆ ಸಮಾನತೆಯ ನೆಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಅಗತ್ಯವಾದ ಹಣಕಾಸು ಸಂಪನ್ಮೂಲಗಳನ್ನು ಒದಗಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಅವುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡೋಣ.

ನಮಗೆಲ್ಲ ತಿಳಿದಿರುವಂತೆ , ಕೋವಿಡ್ -19 ಸಾಂಕ್ರಾಮಿಕವು ಮಕ್ಕಳ ಕಲಿಕೆಯ ಮೇಲೆ, ಅದರಲ್ಲೂ, ಗ್ರಾಮೀಣ ಹಾಗೂ ನಗರ ಪ್ರದೇಶದ ಅವಕಾಶವಂಚಿತ ಹಾಗೂ ಸಮಾಜದಲ್ಲಿ ಅಂಚಿನಲ್ಲಿರುವ ಕೆಳ ಸಮುದಾಯಗಳ ಮಕ್ಕಳ ಕಲಿಕೆಯ ಮೇಲೆ ದೊಡ್ಡಮಟ್ಟದ ಪರಿಣಾಮ ಬೀರಿದೆ. ಇದು ಹೆಣ್ಣುಮಕ್ಕಳ ವಿಷಯದಲ್ಲಿ ಮತ್ತಷ್ಟು ಶೋಚನೀಯವಾಗಿದೆ. ಒಟ್ಟಾರೆ,ಶಿಕ್ಷಣ ವ್ಯವಸ್ಥೆಯು ಸಾಂಕ್ರಾಮಿಕ ಹೊಡೆತದಿಂದ ಉಂಟಾದ ಕಲಿಕಾ ವಂಚನೆಯಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಹಣಕಾಸು ಸಚಿವರು ಈ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಲಿಕೆಯನ್ನು ಸಮಗ್ರವಾಗಿ ಅರ್ಥೈಸಿ ಅಗತ್ಯ ಸಾಂಸ್ಥಿಕ ಸುಧಾರಣೆಗಳ ಮೂಲಕ ಒಟ್ಟು ಕಲಿಕಾ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸಲು ಆಯವ್ಯಯದಲ್ಲಿ ಅಗತ್ಯದ ಪ್ರಮಾಣದ ಹಣಕಾಸನ್ನು ಒದಗಿಸುವಲ್ಲಿ ಅವರು ಸೋತಿದ್ದಾರೆ. ಕೇವಲ ತೋರಿಕೆಗೆ ಓದುವ ಸಂಸ್ಕೃತಿ ಬಗ್ಗೆ ಪ್ರಸ್ತಾಪಿಸಿರುವುದು ಕಲಿಕಾ ವ್ಯವಸ್ಥೆಯ ಬಗ್ಗೆ ಅವರಿಗಿರುವ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ. ಇದು ಅತ್ಯಂತ ಶೋಚನೀಯ. 

2022-23 ರ ಆರ್ಥಿಕ ಸಮೀಕ್ಷೆ ಸೂಚಿಸುವಂತೆ, ಭಾರತದಲ್ಲಿ ಶಿಕ್ಷಣಕ್ಕೆ ದೊರಕಿರುವ ಶೇಕಡಾವಾರು ಜಿಡಿಪಿಯು ಕಳೆದ ನಾಲ್ಕು ಸತತ ಹಣಕಾಸು ವರ್ಷಗಳಿಂದ ಶೇ.2.9 ರಲ್ಲಿಯೇ ಸ್ಥಗಿತಗೊಂಡಿದೆ. ಒಕ್ಕೂಟದ ಒಟ್ಟು ಆಯವ್ಯಯದಲ್ಲಿ, ಶಿಕ್ಷಣಕ್ಕೆ ನೀಡಲಾದ ಶೇಕಡಾವಾರು ಹಣ 2015-16 ರಲ್ಲಿ ಶೇ.10.4ರಷ್ಟಾದರೆ, 2022-23ಕ್ಕೆ ಶೇ.9.5 ಕ್ಕೆ ಇಳಿದಿದೆ. ಇನ್ನು ಸಾಮಾಜಿಕ ಸೇವೆಗಳ ಕೊಡಮಾಡುತ್ತಿರುವ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ವೆಚ್ಚವು 2015-16 ರಲ್ಲಿ ಶೇ.42.8 ರಿಂದ 2022-23ಕ್ಕೆ 35.5 ಕ್ಕೆ ಕುಸಿದಿದೆ ಎಂದು ಸಮೀಕ್ಷೆಯು ತೋರಿಸಿದೆ. ಈ ಕೆಳಗಿನ ಕೋಷ್ಟಕವು ಕಳೆದ 6-7 ವರ್ಷಗಳಲ್ಲಿ ಒಕ್ಕೂಟ ಸರಕಾರವು ದೇಶದ ನಿವ್ವಳ ಉತ್ಪನ್ನದಲ್ಲಿ (ಜಿಡಿಪಿ) ಶಿಕ್ಷಣಕ್ಕೆ ವ್ಯಯಿಸುತ್ತಿರುವ ಶೇಕಡವಾರು ಮೊತ್ತ ಹಾಗೂ ಒಕ್ಕೂಟದ ಒಟ್ಟು ಆಯವ್ಯಯದಲ್ಲಿ ವ್ಯಯಿಸುತ್ತಿರುವ ಶೇಕಡಾವಾರು ಮೊತ್ತವನ್ನು ವನ್ನು ಸೂಚಿಸುತ್ತದೆ. 
 
ಒಂದೆಡೆ, ಯುಡೈಸ್ ( UDISE) ದತ್ತಾಂಶದ ಪ್ರಕಾರ, ಸರಕಾರಿ ಶಾಲೆಗಳಲ್ಲಿ ದಾಖಲಾತಿಯು 2020-21ರಲ್ಲಿ 13,49,04,560ರಿಂದ 2021-22ರಲ್ಲಿ 14, 32,40,480 ಕ್ಕೆ ಏರಿದೆ. ಈ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಉಳಿಸಿಕೊಂಡು ಮುಂದುವರಿಸಲು ಸಂಪನ್ಮೂಲದ ಅಗತ್ಯವಿದೆ. ಮತ್ತೊಂದೆಡೆ, ಸರಕಾರಿ ಶಾಲೆಗಳ ಸಂಖ್ಯೆ 2020-21ರಲ್ಲಿ 10,32,049 ರಿಂದ 2021-22ರಲ್ಲಿ 10,22,386ಕ್ಕೆ ಇಳಿದಿದೆ. ಒಂದೇ ವರ್ಷದಲ್ಲಿ ಸುಮಾರು 9,663 ಶಾಲೆಗಳನ್ನು ಮುಚ್ಚಲಾಗಿದೆ. 2021-22ರ ಶೈಕ್ಷಣಿಕ ವರ್ಷದಲ್ಲಿ ದೇಶದಲ್ಲಿ ಸುಮಾರು 12.5 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಆಯವ್ಯಯದಲ್ಲಿ ಗಣನೀಯ ಹಣಕಾಸು ಒದಗಿಸದಿದ್ದರೆ, ಅದು ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಡುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.

ಹಣಕಾಸು ಸಚಿವರು, ಈ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬದಲು, ಮುಂದಿನ ಮೂರು ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,000 ಶಿಕ್ಷಕರನ್ನು ನೇಮಿಸುವುದಾಗಿ ಪ್ರಸ್ತಾಪಿಸಿದ್ದಾರೆ. ದೇಶದಾದ್ಯಂತ ಇರುವ 10,22,386 ಸಾರ್ವಜನಿಕ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 12.5 ಲಕ್ಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಈ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಅವಕಾಶ ವಂಚಿತ ಮಕ್ಕಳ ಬಗ್ಗೆ ಏನನ್ನೂ ಪ್ರಸ್ತಾಪಿಸದೆ, ಕೇವಲ ಬೆರಳೆಣಿಕೆಯಷ್ಟಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಸರಕಾರದ ಪ್ರಸ್ತಾಪ ಆರ್‌ಟಿಇ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ಹಿಂದೆ, ಶಿಕ್ಷಣದ ನಿರಾಕರಣೆಯ ಮೂಲಕ, ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗೀಕರಣಕ್ಕೆ ಮಣೆ ಹಾಕುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆ.

ಇನ್ನು, ಆಯವ್ಯಯದಲ್ಲಿ ನೀಡಿರುವ ಹಣದ ವಿವರಗಳನ್ನು ಗಮನಿಸೋಣ. ಒಟ್ಟು ಆಯವ್ಯಯದಲ್ಲಿ ಶಿಕ್ಷಣಕ್ಕೆ 2023-24ನೇ ಸಾಲಿಗೆ ರೂ. 112899 ಕೋಟಿಯನ್ನು ಮೀಸಲಿಡಲಾಗಿದೆ ಇದು ಕಳೆದ ವರ್ಷಕ್ಕಿಂತ ಶೇ.8.3 ಜಾಸ್ತಿಯಾಗಿದೆ. ಇದರಲ್ಲಿ ಶಾಲಾ ಶಿಕ್ಷಣ  ಮತ್ತು ಸಾಕ್ಷರತಾ ಇಲಾಖೆಗೆ ರೂ. 68,804 ಕೋಟಿಯನ್ನು ಒದಗಿಸಲಾ ಗಿದೆ. ಅಂದರೆ ಕಳೆದ ವರ್ಷಕ್ಕಿಂತ ರೂ.5,356 ಕೋಟಿ ಹೆಚ್ಚಾಗಿದ್ದು ಶೇಕಡವಾರು 8.4 ಜಾಸ್ತಿಯಾಗಿದೆ. ಒಟ್ಟು ಆಯವ್ಯಯದಲ್ಲಿ ಶಿಕ್ಷಣಕ್ಕೆ ದೊರೆತ ಶೇಕಡವಾರು ಹಣ 2.6 ರಿಂದ 2.5 ಕ್ಕೆ ಇಳಿದಿದೆ. ಒಟ್ಟು ಆಯವ್ಯಯದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ದೊರಕಿದ ಬಾಬತ್ತಿನ ಶೇಕಡಾವಾರು 1.61 ರಿಂದ 1.53ಕ್ಕೆ ಇಳಿದಿದೆ.

ಇನ್ನು ಆಯವ್ಯಯದಲ್ಲಿ ಕೇಂದ್ರ ಪ್ರಾಯೋಜಿತ ಶಾಲಾ ಶಿಕ್ಷಣ ಕಾರ್ಯಕ್ರಮಗಳಿಗೆ ಒದಗಿಸಲಾಗಿರುವ ನೈಜ ಹಂಚಿಕೆಗಳನ್ನು ನೋಡೋಣ. ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನದ ಸಾಧನವಾಗಿರುವ ಸಮಗ್ರ ಶಿಕ್ಷಾ ಅಭಿಯಾನಕ್ಕೆ ರೂ.37,453 ಕೋಟಿಗಳನ್ನು ಮೀಸಲಿಡಲಾಗಿದೆ.ಇದು ಕಳೆದ ಸಾಲಿನ ಮೊತ್ತಕ್ಕಿಂತ ರೂ.70 ಕೋಟಿಗಳ ಹೆಚ್ಚಳವಾಗಿದೆ. ಆದರೆ, ಇದು ಅತ್ಯಲ್ಪ ಹೆಚ್ಚಳವಾಗಿದ್ದು ಪ್ರತಿಶತ 0.19 ರಷ್ಟು ಮಾತ್ರ ಹೆಚ್ಚಿದೆ. ಆತಂಕದ ಅಂಶವೆಂದರೆ ಸಮಗ್ರ ಶಿಕ್ಷಣಕ್ಕೆ ಮೀಸಲಿಟ್ಟಿರುವ ಒಟ್ಟು ಮೊತ್ತದ ಶೇ.61 ರಷ್ಟನ್ನು ಶಿಕ್ಷಣದ ತೆರಿಗೆಯಿಂದ (Education Cess) ಭರಿಸಲಾಗು ತ್ತದೆ.

ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಎಂದು ಮರುನಾಮಕರಣ ಮಾಡಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಆಯವ್ಯಯದಲ್ಲಿ ನೀಡಿರುವ ಮೊತ್ತ ಕಳೆದ ಸಾಲಿಗೆ ಹೋಲಿಸಿದರೆ ರೂ.1367 ಕೋಟಿ ಜಾಸ್ತಿಯಾಗಿದೆ. ಆದರೆ, ಇದು ಕಳೆದ ಸಾಲಿನ ಪರಿಷ್ಕೃತ ಆಯವ್ಯಯದ ಮೊತ್ತಕ್ಕಿಂತ ರೂ.1,200 ಕೋಟಿ ಕಡಿಮೆ ಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಒದಗಿಸಲು ಭರವಸೆ ನೀಡಿ 2 ವರ್ಷ ಕಳೆದಿದೆ. ಈ ಅತ್ಯಲ್ಪ ಹೆಚ್ಚಳದಿಂದ ಯಾವ ರೀತಿಯ ಪೋಷಣ್ ಶಕ್ತಿ ನಿರ್ಮಾಣ್ ಆಗಬಹುದೆಂದು ಜನರು ತೀರ್ಮಾನಿಸಬೇಕಿದೆ.

ಒಟ್ಟಾರೆಯಾಗಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಪುನರುಚ್ಚರಿಸಿರುವಂತೆ ಶಿಕ್ಷಣಕ್ಕೆ ಜಿಡಿಪಿಯ ಶೇ.6 ರಷ್ಟು ಹೂಡಿಕೆಯನ್ನು ಮುಟ್ಟಲು ಮೊದಲ ಹೆಜ್ಜೆ ಇಡುವಲ್ಲಿ ಕೇಂದ್ರ ಆಯವ್ಯಯ ಮತ್ತೊಮ್ಮೆ ವಿಫಲವಾಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ2009 (ಆರ್‌ಟಿಇ ಕಾಯ್ದೆ)ರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದ್ಧವಾಗಿರುವ ಪೂರ್ವ- ಪ್ರಾಥಮಿಕ ಮತ್ತು ಉನ್ನತ ಪ್ರೌಢ ಶಿಕ್ಷಣವನ್ನು ಒದಗಿಸಲು ಶಿಕ್ಷಣ ಹಕ್ಕು ಕಾಯ್ದೆಯನ್ನು ಕೆಳಮುಖ ಮತ್ತು ಮೇಲ್ಮುಖವಾಗಿ ವಿಸ್ತರಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಈ ಆಯವ್ಯಯ ಸಂಪೂರ್ಣ ಸೋತಿದೆ. ಬುನಾದಿ ಶಿಕ್ಷಣವನ್ನು ಸಮಾನತೆಯ ನೆಲೆಯಲ್ಲಿ ಗಟ್ಟಿಗೊಳಿಸದೆ, ಕೇವಲ ಕೃತಕ ಬುದ್ಧಿಮತ್ತೆಗೆ ಒತ್ತು ನೀಡುವ ಆಯವ್ಯಯದ ಪ್ರಸ್ತಾವನೆ, ಶಿಕ್ಷಣದಲ್ಲಿ ಅಸಮಾನತೆ, ತಾರತಮ್ಯ ಮತ್ತು ಪ್ರತ್ಯೇಕತೆಯನ್ನು ಮತ್ತಷ್ಟು ಹೆಚ್ಚಸಲಿದ್ದು , ಉಳ್ಳವರಿಗೆ ಒಂದು ಬಗೆಯ ಮತ್ತು ಇಲ್ಲದರಿಗೆ ಮತ್ತೊಂದು ಬಗೆಯ ಶಿಕ್ಷಣವನ್ನು ಕೊಡಮಾಡುವ ತಾರತಮ್ಯ ನೀತಿಯ ಮುಂದವರಿಕೆಯಾಗಿದೆ.

Similar News