2018-22ರ ನಡುವೆ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರನ ಸ್ಥಾನ ಉಳಿಸಿಕೊಂಡ ಭಾರತ

Update: 2023-03-13 18:18 GMT

ಹೊಸದಿಲ್ಲಿ, ಮಾ. 13: 2013-17 ಹಾಗೂ 2018-22ರ ನಡುವೆ ತನ್ನ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ. 11ರಷ್ಟು ಕುಸಿತವಾಗಿದ್ದರೂ 2018-22 ನಡುವಿನ 5 ವರ್ಷಗಳ ಅವಧಿಯಲ್ಲಿ ಭಾರತ ವಿಶ್ವದ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿ ತನ್ನ ಸ್ಥಾನವನ್ನು  ಉಳಿಸಿಕೊಂಡಿದೆ ಎಂದು ಸ್ವೀಡಿಷ್ ಚಿಂತನಾ ಚಿಲುಮೆ ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ತಿಳಿಸಿದೆ. 

2013-17 ಹಾಗೂ 2018-22ರ ಎರಡು ಅವಧಿಯಲ್ಲೂ  ರಶ್ಯ ಭಾರತಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಆಮದು ಮಾಡುವ ದೇಶವಾಗಿತ್ತು. ಆದರೆ, ಭಾರತದ ಒಟ್ಟು ಶಸ್ತ್ರಾಸ್ತ್ರ ಆಮದಿನ ಇದರ ಪಾಲು ಶೇ. 64ರಿಂದ 45ಕ್ಕೆ ಕುಸಿದಿತ್ತು. ಇದೇ ವೇಳೆ 2018-22ರ ನಡುವೆ ಫ್ರಾನ್ಸ್ ಎರಡನೇ ಅತಿ ದೊಡ್ಡ ಪೂರೈಕೆದಾರನಾಗಿ ಹೊರ ಹೊಮ್ಮಿತ್ತು. 

ಎಸ್‌ಐಪಿಆರ್‌ಐ ದತ್ತಾಂಶದ ಪ್ರಕಾರ 2018-22ರ ಅವಧಿಯಲ್ಲಿ 10 ಶಸ್ತ್ರಾಸ್ತ್ರ ರಫ್ತುದಾರರಲ್ಲಿ ರಶ್ಯ, ಫ್ರಾನ್ಸ್ ಹಾಗೂ ಇಸ್ರೇಲ್-ಈ ಮೂರು ದೇಶಗಳಿಗೆ ಭಾರತ ಅತಿ ದೊಡ್ಡ ಶಸ್ತ್ರಾಸ್ತ್ರ ಮಾರುಕಟ್ಟೆಯಾಗಿತ್ತು. ದಕ್ಷಿಣ ಕೊರಿಯಾಕ್ಕೆ ಎರಡನೇ ಅತಿ ದೊಡ್ಡ,   ಶಸ್ತ್ರಾಸ್ತ್ರ ರಫ್ತುದಾರನ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಕ್ಕೆ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಿತ್ತು. 

ಇದೇ ಅವಧಿಯಲ್ಲಿ ಭಾರತ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುಗಾರನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿತು. ಅನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ. ಭಾರತದ ಆಮದಿನಲ್ಲಿ ರಶ್ಯದ ಶೇ. 45 ಪಾಲು ಇದೆ. ಅನಂತರ ಫ್ರಾನ್ಸ್‌ನ ಶೇ. 29, ಅಮೆರಿಕದ ಶೇ. 11 ಪಾಲು ಇದೆ. ಇದೇ ಸಂದರ್ಭ ರಶ್ಯ ಹಾಗೂ ಚೀನಾದ ಬಳಿಕ ಭಾರತ ಮ್ಯಾನ್ಮಾರ್‌ಗೆ ಅತಿ ಹೆಚ್ಚು ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡುವ ದೇಶವಾಗಿತ್ತು. ಮ್ಯಾನ್ಮಾರ್‌ನ ಶೇ. 14 ಶಸ್ತ್ರಾಸ್ತ್ರವನ್ನು ಭಾರತ ಪೂರೈಕೆ ಮಾಡುತ್ತದೆ. 

‘‘ಪಾಕಿಸ್ತಾನ ಹಾಗೂ ಚೀನಾದೊಂದಿಗಿನ ಭಾರತದ ಬಿಕ್ಕಟ್ಟು ಶಸ್ತ್ರಾಸ್ತ್ರ ಆಮದು ಬೇಡಿಕೆಯನ್ನು ಹೆಚ್ಚಿಸಿತ್ತು. 2018-22ರಲ್ಲಿ  ಜಾಗತಿಕ ಒಟ್ಟು ಶಸ್ತ್ರಾಸ್ತ್ರ ಆಮದಿನ ಶೇ. 11 ಪಾಲಿನೊಂದಿಗೆ ಭಾರತ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿತ್ತು.  1993-2022 ಅವಧಿಯಲ್ಲಿ ಕೂಡ ಭಾರತ ಈ  ಸ್ಥಾನವನ್ನು ಉಳಿಸಿಕೊಂಡಿತ್ತು.  2013-17 ಹಾಗೂ 2018-22ರ ನಡುವೆ ಶಸ್ತ್ರಾಸ್ತ್ರ ಆಮದು ಶೇ. 11 ಕುಸಿತ ಕಂಡರೂ ಅದು ತನ್ನ ಸ್ಥಾನವನ್ನು ಉಳಿಸಿಕೊಂಡಿತ್ತು’’ ಎಂದು ಜಾಗತಿಕ ಶಸ್ತ್ರಾಸ್ತ್ರ ವಗಾವಣೆಯ ಕುರಿತ ಎಸ್‌ಐಪಿಆರ್‌ಐ ಸೋಮವಾರ ಪ್ರಕಟಿಸಿದ ಹೊಸ ದತ್ತಾಂಶ ತಿಳಿಸಿದೆ. 

ಭಾರತದ ಪ್ರಮುಖ ಆಯುಧ ಪೂರೈಕೆದಾರರಾಗಿ ರಶ್ಯಾದ ಸ್ಥಾನ ಇತರ ಪೂರೈಕೆ ರಾಷ್ಟ್ರಗಳ ಪ್ರಬಲ ಪೈಪೋಟಿ, ಭಾರತದ ಶಸ್ತ್ರಾಸ್ತ್ರ ಉತ್ಪಾದನೆಯ ಏರಿಕೆ ಹಾಗೂ 2022ರಿಂದ ಉಕ್ರೇನ್‌ನ ಆಕ್ರಮಣದಿಂದಾಗಿ ಒತ್ತಡಕ್ಕೆ ಒಳಗಾಗಿದೆ ಎಂದು ವರದಿ ಗಮನ ಸೆಳೆದಿದೆ. 

Similar News