ಇಸ್ಲಾಮಾಬಾದ್ ಪೊಲೀಸರಿಂದ ಇಂದು ಇಮ್ರಾನ್ ಖಾನ್ ಬಂಧನ ಸಾಧ್ಯತೆ: ವರದಿ

Update: 2023-03-14 03:27 GMT

ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಬಂಧಿಸುವಂತೆ ಇಸ್ಲಾಮಾಬಾದ್ ಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ 24 ಗಂಟೆಗಳ ಒಳಗಾಗಿ ಇಸ್ಲಾಮಾಬಾದ್ ಪೊಲೀಸರು, ಝಮನ್ ಪಾರ್ಕ್‌ಗೆ ಭೇಟಿ ನೀಡಿ ಮಾಜಿ ಪ್ರಧಾನಿಯನ್ನು ಬಂಧಿಸಲಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ರಾಜಧಾನಿಯಲ್ಲಿ ನ್ಯಾಯಾಲಯವೊಂದರ ನ್ಯಾಯಾಧೀಶೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಖಾನ್ ವಿರುದ್ಧ ಇಸ್ಲಾಮಾಬಾದ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಆಗಸ್ಟ್ 20ರಂದು ಎಫ್-9 ಪಾರ್ಕ್ ನಲ್ಲಿ ನಡೆದ ರ್ಯಾಲಿಯ ವೇಳೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಝೇಬಾ ಚೌಧರಿಯವರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಖಾನ್ ವಿರುದ್ಧ ಕೇಸು ದಾಖಲಾಗಿದೆ.

ಸೋಮವಾರ ಬೆಳಿಗ್ಗೆ ಸಿವಿಲ್ ನ್ಯಾಯಾಧೀಶ ರಾಣಾ ಮುಜಾಹಿದ್ ರಹೀಂ ಅವರು, ಮೂರು ಪುಟಗಳ ತೀರ್ಪು ಪ್ರಕಟಿಸಿ, ಸತತ ಗೈರು ಹಾಜರಾದ ಕಾರಣಕ್ಕೆ ಖಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರು.

ಮಾಜಿ ಪ್ರಧಾನಿ, ವಿಚಾರಣೆಗೆ ಹಾಜರಾಗುವ ಬದಲು, ನ್ಯಾಯಾಧೀಶರ ಮುಂದೆ ಖುದ್ದು ಹಾಜರಾಗುವುದರಿಂದ ವಿನಾಯ್ತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಜತೆಗೆ ವಿಡಿಯೊ ಲಿಂಕ್ ಮೂಲಕ ವರ್ಚುವಲ್ ವಿಧಾನದಲ್ಲಿ ನ್ಯಾಯಾಲಯ ಕಲಾಪಕ್ಕೆ ಹಾಜರಾಗಲು ಅನುಮತಿಸಬೇಕು ಎಂದು ಕೋರಿದ್ದಾಗಿ ಜಿಯೊ ನ್ಯೂಸ್ ವಿವರಿಸಿದೆ.

ಕಳೆದ ಏಪ್ರಿಲ್‌ನಲ್ಲಿ ಪದಚ್ಯುತರಾದ ಇಮ್ರಾನ್ ಖಾನ್ ಅವರನ್ನು ಜೈಲಿಗಟ್ಟಲೇಬೇಕು ಎಂದು ಪಣ ತೊಟ್ಟಿರುವ ಪೊಲೀಸರು, ಪಿಟಿಐ ಅಧ್ಯಕ್ಷರನ್ನು ಬಂಧಿಸಲು ಲಾಹೋರ್‌ಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು.

Similar News