ಕೇಂದ್ರೀಯ ಏಜೆನ್ಸಿಗಳ ದುರ್ಬಳಕೆ ವಿರುದ್ಧ ನಿಲುವಳಿ ಆಂಗೀಕರಿಸಿದ ಬಂಗಾಳ ವಿಧಾನಸಭೆ

Update: 2023-03-14 04:46 GMT

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಗುರಿ ಮಾಡಿ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ನಿಲುವಳಿ ಸೂಚನೆ ಆಂಗೀಕರಿಸಿದೆ.

ಆದರೆ ಈ ನಿಲುವಳಿ ಸೂಚನೆ ವೇಳೆಗೆ ಸದನದಲ್ಲಿ ಹಾಜರಿದ್ದರೆ, ಅದು ಭ್ರಷ್ಟಾಚಾರ ಪ್ರಕರಣಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಆಪಾದಿಸಿ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಸಭಾತ್ಯಾಗ ನಡೆಸಿತು.

ತೃಣಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡ ತಪಸ್ ರಾಯ್ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ನಡಾವಳಿಗಳನ್ನು ನಿರ್ವಹಿಸುವುದು ಮತ್ತು ವಿಧಿವಿಧಾನಗಳ ನಿಯಮಾವಳಿಯ ನಿಯಮ 185ರ ಅಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಿದರು.

ಸಚಿವ ಪಾರ್ಥ ಭೌಮಿಕ್ ಅವರನ್ನು ಒಂದು ತಿಂಗಳ ಒಳಗಾಗಿ ಜೈಲಿಗೆ ಅಟ್ಟುವುದಾಗಿ ವಿರೋಧ ಪಕ್ಷದ ಮುಖಂಡ ಸುವೇಂಧು ಅಧಿಕಾರಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ, 2014ರಿಂದೀಚೆಗೆ ಕೇಂದ್ರೀಯ ಏಜೆನ್ಸಿಗಳನ್ನು ದೇಶದಲ್ಲಿ ರಾಜಾರೋಷವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ರಾಯ್ ವಿವರಿಸಿದರು. ಸುವೇಂಧು ಅಧಿಕಾರಿ ವಿರುದ್ಧ ಭೌಮಿಕ್ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ.

"ವಿರೋಧ ಪಕ್ಷದ ಮುಖಂಡರು, ಸಚಿವರೂ ಸೇರಿದಂತೆ ರಾಜ್ಯದ ಆಡಳಿತ ಪಕ್ಷದ ಸದಸ್ಯರಿಗೆ ಹೇಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ" ಎಂದು ರಾಯ್ ಹೇಳಿದರು.

ನಿಲುವಳಿ ಸೂಚನೆ ಬಗ್ಗೆ ಮಾತನಾಡಿದ ಸಚಿವ ಚಂದ್ರಿಮಾ ಭಟ್ಟಾಚಾರ್ಯ, ಕಾನೂನು ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆ, ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಗುರಿಮಾಡಿ ಭೀತಿಯ ವಾತಾವರಣ ಹುಟ್ಟಿಸುತ್ತಿವೆ ಎಂದು ಆಪಾದಿಸಿದರು. ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದ ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಮಾಡಿದರು.

Similar News