ಜಗ ದಗಲ

Update: 2023-03-14 06:08 GMT

► ಕೆಫಲೋನಿಯಾ ಭವ್ಯತೆ

ಪಚ್ಚೆಬಣ್ಣದ ಪರ್ವತಗಳು, ಏಕಾಂತ ಕೊಲ್ಲಿಗಳು, ಭೂಗತ ಸರೋವರಗಳು. ಕಣ್ತಣಿಸುವ ಇಂಥ ಪ್ರಾಕೃತಿಕ ಸಿರಿಯಿರುವ ಅಯೋನಿಯನ್ ದ್ವೀಪಗಳಲ್ಲಿ ಅತಿ ದೊಡ್ಡದು ಕೆಫಲೋನಿಯಾ.

ಹೇರಳ ಮರಳಿನ ಕಡಲತೀರಗಳು, ಬಹುಮಹಡಿ ಕಟ್ಟಡಗಳ ಕಿರಿಕಿರಿಯಿಲ್ಲದೆ ಕಾಣಿಸುವ ದೃಶ್ಯಾವಳಿಗಳು ಮತ್ತು ಅಸಾಧಾರಣ ಏಕಾಂತತೆ. ಇವೆಲ್ಲವುಗಳ ಕಾರಣದಿಂದಾಗಿಯೇ ಕೆಫಲೋನಿಯಾ ವಿಶೇಷ ಸಮೀಕ್ಷೆಯಲ್ಲಿ ಈ ಬಾರಿ 5 ಸ್ಟಾರ್ ಗಳಿಸಿರುವ ಏಕೈಕ ದ್ವೀಪ ಎಂದು ವರದಿಯೊಂದು ಹೇಳಿದೆ.

ಗ್ರೀಕ್ ದ್ವೀಪಗಳೆಲ್ಲವೂ ಸೂರ್ಯ, ಸಮುದ್ರ ಮತ್ತು ಮರಳಿನ ಸಂಪತ್ತನ್ನು ಹೊಂದಿದ್ದರೂ, ಪ್ರತಿಯೊಂದು ದ್ವೀಪವೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಸ್ಕಿಯಾಥೋಸ್ ಮತ್ತು ಲೆಫ್ಕಾಡಾ ದ್ವೀಪಗಳೂ ಕೆಫಲೋನಿಯಾ ಸಾಲಿನಲ್ಲೇ ಬರುವಂಥವು. ಲೆಫ್ಕಾಡಾ ಕಳೆದ ಬಾರಿ ಅಗ್ರ ಸ್ಥಾನ ಪಡೆದಿದ್ದರೆ, ಈ ಬಾರಿ ಕೆಫಲೋನಿಯಾ ಗೆದ್ದಿದೆ. ಅದರ ಸೊಂಪಾದ ಭೂದೃಶ್ಯ, ಶುಭ್ರ ಕಡಲತೀರಗಳು, ಕಡಿದಾದ ಕರಾವಳಿ ಮತ್ತು 14ನೇ ಶತಮಾನದ ಪ್ರಬಲ ಕೋಟೆ ಇವೆಲ್ಲವೂ ಕೆಫಲೋನಿಯಾದ ಭವ್ಯತೆಗೆ ಕಾರಣ.

ತನ್ನ 62 ಸುಂದರವಾದ ಬೀಚ್‌ಗಳೊಂದಿಗೆ ಬೆರಗುಗೊಳಿಸುವ ಈ ದ್ವೀಪದಷ್ಟೇ ಸೊಗಸಾಗಿರುವ ಸ್ಕಿಯಾಥೋಸ್ ಕೂಡ ಪ್ರಶಾಂತ ಕಡಲತೀರಗಳ ತಾಣ. ಸ್ಕಿಯಾಥೋಸ್ ಪಟ್ಟಣದಿಂದ ಲಾಲಾರಿಯಾ ಬೀಚ್‌ಗೆ ದೋಣಿ ವಿಹಾರ, ಅದರ ನೈಸರ್ಗಿಕ ಶಿಲಾ ಕಮಾನು ಇವೆಲ್ಲವೂ ಇಲ್ಲಿನ ಆಕರ್ಷಣೆ.

ಸಮೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಕ್ರೀಟ್. ಈ ಗ್ರೀಕ್ ದ್ವೀಪ ಆಲಿವ್ ತೋಪುಗಳು, ದ್ರಾಕ್ಷಿತೋಟಗಳು, ಪರ್ವತಗಳು ಮತ್ತು ಕಣಿವೆಗಳ ಮೂಲಕ ಮನಸೆಳೆಯುವ ಮತ್ತೊಂದು ಶಾಂತ ಸ್ಥಳ. ಐದನೇ ಸ್ಥಾನ ಪಡೆದ ಕಾರ್ಫು, ಬೆಚ್ಚಗಿನ, ಆಳವಿಲ್ಲದ ನೀರಿನಿಂದ ಕೂಡಿದ ಕೊಲ್ಲಿಗಳನ್ನು ಹೊಂದಿರುವ ತಾಣ. ಕೊರ್ಫುವಿನ ಪುರಾತನ ಪಟ್ಟಣ ಯುನೆಸ್ಕೋ ಪಟ್ಟಿಯಲ್ಲಿದೆ. ಪುರಾತನ ಕೋಟೆಗಳು ಮತ್ತು ಅನನ್ಯ ವಾಸ್ತುಶಿಲ್ಪ ಅದರ ಇತಿಹಾಸದ ಒಳನೋಟವನ್ನು ನೀಡುತ್ತವೆ.

► ಸಿಂಹನಾರಿ ಪ್ರತಿಮೆ

ಇದು ಸಿಂಹನಾರಿ ಮಾದರಿಯ ಪ್ರತಿಮೆ. ದಕ್ಷಿಣ ಈಜಿಪ್ಟ್‌ನಲ್ಲಿ ಈ ಅಪರೂಪದ ಪ್ರತಿಮೆಯನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಕೈರೋದ ದಕ್ಷಿಣಕ್ಕೆ 280 ಮೈಲಿ (450 ಕಿ.ಮೀ.) ದೂರದಲ್ಲಿರುವ ಕ್ವೆನಾ ಪ್ರಾಂತದಲ್ಲಿ ಈ ಕಲಾಕೃತಿ ಪತ್ತೆಯಾಗಿದೆ. ಈ ಪ್ರತಿಮೆ 20 ಮೀಟರ್ ಎತ್ತರವಿರುವ ಗಿಜಾ ಸಂಕೀರ್ಣದ ಪಿರಮಿಡ್‌ನಲ್ಲಿರುವ ಸಿಂಹನಾರಿಗಿಂತ ಚಿಕ್ಕದಾಗಿದೆ ಎಂದು ಈಜಿಪ್ಟ್‌ನ ಪುರಾತನ ಸಚಿವಾಲಯ ತಿಳಿಸಿದೆ.

ಪುರಾತತ್ವಶಾಸ್ತ್ರಜ್ಞರು ಪ್ರತಿಮೆಯ ನಗುತ್ತಿರುವ ಲಕ್ಷಣಗಳನ್ನು ಗಮನಿಸಿದ ಬಳಿಕ, ರೋಮನ್ ಚಕ್ರವರ್ತಿ ಕ್ಲಾಡಿಯಸ್‌ಗೆ ಸೇರಿರಬಹುದು ಎಂದು ಭಾವಿಸುತ್ತಿದ್ದಾರೆ.

ಪುರಾತತ್ವಜ್ಞರು ಜಾನಪದೀಯ ಮತ್ತು ಚಿತ್ರಲಿಪಿಗಳಲ್ಲಿರುವ ರೋಮನ್ ಶಾಸನಗಳಂತಿರುವ ಕಲ್ಲಿನ ಚಪ್ಪಡಿಗಳನ್ನೂ ಪತ್ತೆ ಮಾಡಿದ್ದಾರೆ. ಬೈಜಾಂಟೈನ್ ಯುಗದ ಮಣ್ಣಿನ ಇಟ್ಟಿಗೆಗಳೂ ಪತ್ತೆಯಾಗಿವೆ. ಈ ಸ್ಥಳ ಜಲಾನಯನ ಪ್ರದೇಶವಾಗಿದ್ದುದು ಇದರಿಂದ ತಿಳಿದಿದೆ ಎಂದು ಸಚಿವಾಲಯ ತಿಳಿಸಿದೆ.

ವಿಜ್ಞಾನಿಗಳು ಕಲ್ಲಿನ ಚಪ್ಪಡಿ ಮೇಲಿನ ಗುರುತುಗಳ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಬೇಕಿದೆ. ಇದು ಪ್ರತಿಮೆಯ ಗುರುತು ಮತ್ತು ಆ ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅನಾವರಣಗೊಳಿಸಲಿದೆ ಎಂದು ಸಚಿವಾಲಯ ಹೇಳಿದೆ. ಇಂತಹ ಆವಿಷ್ಕಾರಗಳ ಬಗ್ಗೆ ಸಾಮಾನ್ಯವಾಗಿ ಈಜಿಪ್ಟ್ ಸರಕಾರವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಪ್ರಚಾರ ಮಾಡುತ್ತದೆ ಎನ್ನಲಾಗಿದೆ.

► ಬೆರಳಿನ ಪ್ರಶ್ನೆ

ನೆರೆಹೊರೆಯವರಿಗೆ ಮಧ್ಯದ ಬೆರಳನ್ನು ತೋರಿಸುವುದು ಸಭ್ಯವಲ್ಲವಾದರೂ, ಆ ನೆಪದಲ್ಲಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲಾಗದು. ಕೆನಡಾದ ನ್ಯಾಯಾಧೀಶರು ಇಂಥದೊಂದು ಗಮನೀಯ ತೀರ್ಪು ಕೊಟ್ಟಿದ್ದಾರೆ. ಕೆನಡಾದ ಸಂವಿಧಾನದ ಅಡಿಯಲ್ಲಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಲಾಗಿದೆ ಎಂದಿದ್ದಾರೆ.

26 ಪುಟಗಳ ತೀರ್ಪು ಅದೆಂದು ವರದಿಗಳು ಹೇಳಿವೆ. ಮಾಂಟ್ರಿಯಲ್ ಉಪನಗರದಲ್ಲಿ ತನ್ನ ನೆರೆಯವರಿಗೆ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ನ್ಯಾಯಾಧೀಶ ಡೆನ್ನಿಸ್ ಗಲಿಯಾಟ್ಸಾಟೋಸ್ ವಜಾಗೊಳಿಸಿದ್ದಾರೆ.

ಸ್ಪಷ್ಟವಾಗಿ ಹೇಳಬೇಕೆಂದರೆ, ಯಾರಿಗಾದರೂ ಬೆರಳು ತೋರಿಸುವುದು ಅಪರಾಧವಲ್ಲ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ. ಈ ವೇಳೆ ಅವರು ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ.

ಆರೋಪಿ ವರ್ತನೆ ಪ್ರಾಪಂಚಿಕವಾದ, ನೆರೆಹೊರೆಯಲ್ಲಾಗುವ ಕ್ಷುಲ್ಲಕ ವಿಚಾರಕ್ಕಿಂತ ಬೇರೇನೂ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೂರುದಾರರು ಇದನ್ನೊಂದು ಅಪರಾಧ ಎನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದು, ಮುಗ್ಧ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನದಂತೆ ಕಾಣುತ್ತಿದ್ದು, ಇದು ಶೋಚನೀಯವಾಗಿದೆ ಎಂದು ನ್ಯಾಯಾಧೀಶ ಗಲಿಯಾಟ್ಸಾಟೋಸ್ ಬರೆದಿದ್ದಾರೆ.

ಮಧ್ಯದ ಬೆರಳು ತೋರುವುದು ನಾಗರಿಕವಾಗಿರಲಿಕ್ಕಿಲ್ಲ, ಸಭ್ಯವಾಗಿರಲಿಕ್ಕಿಲ್ಲ, ಸಂಭಾವಿತವಾಗಿರಲಿಕ್ಕಿಲ್ಲ. ಅದೇನೇ ಇದ್ದರೂ ಅದು ಕ್ರಿಮಿನಲ್ ಎನ್ನಿಸಿಕೊಳ್ಳುವ ಮಟ್ಟದ್ದಂತೂ ಅಲ್ಲ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣ ವಜಾಗೊಳಿಸಲಷ್ಟೇ ಸೂಕ್ತ ಎಂದ ಅವರು, ಫೈಲನ್ನು ಕಿಟಕಿಯಾಚೆ ಎಸೆಯಲು ಬಯಸುವುದಾಗಿಯೂ ಹೇಳಿದ್ದು, ಮಾಂಟ್ರಿಯಲ್ ನ್ಯಾಯಾಲಯದ ಕೋಣೆಗಳು ಕಿಟಕಿಗಳನ್ನು ಹೊಂದಿಲ್ಲ ಎಂದು ಉದ್ಗಾರ ತೆಗೆದದ್ದು ವರದಿಯಾಗಿದೆ.

Similar News

ಜಗದಗಲ
ಜಗ ದಗಲ