ಮರಕ್ಕೆ ಸರಪಳಿಯಿಂದ ಬಂಧಿಸಲ್ಪಟ್ಟು ಹಲ್ಲೆಗೀಡಾದ ವ್ಯಕ್ತಿ ಮನೆಯಲ್ಲಿ ಶವವಾಗಿ ಪತ್ತೆ!

Update: 2023-03-14 08:43 GMT

ಭೋಪಾಲ್: ಮಧ್ಯಪ್ರದೇಶದ ಚತರ್‌ಪುರದಲ್ಲಿ ತನ್ನದೇ ಗ್ರಾಮದ ಮಹಿಳೆಯನ್ನು ಮದುವೆಯಾದ ಕಾರಣಕ್ಕೆ ಮರಕ್ಕೆ ಸರಪಳಿಯಿಂದ ಬಂಧಿಸಿ ಥಳಿತಕ್ಕೊಳಗಾದ ಕೆಲವೇ ದಿನಗಳ ನಂತರ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಮ್ಮ ಸೊಸೆಯ ಸಂಬಂಧಿಕರು ತಮ್ಮ ಮನೆಗೆ ಬಲವಂತವಾಗಿ ನುಗ್ಗಿ ಪತಿಯನ್ನು ಕೊಂದಿದ್ದಾರೆ ಎಂದು ಮೃತಪಟ್ಟಿರುವ ಉಧಾ ಅಹಿರ್ವಾರ್ ಅವರ ಪತ್ನಿ ಸಾವಿತ್ರಿ ಆರೋಪಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕ ಹಲ್ಲೆಯಿಂದ ಮನನೊಂದ ಅಹಿರ್ವಾರ್ ಮಾರ್ಚ್ 4 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಆರೋಪಿಗಳ ವಿರುದ್ಧ  ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲಾಗಿದ್ದು, ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಉಧಾ ಅಹಿರ್ವಾರ್ ಅವರ ಮಗ ಶಂಕರ್ ಹಾಗೂ  ಅದೇ ಗ್ರಾಮದ ಮಹಿಳೆ ರಾಜಸ್ಥಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ  ಅವರಿಬ್ಬರು ಮದುವೆಯಾದರು ಎನ್ನಲಾಗಿದೆ. ಎರಡೂ ಕುಟುಂಬಗಳು ಒಂದೇ ಜಾತಿ. ಆದರೆ ಮದುವೆಯ ಸುದ್ದಿ ಕೇಳಿ ಮಹಿಳೆಯ ತಂದೆ ಕೋಪಗೊಂಡಿದ್ದರು. ಮಹಿಳೆಯ ತಂದೆ ಹಾಗೂ ಇತರ ಐವರು ಉಧಾ ಅಹಿರ್ವಾರ್ ಅವರನ್ನು ಮತ್ತೊಂದು ಗ್ರಾಮ ಪಂಚಂಪುರಕ್ಕೆ ಕರೆದೊಯ್ದು, ಅಲ್ಲಿನ ಮರಕ್ಕೆ ಸರಪಳಿಯಿಂದ ಬಂಧಿಸಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಿರ್ವಾರ್ ಮರದ ಬಳಿ ಕುಳಿತ್ತಿರುವುದು ಹಾಗೂ  ಅವರ ಕೈಗಳು ಮತ್ತು ಪಾದಗಳನ್ನು ಸರಪಳಿಯಿಂದ ಬಂಧಿಸಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಅಂತಿಮವಾಗಿ ಅಹಿರ್ವಾರ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಲಾಗಿದ್ದು, ಆತ ಮನೆಗೆ ಮರಳಿದ್ದರು. ಎರಡು ದಿನಗಳ ನಂತರ  ಅವರು ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಲುಲು ಗ್ರೂಪ್‌ ಅಧ್ಯಕ್ಷ ಯೂಸುಫ್‌ ಅಲಿ ಅವರಿಗೆ ಈಡಿ ಸಮನ್ಸ್‌

Similar News