ಮಾ.15-16: ನವಭಾರತ ರಾತ್ರಿ ಪ್ರೌಢಶಾಲೆಯ ಸಂಸ್ಥಾಪಕ ಹಾಜಿ ಖಾಲಿದ್ ಮುಹಮ್ಮದ್ ಜನ್ಮ ಶತಾಬ್ಧಿ ಕಾರ್ಯಕ್ರಮ
ಮಂಗಳೂರು, ಮಾ.14: ನಗರದ ರಥಬೀದಿಯ ನವಭಾರತ ಎಜುಕೇಶನ್ ಸೊಸೈಟಿ (ರಿ)-ನವಭಾರತ ರಾತ್ರಿ ಪ್ರೌಢಶಾಲೆಯ ಸಂಸ್ಥಾಪಕ ದಿ. ಹಾಜಿ ಖಾಲಿದ್ ಮುಹಮ್ಮದ್‌ರ ಜನ್ಮಶತಾಬ್ಧಿ ಹಾಗೂ ನವಭಾರತ ರಾತ್ರಿ ಪ್ರೌಢಶಾಲೆಯ 80ನೆ ವರ್ಧಂತ್ಯುತ್ಸವ ಕಾರ್ಯಕ್ರಮವು ಮಾ.15 ಮತ್ತು 16ರಂದು ನಗರದ ಪುರಭವನದಲ್ಲಿ ನಡೆಯಲಿದೆ.
ಬಡತನ ಮತ್ತು ಕೌಟುಂಬಿಕ ಸಮಸ್ಯೆಯಿಂದ ಅನೇಕ ಮಂದಿ ಶಾಲಾ ಶಿಕ್ಷಣದಿಂದ ವಂಚಿತರಾಗುವುದನ್ನು ಕಂಡ ಹಾಜಿ ಖಾಲಿದ್ ಮುಹಮ್ಮದ್ 1943ರ ಮಾರ್ಚ್ 15ರಂದು ಸ್ಥಾಪಿಸಿದ ರಾತ್ರಿ ಶಾಲೆಯು ಇಂದು ಕೂಡಾ ಮುನ್ನಡೆಯುತ್ತಿದೆ. ಆ ಮೂಲಕ ದಿ. ಹಾಜಿ ಖಾಲಿದ್ ಮುಹಮ್ಮದ್ ‘ವಯಸ್ಕರ ಶಿಕ್ಷಣದ ಐಕಾನ್’ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ.
ಬ್ರಿಟಿಷರ ದಬ್ಬಾಳಿಕೆಯ ಕಾಲವದು. ಖಾಲಿದ್ ಮುಹಮ್ಮದ್ ಎಂಬ ಹೈಸ್ಕೂಲ್ ಬಾಲಕ ಬಡ ಕಾರ್ಮಿಕರು ಶಿಕ್ಷಣದಿಂದ ವಂಚಿತರಾಗುವುದನ್ನು ಮನಗಂಡು ಐದು ಮಂದಿ ವಯಸ್ಕರನ್ನು ಸೇರಿಸಿಕೊಂಡು ರಾತ್ರಿ ಶಾಲೆಯನ್ನು ಸ್ಥಾಪಿಸಿದರು. ಆರಂಭದಲ್ಲಿ ಈ ಶಾಲೆಗೆ ‘ನವ ಬಹರ್’ ಬಳಿಕ ‘ನವಭಾರತ್’ ಎಂಬ ಹೆಸರನ್ನು ನಮೂದಿಸಿದರು.
ಈ ಮಧ್ಯೆ ಮುಚ್ಚುವ ಅಂಚಿನಲ್ಲಿದ್ದ ಮಂಗಳೂರಿನ ಬದ್ರಿಯಾ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿಯೂ ಖಾಲಿದ್ ಮುಹಮ್ಮದ್ ಸುಮಾರು 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಮುಖ್ಯಶಿಕ್ಷಕರಾಗಿ ಜವಾಬ್ದಾರಿ ವಹಿಸಿಕೊಂಡಾಗ ಬದ್ರಿಯಾ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 46 ಮತ್ತು ಎಸೆಸೆಲ್ಸಿ ಫಲಿತಾಂಶವು ಶೇ.5 ಆಗಿತ್ತು. ಹತ್ತೇ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 250ಕ್ಕೆ ಮತ್ತು ಎಸೆಸೆಲ್ಸಿ ಫಲಿತಾಂಶವು ಶೇ.80ಕ್ಕೇರಿತ್ತು. ಹಗಲು ಬದ್ರಿಯಾ ಪ್ರೌಢಶಾಲೆ ಮತ್ತು ರಾತ್ರಿ ನವಭಾರತ ಪ್ರೌಢಶಾಲೆಯ ಉನ್ನತಿಗೆ ಶ್ರಮಿಸಿ 60ಕ್ಕೂ ಅಧಿಕ ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಖಾಲಿದ್ ಮುಹಮ್ಮದ್ ನಿವೃತ್ತಿಯ ಬಳಿಕ ಸರಕಾರದಿಂದ ಯಾವುದೇ ಪಿಂಚಣಿ ಪಡೆಯದಿರುವುದು ಗಮನಾರ್ಹ.
ನವಭಾರತ ರಾತ್ರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಡಿ.ಆರ್.ಕಾಮತ್ ಅಧ್ಯಕ್ಷತೆಯ ಸಮಿತಿಯು 1997ರಲ್ಲಿ ಖಾಲಿದ್ ಮುಹಮ್ಮದ್ ಅವರನ್ನು ಮಂಗಳೂರಿನ ಪುರಭವನದಲ್ಲಿ ಸನ್ಮಾನಿಸಲಾಗಿತ್ತು. ಇದೀಗ ಅವರ ಜನ್ಮಶತಾಬ್ಧಿ ಕಾರ್ಯಕ್ರಮಕ್ಕೆ ಪುರಭವನ ಸಜ್ಜಾಗಿವೆ.
80 ವರ್ಷದಲ್ಲಿ ಸುಮಾರು 16 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕಲಿತಿರುವುದು ಗಮನಾರ್ಹ. ಈ ಪ್ರೌಢಶಾಲೆಯನ್ನು ರಾತ್ರಿ ಕಾಲೇಜು ಮಟ್ಟಕ್ಕೆ ಏರಿಸಬೇಕು ಮತ್ತು ಸರಕಾರದಿಂದ ಅನುದಾನ ದೊರಕಿಸಿ ಕೊಡಬೇಕು ಎಂಬ ಕನಸನ್ನು ಹಾಜಿ ಖಾಲಿದ್ ಮುಹಮ್ಮದ್ ಕಂಡಿದ್ದರು. ಆದರೆ ಅದಿನ್ನೂ ಈಡೇರಿಲ್ಲ. ಜನ್ಮಶತಾಬ್ಧಿ ಕಾರ್ಯಕ್ರಮದ ಸಂದರ್ಭದಲ್ಲಾದರೂ ಸರಿ, ಸರಕಾರ ಈ ಬೇಡಿಕೆಗೆ ಸ್ಪಂದಿಸುವ ಮೂಲಕ ವಯಸ್ಕರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂಬುದು ಕಾರ್ಯಕ್ರಮ ಸಂಘಟಕರ ಆಗ್ರಹವಾಗಿದೆ.