ನಿಟ್ಟೆ ತಾಂತ್ರಿಕ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೋಳ್ಳುವುದನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಶಿಸ್ತು, ಏಕಾಗ್ರತೆ ಮುಂತಾದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಮಂಗಳೂರು ಮೆಸ್ಕಾಂ ವಿಜಿಲೆನ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗುಣಪಾಲ ಜೆ ಅಭಿಪ್ರಾಯಟ್ಟಿದ್ದಾರೆ
ಮಂಗಳವಾರ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್‌ನ ಬಿ.ಸಿ.ಆಳ್ವಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 37ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯನ್ನು ಸ್ನೇಹಕ್ಕಾಗಿ ಹಾಗೂ ವಿನೋದಕ್ಕಾಗಿಯೂ ಆಡಬಹುದು. ಸೋಲನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಂಜುವ ಅಗತ್ಯತೆ ಇಲ್ಲ. ಕ್ರೀಡೆಯಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಐ.ರಮೇಶ್ ಮಿತ್ತಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿನ ವಿವಿಧ ಕ್ರೀಡಾಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ನಿಟ್ಟೆ ಕ್ಯಾಂಪಸ್‌ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ, ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಹಲವಾರು ಕ್ರೀಡಾಕೂಟಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಹಿರಿಮೆ ನಮ್ಮದು ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಎಮೆಚೂರ್ ಎಥ್ಲೆಟಿಕ್ ಎಸೋಸಿಯೇಶನ್‌ನ ಗೌರವ ಸಲಹೆಗಾರ ಅಶೋಕ್ ಅಡ್ಯಂತಾಯ, ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ.ಆರ್, ಕ್ಯಾಂಪಸ್‌ನ ಮೈಂಟೆನೆನ್ಸ್ ಆ್ಯಂಡ್ ಡೆವಲಪ್ಮೆಂಟ್‌ನ ನಿರ್ದೇಶಕ ಪ್ರೊ.ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪೂಜಾರಿ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ರೋಶನ್ ಫೆರ್ನಾಂಡಿಸ್ ನಿರೂಪಿಸಿದರು. ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್‌ಸುಂದರ್ ವಂದಿಸಿದರು.