ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಮ್ ಅಭ್ಯರ್ಥಿ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ

Update: 2023-03-15 13:15 GMT

ಭಟ್ಕಳ: ಸುಮಾರು 55 ಸಾವಿರಕ್ಕೂ ಹೆಚ್ಚು ಮುಸ್ಲಿಮ್ ಅಲ್ಪಸಂಖ್ಯಾತರ ಮತದಾರರರಿರುವ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಪ್ರಮುಖ ಪಕ್ಷಗಳಿಂದ  ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ದಿವಂಗತ ಜುಕಾಕೋ ಶ೦ಸುದ್ದೀನ್ ,   ಎಸ್.ಎಂ.ಯಾಹ್ಯ ರಾಜ್ಯ ರಾಜಕೀಯದಲ್ಲಿ ಮಿಂಚಿದ  ಭಟ್ಕಳದ ರಾಜಕೀಯ ಮುಖಂಡರು. ಇವರಿಬ್ಬರೂ  ಮುತ್ಸದ್ದಿ ಆಡಳಿತಗಾರರಾಗಿ ಬಹಳ ಜನಪ್ರಿಯತೆ ಗಳಿಸಿದ್ದರು. ಆ  ನಂತರ ಕಳೆದ ನಾಲ್ಕು ದಶಕಗಳಿಂದ ಮುಸ್ಲಿಮ್ ಅಭ್ಯರ್ಥಿ ಇಲ್ಲಿಂದ ವಿಧಾನಸಭೆ ಪ್ರವೇಶಿಸಿಲ್ಲ. ತಮ್ಮ ಸಮುದಾಯದ ಇಷ್ಟೊಂದು ದೊಡ್ಡ ಸಂಖ್ಯೆಯ  ಮತಗಳ ಹೊರತಾಗಿಯೂ ತಮಗೆ ಶಾಸನ ಸಭೆಗೆ ಇಲ್ಲಿಂದ ಪ್ರತಿನಿಧಿ ಕಳಿಸಲಾಗುತ್ತಿಲ್ಲ. ಈ ಬಾರಿ ಎಲ್ಲ  ಸಮುದಾಯದವರು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸಿ ಯಾಕೆ ಗೆಲ್ಲಿಸಬಾರದು ಎಂಬುವುದು ಇಲ್ಲಿನ ಮುಸ್ಲಿಮರ ನಡುವೆ ಭಾರೀ ಚರ್ಚೆಯ ವಿಷಯವಾಗಿದೆ.

ಈ ಕುರಿತು ವಾಟ್ಸಪ್ ಗ್ರೂಪ್ ಗಳು , ಫೇಸ್ ಬುಕ್ ಪೇಜ್ ಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಭಟ್ಕಳದ ಮುಸ್ಲಿಮ್ ಸಮುದಾಯದ ರಾಜಕೀಯ , ಧಾರ್ಮಿಕ  ಹಾಗು ಮುಸ್ಲಿಮರ ಪ್ರಮುಖ ಸಂಘಟನೆ  ತಂಝಿಮ್ ನ  ಮುಖಂಡರು ಹಾಗು  ಗಲ್ಫ್‌ ನಲ್ಲಿರುವ ಅನಿವಾಸಿ ಭಟ್ಕಳಿಗರೂ  ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಬಾರಿಯಾದರೂ ಮುಸ್ಲಿಂ ಸಮುದಾಯದ ಪ್ರತಿನಿಧಿ ಇಲ್ಲಿಂದ ವಿಧಾನ ಸಭೆಗೆ ಹೋಗಬೇಕು ಎಂಬುದು ಈ ಚರ್ಚೆಗಳ ಕೇಂದ್ರ ವಿಷಯ ಹಾಗು ಆಗ್ರಹವಾಗಿದೆ. 

ಒಂದು ವೇಳೆ ಮುಸ್ಲಿಮ್ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದು ಸುಲಭವಾಗುತ್ತದೆ ಎಂಬುದು ಕೆಲವು  ಕಾಂಗ್ರೆಸ್  ಬೆಂಬಲಿಗರ ವಾದವಾಗಿದೆ. ಆದರೂ  ಹೆಚ್ಚಿನವರು ಮುಸ್ಲಿಮ್ ಅಭ್ಯರ್ಥಿಯನ್ನು ಈ ಬಾರಿ  ಕಣಕ್ಕಿಳಿಸಲೇಬೇಕು ಎಂಬ ವಾದ  ಮಂಡಿಸುತ್ತಿದ್ದಾರೆ. ಒಂದೆರಡು ಬಾರಿ ಸೋತರೂ ಪರವಾಗಿಲ್ಲ, ನಾವು ನಮ್ಮ ಸಾಮರ್ಥ್ಯ ಪ್ರದರ್ಶಿಸಲೇ ಬೇಕು. ನಮ್ಮ ಪ್ರಾತಿನಿಧ್ಯ ನಾವು ಕೇಳದೆ ಸಿಗುವುದಿಲ್ಲ ಎಂಬುದು ಹೆಚ್ಚಿನವರ ವಾದ. 

ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 200,000 ಕ್ಕಿಂತ ಹೆಚ್ಚಿದ್ದು ಅದರಲ್ಲಿ ನಾಮಧಾರಿ (ನಾಯ್ಕ) ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ, ಸುಮಾರು 65,000 ನಾಮಧಾರಿ ಮತದಾರರು ಮತ್ತು 55,000 ಮುಸ್ಲಿಂ ಮತದಾರರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ನಂತರ ಎಸ್‍ಸಿ/ಎಸ್‍ಟಿ, ಮೊಗೆರ್, ದೇವಾಡಿಗ, ಕ್ರಿಶ್ಚಿಯನ್ ಮತ್ತು ಇತರ ಜಾತಿಗಳ ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಂದ  ಹೆಚ್ಚಾಗಿ ನಾಮಧಾರಿ ಮತ್ತು ಇತರ ಹಿಂದುಳಿದ  ಸಮಾಜದ  ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಈವರೆಗೆ ಗೆದ್ದಿರುವಲ್ಲಿ  ಮುಸ್ಲಿಮರ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ. ಆದರೆ,  ಮುಸ್ಲಿಮ್ ಅಭ್ಯರ್ಥಿ ಸ್ಪರ್ಧಿಸಿ ಸಮುದಾಯ ಒಗ್ಗಟ್ಟಾಗಿ ಮತ ಹಾಕಿ ಬೆಂಬಲಿಸಲು  ಮುಂದಾದ ತಕ್ಷಣ  ಆ ಅಭ್ಯರ್ಥಿಯನ್ನು ಸೋಲಿಸಲು ಎಲ್ಲ ಪಕ್ಷಗಳೂ ಒಟ್ಟಾಗಿ  ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇನಾಯತುಲ್ಲಾ ಶಾಬಂದ್ರಿ ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದರು.  ಬಿಜೆಪಿ, ಕಾಂಗ್ರೆಸ್, ಕೆಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ನಡೆದ ಸೆಣಸಾಟದಲ್ಲಿ  ಇನಾಯತುಲ್ಲಾ ಎರಡನೇ ಸ್ಥಾನ ಪಡೆದರು. ಪಕ್ಷೇತರ ಅಭ್ಯರ್ಥಿ ಮಾಂಕಾಳ್ ವೈದ್ಯ 37319  ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಜೆ.ಡಿ.ಎಸ್ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿ 27435 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಆ ಚುನಾವಣೆಯಲ್ಲಿ ಇನಾಯತುಲ್ಲಾ ಸ್ಪರ್ಧೆಗೆ  ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರೂ ಆಗಲೂ ಕೆಲವು ಮುಖಂಡರಿಂದ ಅಪಸ್ವರ ಕೇಳಿ ಬಂದಿತ್ತು. ಆದರೂ ದೊಡ್ಡ ಸಂಖ್ಯೆಯಲ್ಲಿ   ಮತಗಳಿಸುವಲ್ಲಿ ಇನಾಯತುಲ್ಲಾ ಯಶಸ್ವಿಯಾಗಿದ್ದರು. 

2018ರಲ್ಲಿ ನಡೆದ ಚುನಾವಣೆಯಲ್ಲಿ  ಮಂಕಾಳ್ ವೈದ್ಯ  ಕಾಂಗ್ರೆಸ್ ಟಿಕೆಟ್‍ನಲ್ಲಿ ಸ್ಪರ್ಧಿಸಿದಾಗ, ಮುಸ್ಲಿಮ್ ಮತದಾರರು  ಅವರಿಗೆ ಬೆಂಬಲ ನೀಡಲು ನಿರ್ಧರಿಸಿದರು. ಇನಾಯತುಲ್ಲಾ ಸ್ಪರ್ಧಿಸಲಿಲ್ಲ.  ಆದರೂ  ಮಂಕಾಳ್ ವೈದ್ಯ 77242 ಮತಗಳನ್ನು ಪಡೆದೂ  ಬಿಜೆಪಿ ಅಭ್ಯರ್ಥಿಯ ಎದುರು ಸೋಲಬೇಕಾಯಿತು.

ಈಗ  ಮತ್ತೊಮ್ಮೆ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಭಟ್ಕಳದಲ್ಲಿ  ಹೊಸ ಇತಿಹಾಸ ನಿರ್ಮಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿ ಬರುತ್ತಿದೆ. ವಿಶೇಷವಾಗಿ ಇಲ್ಲಿನ  ಮುಸ್ಲಿಮ್ ಯುವಜನರ ನಡುವೆ  ಈ ಬೇಡಿಕೆ ಬಲವಾಗಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಪ್ರಚಾರ ನಡೆಸಲಾಗುತ್ತಿದ್ದು, ಮುಸ್ಲಿಮರು ಒಗ್ಗಟ್ಟಾಗಿ ಮುಸ್ಲಿಂ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳಿಸಬೇಕು  ಎಂದು ಮುಸ್ಲಿಮರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಚುನಾವಣೆ ಬಂದಾಗ ಬಿಜೆಪಿಯ ಗುಮ್ಮವನ್ನು ಛೂ ಬಿಟ್ಟು ಮುಸ್ಲಿಮರನ್ನು ಹೆದರಿಸುವ ಕಾಂಗ್ರೆಸ್ ಯಾವಾಗಲು ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುವಂತೆ ನೋಡಿಕೊಳ್ಳುತ್ತಿದೆ. ಆದರೆ ಈಗ ಕಾಲ ಬದಲಾಗಿದೆ.  ಬಿಜೆಪಿ ಸೋಲಿಸಲು ಮುಸ್ಲಿಮರೇ ಏಕೆ ತಮ್ಮ ಮತಗಳನ್ನು ತ್ಯಾಗ ಮಾಡಬೇಕು? ಬೇಕಾದರೆ ಕಾಂಗ್ರೆಸ್ ಈಗ ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲಿ ಎಂಬ ಪ್ರಶ್ನೆ  ಇಲ್ಲಿನ  ಯುವಕರದ್ದು.   ತಮ್ಮ ಬಳಿ ಸಾಕಷ್ಟು ಮತಗಳು ಇದ್ದರೂ ಇಷ್ಟು ವರ್ಷಗಳ ಕಾಲ  ನಾವು  ಬೇರೆ ಸಮುದಾಯದ ವ್ಯಕ್ತಿಗಳನ್ನು ಗೆಲ್ಲಿಸುತ್ತ ಬಂದಿದ್ದೇವೆ. ಈ ಬಾರಿ  ನಮ್ಮನ್ನು ಉಳಿದ ಎಲ್ಲ  ಸಮುದಾಯದವರು ಸೇರಿ ಬೆಂಬಲಿಸಲಿ ಎಂಬುದು ಭಟ್ಕಳದ ಮುಸ್ಲಿಮರ ಆಗ್ರಹ.  ಅಂತೂ   ಈ ಬಾರಿ ಫಲಿತಾಂಶ ಏನೇ ಆಗಲಿ ಮುಸ್ಲಿಮ್ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಲೇಬೇಕು ಎಂಬ ದೃಢ ನಿರ್ಧಾರಕ್ಕೆ ಇಲ್ಲಿನ ಮುಸ್ಲಿಮ್ ಮತದಾರರು ಬಂದಂತೆ ಕಾಣುತ್ತಿದೆ.

Similar News