ಮುಖ್ಯ ಮಂತ್ರಿ ಮತ್ತು ಸಚಿವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ: ಎ.ಸಿ.ವಿನಯರಾಜ್ ಆರೋಪ

Update: 2023-03-15 14:24 GMT

ಮಂಗಳೂರು: ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ನೌಕರರು ನೇರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರೂ ಸರಕಾರ  ಜನರ ಅಹವಾಲು ಸ್ವೀಕರಿಸಿಲ್ಲ ಮತ್ತು ಆಲಿಸಿಲ್ಲ. ಮುಖ್ಯ ಮಂತ್ರಿ ಮತ್ತು ಸಚಿವರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಕೆಪಿಸಿಸಿ  ವಕ್ತಾರ ಹಾಗೂ ಮನಪಾ ಸದಸ್ಯ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸೇರಿದಂತೆ ಸರಕಾರದ  ಯಾರಿಗೂ ಕಾರ್ಮಿಕರ ಕಾಳಜಿ ಇಲ್ಲ. ಮನಪಾದ  60 ವಾರ್ಡ್ ಗಳಲ್ಲಿ ಮೂರು ದಿನದಿಂದ ಕಸ ಸಾಗಾಟ ವಾಹನ ಚಾಲಕರು ಪ್ರತಿಭಟನೆ ನಿರತರಾಗಿದ್ದಾರೆ.  ನಗರದ ಎಲ್ಲಡೆ ತ್ಯಾಜ್ಯ ತುಂಬಿಕೊಂಡು ಗಬ್ಬು ನಾತ ಬಂದರೂ ಯಾರೂ ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ ಎಂದು ದೂರಿದರು.

ಮನಪಾ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಆಡಳಿತ ಮತ್ತು ಇಲ್ಲಿಯ ಇಬ್ಬರು ಶಾಸಕರುಗಳಾದ  ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ಮಂಗಳೂರಿನಲ್ಲಿ ನಾಳೆ ಕರಾವಳಿ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಜನ ತರುವ ಕೆಲಸದಲ್ಲಿ ನಿರತರಾಗಿದ್ದಾರೆ. ನಗರದ ನಾಗರಿಕರ ಈ ಸಮಸ್ಯೆಗಳ ಬಗ್ಗೆ ಅವರು ತೆಲೆಕೆಡಿಸಿಕೊಂಡತ್ತಿಲ್ಲ ಎಂದರು.

ಸ್ಥಳೀಯಾಡಳಿತ ಮತ್ತು ಇಲ್ಲಿಯ ಶಾಸಕರುಗಳು ಆಡಳಿತ ವೈಫಲ್ಯವನ್ನು ಕಂಡಿದ್ದಾರೆ. ಕಸ ವಿಲೇವಾರಿ ಕಂಪೆನಿಯ ಗುತ್ತಿಗೆ ಮುಗಿದು ಸುಮಾರು ಒಂದೂವರೆ ವರ್ಷ ಕಳೆದಿದ್ದು, ಗುತ್ತಿಗೆದಾರರು ಕರಾರಿನಂತೆ ಬೇಕಾಗಿರುವ ಕಸ ವಿಲೇವಾರಿ ವಾಹನಗಳನ್ನು ಹಾಗೂ ಕಾರ್ಮಿಕರನ್ನು ಹಾಕಿರುವುದಿಲ್ಲ. ಆದರೆ ಅವರಿಗೆ ಪೂರ್ಣ ಪ್ರಮಾಣದ ಹಣ ಪಾವತಿಯಾಗುತ್ತಿದೆ. ಇದರಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಧುರೀಣರಾದ ಪ್ರಕಾಶ್ ಸಾಲ್ಯಾನ್, ಸಂಶುದ್ದೀನ್, ಲತೀಫ್ ಕಂದಕ್, ಟಿ.ಹೊನ್ನಯ, ಸುನೀಲ್ ಪೂಜಾರಿ, ರಾಕೇಶ್ ದೇವಾಡಿಗ, ಶಾಂತಲಾ ಗಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Similar News