ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತ: ಭಾರತೀಯ ಬ್ಯಾಂಕುಗಳು ಎಷ್ಟು ಸುರಕ್ಷಿತ?

Update: 2023-03-15 14:59 GMT

ಹೊಸದಿಲ್ಲಿ: 2008ರಲ್ಲಿ ಅಮೆರಿಕದ ಲೆಹ್ಮನ್ ಬ್ಯಾಂಕ್ ಪತನದಿಂದಾಗಿ ಸೃಷ್ಟಿಯಾಗಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟು ವಿಶ್ವಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪತರಗುಟ್ಟಿಸಿತ್ತಾದರೂ ಬಲವಾದ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಪದ್ಧತಿಗಳಿಂದಾಗಿ ದೇಶಿಯ ಬ್ಯಾಂಕುಗಳು ಸದೃಢತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ತೋರಿಸುವುದರೊಂದಿಗೆ ಭಾರತವು ಸುರಕ್ಷಿತ ಸ್ವರ್ಗವಾಗಿ ಉಳಿದಿತ್ತು. ಕಳೆದ ವಾರ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಮತ್ತು ಸಿಗ್ನೇಚರ್ ಬ್ಯಾಂಕ್ ಗಳು ಕುಸಿತಗೊಂಡಾಗ ಹಣಕಾಸು ಕ್ಷೇತ್ರದಲ್ಲಿ ಜಾಗತಿಕ ಅಂತರ್ಸಂಪರ್ಕಗಳ ಹೊರತಾಗಿಯೂ ಭಾರತೀಯ ಬ್ಯಾಂಕುಗಳ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ.

ಸ್ಟಾರ್ಟ್ಪ್ ಮತ್ತು ಡಿಜಿಟಲೀಕರಣದ ಯುಗದಲ್ಲಿ,ವಿಶೇಷವಾಗಿ SVB ಪತನದ ನಂತರ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಗೆ ಇನ್ನಷ್ಟು ಸಂಕಷ್ಟ ಕಾದಿದೆ ಎಂದು ರೇಟಿಂಗ್ಸ್ ಸಂಸ್ಥೆ ಮೂಡಿಸ್ ಎಚ್ಚರಿಕೆ ನೀಡಿರುವಾಗ ವಿದೇಶಗಳಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ಉನ್ನತ ಭಾರತೀಯ ಬ್ಯಾಂಕುಗಳು, ವಿಶೇಷವಾಗಿ ದೇಶಿಯ ವ್ಯವಸ್ಥಿತ ಪ್ರಮುಖ ಬ್ಯಾಂಕುಗಳು (ಡಿ-ಸಿಬ್ಗಳು) ಸುರಕ್ಷಿತವಾಗಿವೆಯೇ?

ಭಾರತೀಯ ಬ್ಯಾಂಕುಗಳ ಸ್ಥಿತಿಸ್ಥಾಪಕತ್ವ

ಬ್ಯಾಂಕರ್ ಗಳು ಹೇಳಿರುವಂತೆ ದೇಶಿಯ ಬ್ಯಾಂಕುಗಳು ಬ್ಯಾಲೆನ್ಸ್ ಶೀಟ್ ಅಥವಾ ಆಯವ್ಯಯ ಪತ್ರ ರಚನೆಯ ವಿಭಿನ್ನ ರೀತಿಯನ್ನು ಹೊಂದಿರುವುದರಿಂದ SVB ವೈಫಲ್ಯವು ಭಾರತದಲ್ಲಿ ಪರಿಣಾಮವನ್ನು ಬೀರುವ ಸಾಧ್ಯತೆಯಿಲ್ಲ. ‘ಭಾರತದಲ್ಲಿ ಠೇವಣಿಗಳನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಿಂದೆಗೆದುಕೊಳ್ಳುವ ವ್ಯವಸ್ಥೆಯನ್ನು ನಾವು ಹೊಂದಿಲ್ಲ’ ಎಂದು ಸರಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿ ತಿಳಿಸಿದರು.

ಅಮೆರಿಕದಲ್ಲಿ ಬ್ಯಾಂಕ್ ಠೇವಣಿಗಳಲ್ಲಿ ಬಹುದೊಡ್ಡ ಭಾಗವು ಕಾರ್ಪೊರೇಟ್ ಸಂಸ್ಥೆಗಳದ್ದಾಗಿರುತ್ತದೆ, ಆದರೆ ಭಾರತದಲ್ಲಿ ಕೌಟುಂಬಿಕ ಉಳಿತಾಯಗಳು ಬ್ಯಾಂಕ್ ಠೇವಣಿಗಳಲ್ಲಿ ದೊಡ್ಡ ಪಾಲನ್ನು ಹೊಂದಿವೆ. ಇಂದು ಹೆಚ್ಚಿನ ಠೇವಣಿಗಳು ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿವೆ ಮತ್ತು ಉಳಿದ ಠೇವಣಿಗಳು ಎಚ್ಡಿಎಫ್ಸಿ, ಐಸಿಐಸಿಐ ಮತ್ತು ಎಕ್ಸಿಸ್ ಬ್ಯಾಂಕುಗಳಂತಹ ಅತ್ಯಂತ ಪ್ರಬಲ ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿವೆ. ಹೀಗಾಗಿ ಗ್ರಾಹಕರು ತಮ್ಮ ಠೇವಣಿಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಬ್ಯಾಂಕುಗಳು ಯಾವುದೇ ಸಮಸ್ಯೆಯನ್ನು ಎದುರಿಸಿದಾಗೆಲ್ಲ ಸರಕಾರವು ಅವುಗಳ ನೆರವಿಗೆ ಧಾವಿಸಿದೆ ಎಂದು ಅವರು ಹೇಳಿದರು.

‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸವು ಪ್ರಮುಖ ಅಂಶವಾಗಿದೆ. ನಂಬಿಕೆಯು ಶೇ.100ರಷ್ಟಿದ್ದರೆ ನಿಮಗೆ ಬಂಡವಾಳದ ಅಗತ್ಯವೇ ಇಲ್ಲ ಮತ್ತು ನೀವು ನಂಬಿಕೆಯನ್ನು ಕಳೆದುಕೊಂಡರೆ ಎಷ್ಟೇ ಮೊತ್ತದ ಬಂಡವಾಳವೂ ನಿಮ್ಮನ್ನು ರಕ್ಷಿಸುವುದಿಲ್ಲ’ ಎಂದು ಇನ್ನೊಂದು ಸರಕಾರಿ ಸ್ವಾಮ್ಯದ ಬ್ಯಾಂಕಿನ ಅಧಿಕಾರಿ ಹೇಳಿದರು.

ಭಾರತದಲ್ಲಿ ನಿಯಂತ್ರಕರ ನಿಲುವು ಸಾಮಾನ್ಯವಾಗಿ, ಯಾವುದೇ ಬೆಲೆ ತೆತ್ತಾದರೂ ಠೇವಣಿದಾರರ ಹಣವನ್ನು ರಕ್ಷಿಸಬೇಕು ಎನ್ನುವುದಾಗಿದೆ. ಯೆಸ್ ಬ್ಯಾಂಕ್ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ, ಅದು ಸಂಕಷ್ಟದಲ್ಲಿದ್ದಾಗ ಎಸ್ಬಿಐ ನೇತೃತ್ವದಲ್ಲಿ ಅದಕ್ಕೆ ಬಹಳಷ್ಟು ಹಣಕಾಸು ಬೆಂಬಲವನ್ನು ಒದಗಿಸಲಾಗಿತ್ತು ಎಂದು SBI ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದರು.

ಆದರೂ SVB ವೈಫಲ್ಯವು ಶೇರು ಮಾರುಕಟ್ಟೆಗಳಲ್ಲಿ ಅಳುಕನ್ನು ಸೃಷ್ಟಿಸಿದೆ, ಬ್ಯಾಂಕ್ ಶೇರುಗಳು ಕುಸಿಯುತ್ತಿವೆ ಮತ್ತು ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ.

ಯಾವೆಲ್ಲ ಬ್ಯಾಂಕುಗಳು ಡಿ-ಸಿಬ್ಗಳು?

ಎಸ್ಬಿಐ,ಐಸಿಐಸಿಐ ಮತ್ತು ಎಚ್ಡಿಎಫ್ಸಿ ಬ್ಯಾಂಕುಗಳನ್ನು ಡಿ-ಸಿಬ್ಗಳನ್ನಾಗಿ RBI ವರ್ಗೀಕರಿಸಿದೆ. ಈ ಬ್ಯಾಂಕುಗಳು ತಮ್ಮ ಕಾರ್ಯಾಚರಣೆಗಳ ಸುರಕ್ಷತೆಗಾಗಿ ಹೆಚ್ಚುವರಿ ಬಂಡವಾಳ ಮತ್ತು ನಿಬಂಧನೆಗಳನ್ನು ಹೊಂದಿರುತ್ತವೆ.

ಜಾಗತಿಕ ಸಿಬ್ಗಳ ಪಟ್ಟಿಯಲ್ಲಿ ಜೆಪಿ ಮಾರ್ಗನ್, ಸಿಟಿಬ್ಯಾಂಕ್, ಎಚ್ಎಸ್ಬಿಸಿ, ಬ್ಯಾಂಕ್ ಆಫ್ ಅಮೆರಿಕಾ ಸೇರಿದಂತೆ 30 ಬ್ಯಾಂಕುಗಳಿದ್ದು, ಈ ಪಟ್ಟಿಯಲ್ಲಿ ಯಾವುದೇ ಭಾರತೀಯ ಬ್ಯಾಂಕ್ ಇಲ್ಲ.

ಮುನ್ನೆಚ್ಚರಿಕೆ ಏಕೆ ಅಗತ್ಯ?

ಎಲ್ಲಿಯೇ ದೊಡ್ಡ ಬ್ಯಾಂಕೊಂದು ಪತನಗೊಂಡರೆ ಅದು ವಿಶ್ವಾದ್ಯಂತ ಸಾಂಕ್ರಾಮಿಕ ಪರಿಣಾಮವನ್ನು ಬೀರಬಲ್ಲದು. ಬ್ಯಾಂಕು ದೇಶಿಯ ಬ್ಯಾಂಕಿಂಗ್ ಚಟುವಟಿಕೆಗಳ ಗಣನೀಯ ಭಾಗವನ್ನು ಹೊಂದಿದ್ದರೆ ಅಂತಹ ಬ್ಯಾಂಕಿನ ವೈಫಲ್ಯವು ದೇಶಿಯ ಆರ್ಥಿಕತೆಗೆ ಹಾನಿಯನ್ನುಂಟು ಮಾಡುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಹೀಗಾಗಿ ದೊಡ್ಡ ಬ್ಯಾಂಕಿನ ವೈಫಲ್ಯವು ಹಣಕಾಸು ವ್ಯವಸ್ಥೆಗೆ ಮತ್ತು ದೇಶಿಯ ನೈಜ ಆರ್ಥಿಕತೆಗೆ ಹಾನಿಯನ್ನುಂಟು ಮಾಡುವ ಹೆಚ್ಚಿನ ಸಂಭವನೀಯತೆ ಇರುತ್ತದೆ ಮತ್ತು ಒಟ್ಟಾರೆಯಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ವಿಶ್ವಾಸವನ್ನು ಕೆಡಿಸುವ ಸಾಧ್ಯತೆಯೂ ಹೆಚ್ಚು. RBI ಪ್ರಕಾರ ಬ್ಯಾಂಕಿನ ಗಾತ್ರವು ಇತರ ಯಾವುದೇ ಸೂಚಕಗಳಿಗಿಂತ ಮುಖ್ಯವಾದ ವ್ಯವಸ್ಥಿತ ಪ್ರಮುಖತೆಯ ಅಳತೆಗೋಲಾಗಿರುತ್ತದೆ,ಆದ್ದರಿಂದ ಗಾತ್ರ ಸೂಚಕಗಳಿಗೆ ಇತರ ಸೂಚಕಗಳಿಗಿಂತ ಹೆಚ್ಚಿನ ಸ್ಥಾನವನ್ನು ನೀಡಲಾಗುತ್ತದೆ.

ಒಂದು ಬ್ಯಾಂಕು ಇತರ ಬ್ಯಾಂಕುಗಳೊಂದಿಗೆ ಹೆಚ್ಚಿನ ಅಂತರ್ಸಂಪರ್ಕ (ಒಪ್ಪಂದದ ಹೊಣೆಗಾರಿಕೆ)ವನ್ನು ಹೊಂದಿದ್ದರೆ ಅದರ ವೈಫಲ್ಯವು ಇತರ ಬ್ಯಾಂಕುಗಳ ನಷ್ಟ ಅಥವಾ ವೈಫಲ್ಯದ ಸಾಧ್ಯತೆಯನ್ನು ಹೆಚ್ಚಿಸಬಹುದು. ಈ ಸರಣಿ ಪರಿಣಾಮವು ಆಯವ್ಯಯದ ಎರಡೂ ಬದಿಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಆಯವ್ಯಯದ ‘ಫಂಡಿಂಗ್’ಬದಿಯಲ್ಲಿ ಮತ್ತು ‘ಅಸೆಟ್ಸ್’ ಬದಿಯಲ್ಲಿ ಅಂತರ್ಸಂಪರ್ಕವಿರಬಹುದು. ಇಂತಹ ಸಂಪರ್ಕಗಳು ಹೆಚ್ಚಾದಷ್ಟೂ ಅಪಾಯದ ಸಾಧ್ಯತೆಯೂ ಹೆಚ್ಚಾಗುತ್ತದೆ ಮತ್ತು ಇದು ಹಣಕಾಸು ಕ್ಷೇತ್ರದಲ್ಲಿ ಭೀತಿಗೆ ಕಾರಣವಾಗಬಹುದು.

ಕೃಪೆ: indianexpress.com

Similar News