ಚೀನಾವು ಲಕ್ಷಾಂತರ ಟಿಬೆಟಿಯನ್ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸುತ್ತಿದೆ: ವಿಶ್ವಸಂಸ್ಥೆ ವರದಿ

Update: 2023-03-15 17:09 GMT

ಜಿನೆವಾ, ಮಾ.15: ಚೀನಾವು ಒಂದು ದಶಲಕ್ಷ ಟಿಬೆಟನ್ ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸಿ ಬಲವಂತವಾಗಿ ಬೋರ್ಡಿಂಗ್ ಶಾಲೆಗೆ ದಾಖಲಿಸುತ್ತಿದೆ. ಪ್ರಬಲವಾದ ಹಾನ್‍ಚೀನೀ ಸಂಸ್ಕೃತಿಗೆ ಅವರನ್ನು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ಸಂಯೋಜಿಸುವ ಪ್ರಯತ್ನದ ಭಾಗವಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ವರದಿ ಮಾಡಿದ್ದಾರೆ.   

ಹಾನ್‍ಚೀನೀಸ್ ಅಥವಾ ಹಾನ್ ಜನರು ಪೂರ್ವಏಶ್ಯಾದ ಚೀನಾ ಮೂಲದ ಜನಾಂಗೀಯ ಗುಂಪಿಗೆ ಸೇರಿದವರು. `ಚೀನಾ ಸರಕಾರ ಆರಂಭಿಸಿರುವ ಸರಣಿ ವಸತಿಶಾಲೆಗಳಲ್ಲಿ ಸುಮಾರು 1 ದಶಲಕ್ಷದಷ್ಟು ಟಿಬೆಟಿಯನ್ ಮಕ್ಕಳನ್ನು  ಬಲವಂತವಾಗಿ ದಾಖಲಿಸಲಾಗಿದ್ದು, ಅವರ ಟಿಬೆಟನ್ ಸಾಂಸ್ಕೃತಿಕ ಅಸ್ಮಿತೆಯನ್ನು ಅಳಿಸಿಹಾಕಿ ಅವರು ಚೀನಾದ ಹಾನ್‍ ಸಾಂಸ್ಕೃತಿಯನ್ನು ಒಪ್ಪಿಕೊಳ್ಳುವಂತೆ ಮನಪರಿವರ್ತನೆ  ಮಾಡಲಾಗುತ್ತಿದೆ' ಎಂದು ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 

ಇತ್ತೀಚಿನ ವರ್ಷಗಳಲ್ಲಿ ಟಿಬೆಟಿಯನ್ ಮಕ್ಕಳ ವಸತಿಶಾಲೆಯ ವ್ಯವಸ್ಥೆಯು ಅಂತರಾಷ್ಟ್ರೀಯ  ಮಾನವಹಕ್ಕುಗಳ ಮಾನದಂಡಗಳಿಗೆ ವಿರುದ್ಧವಾಗಿ ಟಿಬೆಟಿಯನ್ನರನ್ನು ಹಾನ್ ಸಾಂಸ್ಕೃತಿಗೆ ಸಂಯೋಜಿಸುವ ಉದ್ದೇಶದಿಂದ ಕಡ್ಡಾಯವಾದ ಬೃಹತ್ ಪ್ರಮಾಣದ ಕಾರ್ಯಕ್ರಮವಾಗಿರುವುದು ಕಳವಳಕಾರಿಯಾಗಿದೆ ಎಂದು  ಸಮಿತಿಯ ಮೂವರು ತಜ್ಞರಾದ ಫೆರ್ನಾಂಡ್ ಡಿವರೇನಿಯಸ್, ಫರೀದಾ ಶಹೀದ್ ಮತ್ತು ಅಲೆಕ್ಸಾಂಡ್ರಾ ಕ್ಸಂಥಾಕಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಈ ವರದಿಯನ್ನು ಚೀನಾ ತಿರಸ್ಕರಿಸಿದೆ. ಕಳೆದ ವಾರ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ `ಇದು ಖಂಡಿತಾ ಸತ್ಯವಲ್ಲ ಮತ್ತು ಚೀನಾದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪುಅಭಿಪ್ರಾಯ ಮೂಡಿಸುವ ಮತ್ತು ಚೀನಾದ ಪ್ರತಿಷ್ಟೆಗೆ ಮಸಿ ಬಳಿಯುವ ಮತ್ತೊಂದು ಆರೋಪವಾಗಿದೆ. ಸ್ಥಳೀಯ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸಲು ಚೀನೀ ಪ್ರಾಂತದಾದ್ಯಂತ ವಸತಿಶಾಲೆಗಳನ್ನು ತೆರೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ಶಾಲೆಗಳಲ್ಲಿ ವಸತಿ, ಊಟ ಹಾಗೂ ಇತರ ಸೇವೆಗಳನ್ನು ಒದಗಿಸಲಾಗುತ್ತಿದೆ. ಇಲ್ಲಿ ಮುಚ್ಚುಮರೆಯಿಲ್ಲ ಮತ್ತು ಮಿಲಿಟರಿ ಶೈಲಿಯ ಕಾರ್ಯನಿರ್ವಹಣೆ ನಡೆಯುತ್ತಿಲ್ಲ'  ಎಂದು ಹೇಳಿದ್ದಾರೆ.

ಟಿಬೆಟಿಯನ್ ಅಸ್ಮಿತೆಯನ್ನು ಚೀನಾದ ಹಾನ್ ಸಾಂಸ್ಕೃತಿಯೊಂದಿಗೆ ಬಲವಂತವಾಗಿ ಸಂಯೋಜಿಸುವುದು ಚೀನಾದ ಉದ್ದೇಶವಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಖಂಡಿಸಿರುವ ಮಾವೊ ನಿಂಗ್ ` ಚೀನಾದ ಟಿಬೆಟ್‍ನ ಪ್ರಕರಣವನ್ನು ಗಮನಿಸಿದರೆ, ಇದು ಎತ್ತರದ ಪ್ರದೇಶವಾಗಿದೆ ಮತ್ತು ಚದುರಿದ ಜನಸಂಖ್ಯೆಯನ್ನು ಹೊಂದಿದ್ದು  ಕುರಿಗಾಹಿ ಕುಟುಂಬಗಳ ಮಕ್ಕಳು ಶಾಲೆಗೆ ಹೋಗಬೇಕಾದರೆ ದೂರ ಪ್ರಯಾಣ ಮಾಡಬೇಕಾಗಿದೆ.

ವಿದ್ಯಾರ್ಥಿಗಳು ವಾಸಿಸುವ ಪ್ರತೀ ಪ್ರದೇಶದಲ್ಲಿ ಶಾಲೆಗಳನ್ನು ನಿರ್ಮಿಸಿದರೆ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ' ಎಂದಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರತಿನಿಧಿಗಳು `ಟಿಬೆಟಿಯನ್ ಮಕ್ಕಳಿಗೆ ಒದಗಿಸಿರುವ ಪಠ್ಯಪುಸ್ತಕಗಳು, ವಸತಿ ಶಾಲೆಯ ಪರಿಸರ ಎಲ್ಲವೂ ಹಾನ್ ಸಂಸ್ಕøತಿಗೆ ಅನುಗುಣವಾಗಿದೆ. ಎಲ್ಲಿಯೂ ಟಿಬೆಟ್‍ನ ಇತಿಹಾಸ, ಧರ್ಮ ಅಥವಾ ದೇಶಭ್ರಷ್ಟ ಆಧ್ಯಾತ್ಮಿಕ ನಾಯಕ ದಲಾಯಿ ಲಾಮರ ಬಗ್ಗೆ ಉಲ್ಲೇಖವಿಲ್ಲ' ಎಂದು ಪ್ರತಿಪಾದಿಸಿದ್ದಾರೆ. 

Similar News