ಬಾಲ್ಯ ವಿವಾಹಗಳ ವಿರುದ್ಧ ದಾಳಿಯನ್ನು ಸಮರ್ಥಿಸಿಕೊಳ್ಳಲು ಹಿಂದುಗಳನ್ನು ’ನಮ್ಮ ಜನರು’ ಎಂದು ಬಣ್ಣಿಸಿದ ಅಸ್ಸಾಂ ಸಿಎಂ‌

Update: 2023-03-16 14:07 GMT

ಗುವಾಹಟಿ,ಮಾ.16: ಬಾಲ್ಯ ವಿವಾಹಗಳ ವಿರುದ್ಧ ಪೊಲೀಸರ ಇತ್ತೀಚಿನ ದಾಳಿಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ ಎಂಬ ಆರೋಪಗಳನ್ನು ತಳ್ಳಿ ಹಾಕುವ ಪ್ರಯತ್ನದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಹಿಂದುಗಳನ್ನು ‘ನಮ್ಮ ಜನರು ’ಎಂದು ಬಣ್ಣಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರಿಸಿದ ಸಂದರ್ಭದಲ್ಲಿ ಶರ್ಮಾರ ಈ ಹೇಳಿಕೆ ಹೊರಬಿದ್ದಿದೆ. ‘ನೀವು (ಪ್ರತಿಪಕ್ಷ ಶಾಸಕರು) ಗಮನಿಸುತ್ತೀರಿ ಎಂದು ಗೊತ್ತಿತ್ತು,ಹೀಗಾಗಿಯೇ ನಮ್ಮ ಜನರನ್ನು ಹೆಚ್ಚು ಬಂಧಿಸಿದ್ದೇವೆ. ನಿಮಗೆ ಕೋಮುವಾದದ ಹುಯಿಲೆಬ್ಬಿಸಲು ಅವಕಾಶ ಸಿಗದಂತೆ ದಿಬ್ರುಗಡದಿಂದಲೂ ಕೆಲವರನ್ನು ಬಂಧಿಸುವಂತೆ ಅಲ್ಲಿಯ ಎಸ್ಪಿಗೆ ನಾನು ಸೂಚಿಸಿದ್ದೆ’ ಎಂದು ಶರ್ಮಾ ಹೇಳಿದರು.

ಅಪ್ಪರ್ ಅಸ್ಸಾಮಿನಲ್ಲಿರುವ ದಿಬ್ರುಗಡ ಹಿಂದುಗಳ ಪ್ರಾಬಲ್ಯದ ಜಿಲ್ಲೆಯಾಗಿದೆ.

ಅಸ್ಸಾಂ ಸರಕಾರವು ಫೆಬ್ರವರಿಯಿಂದ ರಾಜ್ಯಾದ್ಯಂತ ಬಾಲ್ಯವಿವಾಹಗಳ ವಿರುದ್ಧ ದಾಳಿಗಳನ್ನು ನಡೆಸುತ್ತಿದೆ. ಪೊಲೀಸರು 14 ವರ್ಷಕ್ಕಿಂತ ಕೆಳಗಿನ ಬಾಲಕಿಯರನ್ನು ಮದುವೆಯಾದವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಮತ್ತು 14ರಿಂದ 18 ವರ್ಷ ವಯೋಮಾನದ ಬಾಲಕಿಯರನ್ನು ಮದುವೆಯಾದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ದಾಳಿಗಳನ್ನು ಆರಂಭಿಸಿದಾಗಿನಿಂದ ಬಂಧಿತ ಮುಸ್ಲಿಮರು ಮತ್ತು ಹಿಂದುಗಳ ಅನುಪಾತ 55:45ರಷ್ಟಿದೆ ಎಂದು ಶರ್ಮಾ ಬುಧವಾರ ತಿಳಿಸಿದರು. 2011ರ ಜನಗಣತಿಯಂತೆ ಅಸ್ಸಾಮಿನ ಜನಸಂಖ್ಯೆಯ ಶೇ.61.47ರಷ್ಟು ಹಿಂದುಗಳಾಗಿದ್ದರೆ,ಮುಸ್ಲಿಮರ ಪ್ರಮಾಣ ಶೇ.34.22ರಷ್ಟಿದೆ.

ಮುಸ್ಲಿಮ್ ಬಾಹುಳ್ಯದ ಧುಬ್ರಿ ಮತ್ತು ದಕ್ಷಿಣ ಸಲ್ಮರಾ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ ಬಾಲ್ಯ ವಿವಾಹಗಳು ನಡೆದಿವೆ,ದಿಬ್ರುಗಡ ಮತ್ತು ತಿನ್ಸುಕಿಯಾದಂತಹ ಹಿಂದುಗಳ ಬಾಹುಳ್ಯದ ಜಿಲ್ಲೆಗಳಲ್ಲಿ ಅಲ್ಲ ಎನ್ನುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ವರದಿಯು ತೋರಿಸಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು.

ತಮ್ಮ ಕುಟುಂಬ ಸದಸ್ಯರ ಬಂಧನಗಳು ಮತ್ತು ಅವರ ವಿರುದ್ಧ ಪೊಲೀಸ್ ಕ್ರಮಗಳನ್ನು ರಾಜ್ಯದಲ್ಲಿಯ ನೂರಾರು ಮಹಿಳೆಯರು ಪ್ರತಿಭಟಿಸುತ್ತಿದ್ದಾರೆ. ಸಾಮೂಹಿಕ ಬಂಧನಗಳಿಂದಾಗಿ ಹಾಲಿ ಇರುವ ಜೈಲುಗಳಲ್ಲಿ ಸ್ಥಳಾವಕಾಶದ ಕೊರತೆಯುಂಟಾಗಿದೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಹೆಚ್ಚಿನ ಜನರನ್ನು ಬಂಧಿಸಲಾಗಿದೆ. 

ಬಿಸ್ವನಾಥ, ಬಾರ್ಪೇಟಾ, ಬಕ್ಸಾ, ಧುಬ್ರಿ, ಹೋಜಾಯಿ, ಬೊಂಗಾಯಿಗಾಂವ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ತಲಾ 100ಕ್ಕೂ ಅಧಿಕ ಬಂಧನಗಳನ್ನು ನಡೆಸಲಾಗಿದೆ.
ಬಾಲ್ಯ ವಿವಾಹದ ವಿರುದ್ಧ ಪೊಲೀಸರ ದಾಳಿಗಳು ಅರ್ಥಹೀನವಾಗಿವೆ, ಏಕೆಂದರೆ ಬಾಲ್ಯ ವಿವಾಹಗಳ ಹಿಂದಿನ ಬಡತನ ಮತ್ತು ಅನಕ್ಷರತೆಯಂತಹ ಸಮಸ್ಯೆಗಳನ್ನು ಅವು ಬಗೆಹರಿಸುವುದಿಲ್ಲ ಎಂದು ಹಲವಾರು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

Similar News