ನಕಲಿ ಶೈಕ್ಷಣಿಕ ದಾಖಲಾತಿ ಪತ್ರಗಳ ಸಲ್ಲಿಕೆ: ಕೆನಡದಿಂದ 700 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಸಾಧ್ಯತೆ

Update: 2023-03-16 17:22 GMT

ಹೊಸದಿಲ್ಲಿ,ಮಾ.17: ಕೆನಡದ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ದಾಖಲಾತಿಯ ಕುರಿತಾದ ದಾಖಲೆಪತ್ರಗಳು ನಕಲಿಯೆಂಬುದನ್ನು ಪತ್ತೆಯಾದ ಹಿನ್ನೆಲೆಯಲ್ಲಿ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಗಡಿಪಾರಿನ ಭೀತಿಯನ್ನು ಎದುರಿಸುತ್ತಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಕನಡದ ಗಡಿ ಭದ್ರತಾ ಏಜೆನ್ಸಿ (ಸಿಬಿಎಸ್ಎ)ಯಿಂದ ಗಡಿಪಾರು ಪತ್ರಗಳು ಬಂದಿರುವುದಾಗಿ ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಜಲಂಧರ್ನಲ್ಲಿರುವ ಶೈಕ್ಷಣಿಕ ವಲಸೆ ಸೇವಾ ಸಂಸ್ಥೆಯ ಮೂಲಕ ಸುಮಾರು 700 ವಿದ್ಯಾರ್ಥಿಗಳು ಕೆನಡದಲ್ಲಿ ಅಧ್ಯಯನ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ರಿಜೇಶ್ ಮಿಶ್ರಾ ನೇತೃತ್ವ ದ ಈ ಸಂಸ್ಥೆಯು ಕೆನಡದ ಪ್ರತಿಷ್ಠಿ ಶಿಕ್ಷಣ ಸಂಸ್ಥೆ ಹಂಬರ್ ಕಾಲೇಜ್ನಲ್ಲಿ ದಾಖಲಾತಿ ಶುಲ್ಕ ಸೇರಿದಂತೆ ಎಲ್ಲಾ ವೆಚ್ಚಗಳಿಗಾಗಿ 16 ಲಕ್ಷ ರೂ.ಗೂ ಅಧಿಕ ಶುಲ್ಕವನ್ನು ಪ್ರತಿ ವಿದ್ಯಾರ್ಥಿಗೂ ವಿಧಿಸುತ್ತಿತ್ತು. ಆದರೆ ವಿಮಾನಯಾನದರ ಹಾಗೂ ಭದ್ರತಾ ಠೇವಣಿಗಳನ್ನು ಪ್ರತ್ಯೇಕವಾಗಿ ವಿಧಿಸುತ್ತಿತ್ತು.

 ಈ ವಿದ್ಯಾರ್ಥಿಗಳು ಅಧ್ಯಯನದ ಆಧಾರದಲ್ಲಿ 2018-19ರ ಸಾಲಿನಲ್ಲಿ ಕೆನಡಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳು ಕೆನಡದಲ್ಲಿ ಖಾಯಂ ವಾಸ್ತವ್ಯಕ್ಕಾಗಿ ಅರ್ಜಿ ಸಲ್ಲಿಸಿದಾಗ, ಈ ವೀಸಾ ವಂಚನೆ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಪ್ರವೇಶ ಪತ್ರಗಳನ್ನು ಸಿಬಿಎಸ್ಎ ಪರಿಶೀಲಿಸಿದಾಗ ಅವು ನಕಲಿಯೆಂಬುದು ಬೆಳಕಿಗೆ ಬಂದಿದೆ.

 ಈ ವಿದ್ಯಾರ್ಥಿಗಳು ಸಲ್ಲಿಸಿದ ಆಡ್ಮಿಶನ್ ಆಫರ್ಗೆ ಸಂಬಂಧಿಸಿದ ದಾಖಲಾತಿ ಪತ್ರಗಳು ನಕಲಿಯೆಂದು ಮನವರಿಕೆಯಾದ ಶಿಕ್ಷಣ ಸಂಸ್ಥೆಗಳು ಅವರನ್ನು ಬೇರೆ ಕಾಲೇಜುಗಳಿಗೆ ಹೋಗುವಂತೆ ಸೂಚನೆ ನೀಡಿದ್ದವು. ಹೀಗೆ ಕಾಲೇಜು ಬದಲಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದೆ ಎಂಬ ವಿಚಾರವು ಈಗ ಬೆಳಕಿಗೆ ಬಂದಿದೆ.

Similar News