×
Ad

ಮಿಲಿಟರೀಕರಣದ ಹಾದಿಗೆ ಜಪಾನ್ ಮರಳುವುದು ಅಪಾಯಕಾರಿ: ಚೀನಾ

Update: 2023-03-16 23:15 IST

ಬೀಜಿಂಗ್, ಮಾ.16: ಜಪಾನ್ ಇತ್ತೀಚಿನ ವರ್ಷಗಳಲ್ಲಿ ತಥಾಕಥಿತ `ಬಾಹ್ಯ ಬೆದರಿಕೆ'ಯ ಹೆಸರಿನಲ್ಲಿ ತನ್ನ ರಕ್ಷಣಾ ಬಜೆಟ್ನಲ್ಲಿ ಭಾರೀ ಏರಿಕೆ ಮಾಡಿದೆ ಮತ್ತು ಮಿಲಿಟರಿಕರಣದ ಹಾದಿಗೆ ಮರಳುವ ಈ ಪೃವ್ರತ್ತಿ ಅತ್ಯಂತ ಅಪಾಯಕಾರಿಯಾಗಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ.

ಇತಿಹಾಸದಿಂದ ಪಾಠ ಕಲಿಯುವುದರ ಜತೆಗೆ, ಮಿಲಿಟರಿ ಭದ್ರತೆಯ ವಿಷಯಕ್ಕೆ ಸಂಬಂಧಿಸಿದ  ತನ್ನ ಮಾತು ಮತ್ತು ಕೃತ್ಯದ ಬಗ್ಗೆ ಜಪಾನ್ ಎಚ್ಚರಿಕೆ ವಹಿಸಬೇಕು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಹಾನಿ ಮಾಡುವ ಕೆಲಸಗಳನ್ನು ಜಪಾನ್ ನಿಲ್ಲಿಸಬೇಕು ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ತಾನ್ ಕೆಫೆಯ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ಸಂದರ್ಭ ಜಪಾನ್ ವಿರುದ್ಧ ವಾಗ್ದಾಳಿ ನಡೆಸಿದ ಚೀನಾದ ವಿದೇಶಾಂಗ ಇಲಾಖೆ, ಪೂರ್ವ ಚೀನೀ ಸಮುದ್ರದಲ್ಲಿ ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಜಪಾನ್ನ ಕ್ರಮ ಚೀನೀ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಸಮುದಾಯ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದಿದೆ.

ಪೂರ್ವ ಚೀನೀ ಸಮುದ್ರದ ದ್ವೀಪಗಳ ಅಧಿಕಾರಕ್ಕೆ ಸಂಬಂಧಿಸಿ ಉಭಯ ದೇಶಗಳ ನಡುವೆ ವಿವಾದವಿದೆ. ಈ ದ್ವೀಪಗಳು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿದೆ ಎಂದು ಪ್ರತಿಪಾದಿಸುವ ಚೀನಾ ಇದಕ್ಕೆ ದಿಯೊಯು ದ್ವೀಪ ಎಂದು ಹೆಸರಿಟ್ಟಿದೆ. ಆದರೆ ಚೀನಾದ ಪ್ರತಿಪಾದನೆಯನ್ನು ತಳ್ಳಿಹಾಕಿರುವ ಜಪಾನ್, ಈ ದ್ವೀಪಗಳನ್ನು ಸೆಂಕಾಕು ದ್ವೀಪ ಎಂದು ಕರೆಯುತ್ತಿದೆ.  

 ಕಳೆದ ವರ್ಷ 5 ವರ್ಷಾವಧಿಯ ಜಪಾನ್ 315 ಶತಕೋಟಿ ಡಾಲರ್ ವೆಚ್ಚದ ಮಿಲಿಟರಿ ವಿಸ್ತರಣೆ ಯೋಜನೆಯನ್ನು ಅನಾವರಣಗೊಳಿಸಿದ್ದು ಚೀನಾವು ಪೂರ್ವ ಚೀನಾ ಸಮುದ್ರದಲ್ಲಿ ಬಲವನ್ನು ಬಳಸದಂತೆ ತಡೆಯುವ ಉದ್ದೇಶ ಇದರ ಹಿಂದಿದೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಮಧ್ಯೆ, 12 ವರ್ಷಗಳ ಬಳಿಕ ದಕ್ಷಿಣ ಕೊರಿಯಾ ಮತ್ತು ಜಪಾನ್ನ ಅಧ್ಯಕ್ಷರು ಪರಸ್ಪರ ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯದ ಸುಧಾರಣೆ ನಿಟ್ಟಿನಲ್ಲಿ ಮಾತುಕತೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ, ಇತಿಹಾಸವನ್ನು ಮರೆತು ದಕ್ಷಿಣ ಕೊರಿಯಾ ಜತೆ ಜಪಾನ್ ಒಕ್ಕೂಟ ಸ್ಥಾಪಿಸಬಾರದು ಎಂದು ಆಗ್ರಹಿಸಿದೆ.

Similar News