ಛಿದ್ರಗೊಂಡ ಚಳವಳಿಗಳು ಮತ್ತು ರಂಗಭೂಮಿ

Update: 2023-03-17 06:40 GMT

‘‘ನಮ್ಮ ಕಾಲದಲ್ಲಿ ಸಾಮಾಜಿಕ ಚಳವಳಿಗಳಿದ್ದವು. ಕಾರ್ಮಿಕರ, ದಲಿತರ, ವಿದ್ಯಾರ್ಥಿಗಳ, ರೈತರ ಚಳವಳಿಗಳಿದ್ದವು. ಈ ಚಳವಳಿಗಳಿಂದ ರಂಗಭೂಮಿ ಪ್ರೇರಣೆಗೊಂಡಿತು. ದಲಿತರ ಚಳವಳಿಗೆ ಸಂಬಂಧಿಸಿ ‘ಒಡಲಾಳ’, ’ಅಂಬೇಡ್ಕರ್’ ನಾಟಕಗಳು ಪ್ರಯೋಗಗೊಂಡವು. ರೈತ ಚಳವಳಿಗೆ ಸಂಬಂಧಿಸಿ ‘ಚೋಮ’ ನಾಟಕ ಪ್ರಯೋಗಗೊಂಡಿತು. ರಂಗಭೂಮಿಯಿಂದ ಚಳವಳಿಗಳೂ ಪ್ರೇರಣೆಗೊಂಡವು. ಆದರೆ ಈಗ ಸಾಮಾಜಿಕ ಚಳವಳಿಗಳಿಲ್ಲ. ಎಲ್ಲ ಚಳವಳಿಗಳು ಛಿದ್ರಗೊಂಡಿವೆ. ಹಾಗೆಯೇ ರಂಗಭೂಮಿಯೂ ಛಿದ್ರಗೊಂಡಿದೆ. ಆದರೂ ಒಳ್ಳೆಯ ನಾಟಕಗಳು ಪ್ರಯೋಗಗೊಳ್ಳುತ್ತಿವೆ...’’

-ಜೆ. ಲೋಕೇಶ್

‘‘ರಂಗಭೂಮಿಗೆ ಹೊಸ ಹುಡುಗರು ಬರುತ್ತಿದ್ದಾರೆ. ರಂಗ ಚಟುವಟಿಕೆಗಳು ಹೆಚ್ಚಿವೆ. ಆದರೆ ಗುರಿಯಿಲ್ಲ. ನಮಗೆ ಗುರಿಯಿತ್ತು’’ ಎಂದು ಮಾತು ಶುರು ಮಾಡಿದವರು ಹಿರಿಯ ರಂಗಕರ್ಮಿ ಜೆ.ಲೋಕೇಶ್.

‘‘ನಮ್ಮ ಕಾಲದಲ್ಲಿ ಸಾಮಾಜಿಕ ಚಳವಳಿಗಳಿದ್ದವು. ಕಾರ್ಮಿಕರ, ದಲಿತರ, ವಿದ್ಯಾರ್ಥಿಗಳ, ರೈತರ ಚಳವಳಿಗಳಿದ್ದವು. ಈ ಚಳವಳಿಗಳಿಂದ ರಂಗಭೂಮಿ ಪ್ರೇರಣೆಗೊಂಡಿತು. ದಲಿತರ ಚಳವಳಿಗೆ ಸಂಬಂಧಿಸಿ ‘ಒಡಲಾಳ’, ’ಅಂಬೇಡ್ಕರ್’ ನಾಟಕಗಳು ಪ್ರಯೋಗಗೊಂಡವು. ರೈತ ಚಳವಳಿಗೆ ಸಂಬಂಧಿಸಿ ‘ಚೋಮ’ ನಾಟಕ ಪ್ರಯೋಗಗೊಂಡಿತು. ರಂಗಭೂಮಿಯಿಂದ ಚಳವಳಿಗಳೂ ಪ್ರೇರಣೆಗೊಂಡವು. ಆದರೆ ಈಗ ಸಾಮಾಜಿಕ ಚಳವಳಿಗಳಿಲ್ಲ. ಎಲ್ಲ ಚಳವಳಿಗಳು ಛಿದ್ರಗೊಂಡಿವೆ. ಹಾಗೆಯೇ ರಂಗಭೂಮಿ ಛಿದ್ರಗೊಂಡಿದೆ. ಆದರೂ ಒಳ್ಳೆಯ ನಾಟಕಗಳು ಪ್ರಯೋಗಗೊಳ್ಳುತ್ತಿವೆ...’’

ಹೀಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕಾರಂತರ ಕ್ಯಾಂಟೀನಿನಲ್ಲಿ ಲೋಕೇಶ್ ಅವರು ಮಾತನಾಡುತ್ತಲೇ ಸಿಗರೇಟು ಹಚ್ಚಿ ಧಮ್ ಎಳೆಯುವಲ್ಲಿ ಮಗ್ನರಾದರು.

ಅವರ ಊರು ಬೆಂಗಳೂರು. ಓದಿದ್ದು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿ.ಎಸ್ಸಿ. ಆಗ ಉಳ್ಳಾಲ ಶೀಲ್ಡ್ ನಾಟಕ ಸ್ಪರ್ಧೆ ಪ್ರಸಿದ್ಧ. ಬಿ.ಎಸ್ಸಿ. ಓದುವಾಗಲೇ ಉಳ್ಳಾಲ ಶೀಲ್ಡ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಅವರಿಗೆ ರಂಗಭೂಮಿ ನಂಟು ಹೆಚ್ಚಿತು. ಆಗ ಮೈಸೂರು ಸಂಗೀತ ನಾಟಕ ಅಕಾಡಮಿಯ ನಿರ್ದೇಶಕರಾಗಿದ್ದ ಶ್ರೀರಂಗರು ವಿದ್ಯಾರ್ಥಿಗಳಿಗಾಗಿ ರಂಗ ತರಬೇತಿ ಶಿಬಿರ ಏರ್ಪಡಿಸಿದ್ದರು. ಅದು ಮೂರು ತಿಂಗಳವರೆಗೆ ನಡೆಯಿತು. ಬೆಳಗ್ಗೆಯಿಂದ ರಾತ್ರಿಯವರೆಗೆ ಮುಂದುವರಿಯುತ್ತಿತ್ತು. ವೆಂಕಟರಾಮ್, ಬಿ.ವಿ.ಕಾರಂತ, ಪ್ರೇಮಾ ಕಾರಂತ, ಜಿ.ವಿ.ಶಿವಾನಂದ, ಬಿ.ಎಂ.ಶಾ, ಸಾಯಿ ಪರಾಂಜಪೆ ತರಬೇತಿ ನೀಡಿದವರಲ್ಲಿ ಪ್ರಮುಖರು. ಶಿಬಿರ ಮುಗಿದ ಬಳಿಕ ಶ್ರೀರಂಗರು ‘ತಂಡ ಕಟ್ಟಿ’ ಎಂದು ಪ್ರೇರಣೆ ನೀಡಿದಾಗ ‘ಶಕಶೈಲುಷರು’ (Action of century) ತಂಡ ಕಟ್ಟಿದರು. ನಂತರ ಬೆಂಗಳೂರಿನ ಬಯಲು ರಂಗಮಂದಿರದಲ್ಲಿ (ಈಗಿನ ಸಂಸ ಬಯಲು ರಂಗಮಂದಿರ ಬಳಿ) ಸಂಕ್ರಾಂತಿ, ಈಡಿಪಸ್ ಮತ್ತು ಜೋಕುಮಾರಸ್ವಾಮಿ ನಾಟಕಗಳು ಪ್ರಯೋಗಗೊಂಡವು. ಇವು ರಂಗಭೂಮಿಗೆ ತಿರುವು ಕೊಟ್ಟ ನಾಟಕಗಳು. ಈಡಿಪಸ್ ನಾಟಕಕ್ಕೆ ಸ್ಟೇಜ್ ಮ್ಯಾನೇಜರ್ ಆಗಿ ದುಡಿದವರು ಲೋಕೇಶ್. ಬಳಿಕ ಆರ್.ನಾಗೇಶ್ ಅವರೊಂದಿಗೆ ರಂಗ ಸಂಪದ ತಂಡವನ್ನು ಸೇರಿದರು. ‘‘ಈಗಲೂ ರಂಗ ಸಂಪದ ತಂಡವಿದೆ. ಆದರೆ ಚಟುವಟಿಕೆಗಳು ಕಡಿಮೆಯಾಗಿವೆ. ರಂಗ ಸಂಪದದಲ್ಲಿರುವ ಎಲ್ಲರೂ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರು. ಜೊತೆಗೆ ಆರ್.ನಾಗೇಶ್, ವೈಜಯಂತಿ ಕಾಶಿ, ಎನ್.ಕೆ.ರಾಮಕೃಷ್ಣ ಅವರು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ’’ ಎನ್ನುವ ಖುಷಿ ಅವರದು. ಮುಖ್ಯವಾಗಿ ಕಲಾವಿದೆ ಉಮಾಶ್ರೀ ಅವರ ಜೀವಮಾನದ ಪಾತ್ರವಾದ ‘ಒಡಲಾಳ’ವನ್ನು ನಿರ್ವಹಿಸಿದ್ದು ರಂಗ ಸಂಪದದ ಮೂಲಕ.

‘‘ಇತರ ತಂಡಗಳು ವ್ಯಕ್ತಿಯ ಸುತ್ತ ಬೆಳೆದವು. ಆದರೆ ನಮ್ಮ ರಂಗ ಸಂಪದ ತಂಡದ ಸುತ್ತ ನಿರ್ದೇಶಕರು,   ಕಲಾವಿದರು ಬೆಳೆದರು. ಪ್ರಸನ್ನ, ಆರ್. ನಾಗೇಶ್, ಎಚ್.ವಿ.ವೆಂಕಟಸುಬ್ಬಯ್ಯ, ಸಿಜಿಕೆ ಇವರೆಲ್ಲ ಮೊದಲ ನಾಟಕ ನಿರ್ದೇಶಿಸಿದ್ದು ನಮ್ಮ ರಂಗ ಸಂಪದ ತಂಡಕ್ಕೆ. ಸುದೇಶ್ ಮಹಾನ್, ಶಶಿಧರ ಅಡಪ, ಚಡ್ಡಿ ನಾಗೇಶ್ ಮೊದಲಾದವರು ನೇಪಥ್ಯದಲ್ಲಿ ಬೆಳೆದರು. ಬಿ.ವಿ. ವೈಕುಂಠರಾಜು, ಕಿ.ರಂ.ನಾಗರಾಜ್, ಎಚ್.ಎಸ್.ಶಿವಪ್ರಕಾಶ್ ಅವರಿಂದ ನಾಟಕಗಳನ್ನು ಬರೆಸಿದೆವು. ನಿಸರ್ಗಪ್ರಿಯ, ಎಚ್.ಎಸ್.ವೆಂಕಟೇಶಮೂರ್ತಿ, ಹೂಲಿ ಶೇಖರ್ ಅವರಿಗೆ ಹೊಸ ನಾಟಕ ರಚಿಸಿರೆಂದು ಒತ್ತಾಯಿಸಿದೆವು’’ ಎಂದು ಅವರು ಉತ್ಸಾಹದಿಂದ ಸ್ಮರಿಸಿದರು.

ಗಮನಾರ್ಹ ಎಂದರೆ; ರಂಗ ಸಂಪದದ ಮೂಲಕ ಕನ್ನಡ ನಾಟಕ ರಚನಾ ಸ್ಪರ್ಧೆಯನ್ನು ಅವರು ಏರ್ಪಡಿಸಿದ ಪರಿಣಾಮ ೧೫-೨೦ ನಾಟಕಕಾರರು ಮೂಡಿ ಬಂದರು. ಈ ಯೋಜನೆಯನ್ನು ೨೦೧೭-೨೦೧೮ರ ವರೆಗೆ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದ ಲೋಕೇಶ್ ಮುಂದುವರಿಸಿದರು. ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದಾಗ ವ್ರತ ಹಿಡಿದವರಂತೆ ನಿತ್ಯ ಬೆಳಗ್ಗೆ ಹತ್ತು ಗಂಟೆಗೇ ಅಕಾಡಮಿ ಕಚೇರಿಯಲ್ಲಿರುತ್ತಿದ್ದ ಅವರು, ರಂಗಭೂಮಿ ಪ್ರಾಧಿಕಾರ ರಚನೆ ಆಗಬೇಕೆಂದು ಒತ್ತಾಯಿಸಿದವರು. ಭಿನ್ನಾಭಿಪ್ರಾಯಗಳ ನಡುವೆ ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ ಅವರಿಗೆ ಈಗ ೭೨ ವರ್ಷ ವಯಸ್ಸು. ಇದೊಂದೇ ಮಾನದಂಡವಾಗಿ ನೋಡದೆ ಎನ್.ಕೆ.ಮೋಹನ್‌ರಾಂ ಅವರು ‘ಶೋ ಶುಡ್ ಗೊ ಆನ್’ ಎಂಬ ಅಭಿನಂದನಾ ಗ್ರಂಥವನ್ನು ಸಂಪಾದಿಸಿದ್ದು, ಬೆಂಗಳೂರಿನ ಚಾರುಮತಿ ಪ್ರಕಾಶನದ ಬಿ.ಎಸ್.ವಿದ್ಯಾರಣ್ಯ ಪ್ರಕಟಿಸಿದ್ದಾರೆ. ಈ ಕೃತಿಗೆ ‘ಪ್ರಶಸ್ತಿ, ಅಭಿನಂದನೆಗಳ ಮಹಾಪೂರದ ಈ ಕಾಲದಲ್ಲಿ’ ಎನ್ನುವ ಎನ್.ಕೆ.ಮೋಹನ್‌ರಾಂ ಅವರ ಪ್ರಸ್ತಾವನೆ ಕುತೂಹಲ ಮೂಡಿಸುತ್ತದೆ. ಇದರಲ್ಲಿ ಕೊನೆಗೆ ‘‘ಎಚ್ಚರ ವಹಿಸಬೇಕಾದ್ದು; ಅಭಿನಂದನೆ, ಗೌರವದ ಹೊತ್ತಿಗೆಗಳು ಸುಳ್ಳು, ಮಿಥ್ಯೆಗಳ ಕಂತೆಯಾಗಬಾರದು. ಹೊಗಳಿಕೆ, ಉತ್ಪ್ರೇಕ್ಷೆ, ಸ್ವಪ್ರತಿಷ್ಠೆಗಳ ಹೊರೆಯಾಗಬಾರದು. ಅಂತೆಯೇ ಪುಟಗಳ ಸಂಖ್ಯೆ, ಪುಸ್ತಕದ ವಜನು, ಘನತೆ, ಗೌರವಗಳನ್ನು ಹೆಚ್ಚಿಸಲಾರವು ಕೂಡಾ. ಬರಹಗಾರರು ಸಮಕಾಲೀನ, ಸಹಪಾಠಿ, ಒಡನಾಡಿಗಳಾಗಿದ್ದರೆ ಹಾಗೂ ಕಂಡವರಾಗಿದ್ದರೆ ಈ ಎಚ್ಚರಿಕೆಯ ಜಾರಿ ಸಾಧ್ಯ. ಇದು ಇಲ್ಲಿ ಸಾಧ್ಯವಾಗಿದೆ’’ ಎನ್ನುವ ಮಾತು ನಿಜ.

ಇದು ಲೋಕೇಶ್ ಅವರ ಕುರಿತಾದ ಅಭಿನಂದನೆಯ ಗ್ರಂಥವಾದರೂ ರಂಗಭೂಮಿ ಚರಿತ್ರೆಯನ್ನು ದಾಖಲಿಸಿದ ಪ್ರಮುಖ ಕೃತಿಯೂ ಹೌದು.

Similar News

ಜಗದಗಲ
ಜಗ ದಗಲ