‌ಮಹಾರಾಷ್ಟ್ರ ಪ್ರಕರಣ: CJI ಅವರನ್ನು ಟ್ರೋಲ್‌ ಮಾಡುತ್ತಿರುವುದಕ್ಕೆ ಆಕ್ಷೇಪಿಸಿ ರಾಷ್ಟ್ರಪತಿಗಳಿಗೆ ವಿಪಕ್ಷಗಳ ಪತ್ರ

Update: 2023-03-17 15:00 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ (CJI DY Chandrachud) ಅವರ ನೇತೃತ್ವದ ಸಾಂವಿಧಾನಿಕ ಪೀಠವು ಮಹಾರಾಷ್ಟ್ರದಲ್ಲಿನ ಸರಕಾರ ರಚನೆ ಹಾಗೂ ಅದರಲ್ಲಿ ರಾಜ್ಯಪಾಲರ ಪಾತ್ರದ ಕುರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಡುವೆ ಮುಖ್ಯ ನ್ಯಾಯಮೂರ್ತಿಗಳನ್ನು ಆನ್‌ಲೈನ್‌ನಲ್ಲಿ ತೀವ್ರವಾಗಿ ಕೆಲವರು ಟ್ರೋಲ್‌ ಮಾಡುತ್ತಿರುವುದನ್ನು ಆಕ್ಷೇಪಿಸಿ ಹಾಗೂ ಇದು ನ್ಯಾಯದಾನ ಪ್ರಕ್ರಿಯೆಯಲ್ಲಿನ ಹಸ್ತಕ್ಷೇಪ ಎಂದು ಆರೋಪಿಸಿ 13 ವಿಪಕ್ಷ ನಾಯಕರುಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

"ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆ, ಮಹಾರಾಷ್ಟ್ರದ ಆಡಳಿತ ಪಕ್ಷದ ಪರ ಇದೆಯೆಂದು ತಿಳಿಯಲಾಗಿರುವ ಟ್ರೋಲ್‌ ಸೇನೆ ಸಿಜೆಐ ಅವರ ವಿರುದ್ಧ ಹರಿಹಾಯ್ದಿದೆ. ಅವರು ಬಳಸುತ್ತಿರುವ ಪದ ಆಕ್ಷೇಪಾರ್ಹವಾಗಿದೆ, ಆದರೆ ಈ ಟ್ರೋಲಿಗರ  ಪೋಸ್ಟ್‌ಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ," ಎಂದು ಮಾರ್ಚ್‌ 16 ರಂದು ಬರೆಯಲಾದ ಪತ್ರದಲ್ಲಿ ವಿವರಿಸಲಾಗಿದೆ.

ಪತ್ರವನ್ನು ಕಾಂಗ್ರೆಸ್‌ ಸಂಸದ ವಿವೇಕ್‌ ಟಂಖ ಬರೆದಿದ್ದರೆ ಪಕ್ಷದ ಸಂಸದರಾದ ದಿಗ್ವಿಜಯ್‌ ಸಿಂಗ್‌, ಶಕ್ತಿಸಿನ್ಹ್‌ ಗೋಹಿಲ್‌, ಪ್ರಮೋದ್‌ ತಿವಾರಿ, ಅಮೀ ಯಗ್ನಿಕ್‌, ರಂಜೀತ್‌ ರಂಜನ್‌,  ಇಮ್ರಾನ್‌ ಪ್ರತಾಪಘರಿ,  ಆಮ್‌ ಆದ್ಮಿ ಪಕ್ಷದ ರಾಘವ್‌ ಛಡ್ಡಾ, ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಸಂಸದೆ ಪ್ರಿಯಾಂಕ ಚತುರ್ವೇದಿ, ಸಮಾಜವಾದಿ ಪಕ್ಷದ ಜಯಾ ಬಚ್ಚನ್‌, ರಾಮ್‌ ಗೋಪಾಲ್‌ ಯಾದವ್‌ ಅದನ್ನು ಬೆಂಬಲಿಸಿದ್ದಾರೆ. ಅಟಾರ್ನಿ ಜನರಲ್‌  ಆರ್‌ ವೆಂಕಟರಮಣಿ ಅವರಿಗೂ ವಿವೇಕ್‌ ಟಂಖ ಇದೇ ವಿಚಾರದಲ್ಲಿ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ನೂತನ ರಂಗ ಕಟ್ಟಲು ಅಖಿಲೇಶ್, ಮಮತಾ ಸಜ್ಜು

Similar News