BBC ಸಾಕ್ಷ್ಯಚಿತ್ರ ಪ್ರದರ್ಶನ ಯತ್ನ: ಇಬ್ಬರು ವಿದ್ಯಾರ್ಥಿಗಳನ್ನು ಒಂದು ವರ್ಷ ಅಮಾನತುಗೊಳಿಸಿದ ದಿಲ್ಲಿ ವಿವಿ

Update: 2023-03-18 08:30 GMT

ಹೊಸದಿಲ್ಲಿ: ವಿಶ್ವವಿದ್ಯಾಲಯ ಆವರಣದಲ್ಲಿ ಗೋಧ್ರಾ ಗಲಭೆ ಕುರಿತ ಬಿಬಿಸಿ (BBC) ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನಿಸಿದರು ಎಂಬ ಆರೋಪದಲ್ಲಿ ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ನಾಯಕ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ದಿಲ್ಲಿ ವಿಶ್ವವಿದ್ಯಾಲಯವು ಒಂದು ವರ್ಷ ಕಾಲ ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಮಾರ್ಚ್‌ 10ರಂದು ನೆನಪಿನೋಲೆ ಹೊರಡಿಸಲಾಗಿದ್ದು, ಅಮಾನತಿನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಅಥವಾ ಕಾಲೇಜಿನ ಅಥವಾ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.

ಜನವರಿ 27ರ ಘಟನೆಯಲ್ಲಿ ಭಾಗಿಯಾಗಿದ್ದ ಇತರ ಆರು ಮಂದಿ ವಿದ್ಯಾರ್ಥಿಗಳಿಗೆ ಕಡಿಮೆ ಶಿಕ್ಷೆಯನ್ನು ನೀಡಲಾಗಿದ್ದು, ಇನ್ನೂ ಹೆಚ್ಚು ವಿದ್ಯಾರ್ಥಿಗಳು ಇಂತಹ ಕ್ರಮದಿಂದ ಬಾಧಿತರಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ.

“ನಾವು ಇಬ್ಬರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು, ಆರು ಮಂದಿ ವಿದ್ಯಾರ್ಥಿಗಳಿಗೆ ಕಡಿಮೆ ಶಿಕ್ಷೆ ನೀಡಿದ್ದೇವೆ. ನಾವು ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಕರೆ ಕಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮವನ್ನು ನಿರೀಕ್ಷಿಸಬಹುದಾಗಿದೆ” ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇತರ ಆರು ವಿದ್ಯಾರ್ಥಿಗಳಿಗೆ ಯಾವ ಶಿಕ್ಷೆ ನೀಡಲಾಗುತ್ತದೆ ಎಂಬ ವಿವರವನ್ನು ಆ ಅಧಿಕಾರಿ ನೀಡಿಲ್ಲ. ಅಮಾನತು ಶಿಕ್ಷೆಗೆ ಗುರಿಯಾಗಿರುವ ವಿದ್ಯಾರ್ಥಿಗಳನ್ನು ಪಿಎಚ್‌ಡಿ ವಿದ್ಯಾರ್ಥಿ ಲೋಕೇಶ್‌ ಚುಗ್ ಹಾಗೂ ಕಾನೂನು ವಿಭಾಗದ ರವೀಂದರ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸದ ಅವಕಾಶವಿಲ್ಲ: ಸಂಸತ್ತಿಗೆ ಕೇಂದ್ರ ಸರ್ಕಾರದ ಮಾಹಿತಿ

Similar News