×
Ad

ಉತ್ತರ ಪ್ರದೇಶ ವಿದ್ಯುತ್‌ ನೌಕರರ ಮುಷ್ಕರ: ಸಮಿತಿಯ ನಾಯಕರಿಗೆ ವಾರಂಟ್‌ ಜಾರಿಗೊಳಿಸಿದ ಅಲಹಾಬಾದ್‌ ಹೈಕೋರ್ಟ್‌

Update: 2023-03-18 16:50 IST

ಪ್ರಯಾಗ್‌ರಾಜ್:‌ ನ್ಯಾಯಾಲಯದ ಆದೇಶವೊಂದರ ಹೊರತಾಗಿಯೂ ಮುಷ್ಕರ ನಡೆಸುತ್ತಿರುವ ಉತ್ತರ ಪ್ರದೇಶ (Uttar Pradesh) ವಿದ್ಯುತ್‌ ಇಲಾಖೆಯ ನೌಕರರ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಲಹಾಬಾದ್‌ ಹೈಕೋರ್ಟ್‌, ಶುಕ್ರವಾರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಶುರು ಮಾಡಿದ್ದು, ಸಮಿತಿಯ ನಾಯಕರಿಗೆ ಸೋಮವಾರ ತನ್ನೆದುರು ಹಾಜರಾಗುವಂತೆ ವಾರಂಟ್‌ ಜಾರಿಗೊಳಿಸಿದೆ ಎಂದು newsclick.in ವರದಿ ಮಾಡಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಶ್ವಿನ್‌ ಕುಮಾರ್‌ ಮಿಶ್ರಾ ಹಾಗೂ ನ್ಯಾ. ವಿನೋದ್‌ ದಿವಾಕರ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಶೈಲೇಂದ್ರ ದುಬೆ ನೇತೃತ್ವದ ವಿದ್ಯುತ್‌ ನೌಕರರ ಸಂಯಕ್ತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಜಾಮೀನು ಸಹಿತ ವಾರಂಟ್‌ ಹೊರಡಿಸಿ, ಮಾರ್ಚ್‌ 20ರಂದು ನ್ಯಾಯಾಲಯದೆದುರು ಹಾಜರಾಗುವಂತೆ ಸೂಚಿಸಬೇಕು ಎಂದು ಲಕ್ನೊ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶಿಸಿದೆ.

ಗುರುವಾರ ರಾತ್ರಿಯಿಂದ ಉತ್ತರ ಪ್ರದೇಶ ವಿದ್ಯುತ್‌ ಇಲಾಖೆ ನೌಕರರು ಮೂರು ದಿನಗಳ ಮುಷ್ಕರ ನಡೆಸುತ್ತಿದ್ದಾರೆ.

ಮುಂದಿನ ವಿಚಾರಣಾ ದಿನಾಂಕವನ್ನು ಮಾರ್ಚ್‌ 20ಕ್ಕೆ ನಿಗದಿಗೊಳಿಸಿರುವ ನ್ಯಾಯಾಲಯವು, ಆ ಹೊತ್ತಿಗೆ ಈ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

“ಆ ಸಮಯದಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಪ್ರಮಾಣ ಪತ್ರವನ್ನು ದಾಖಲೆಯಾಗಿ ಸಲ್ಲಿಸಬೇಕು” ಎಂದೂ ಹೇಳಿದೆ.

ಈ ನಡುವೆ, ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಮುಷ್ಕರವನ್ನು ಹಿಂಪಡೆಯುವಂತೆ ವಿದ್ಯುತ್‌ ನೌಕರರ ಸಂಯುಕ್ತ ಸಂಘರ್ಷ ಸಮಿತಿಯ ಸಂಚಾಲಕ ಶೈಲೇಂದ್ರ ದುಬೆ ಸೇರಿದಂತೆ ವಿವಿಧ ಒಕ್ಕೂಟಗಳ 18 ಮಂದಿ ಪದಾಧಿಕಾರಿಗಳಿಗೆ ಉತ್ತರ ಪ್ರದೇಶ ಇಂಧನ ನಿಗಮ ನಿಯಮಿತವು ನೋಟಿಸ್‌ ಜಾರಿಗೊಳಿಸಿದೆ.

Similar News