ಖಾಲಿಸ್ತಾನ ಬೆಂಬಲಿಗ, ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್‌ ಸಿಂಗ್ ಬಂಧನ

Update: 2023-03-18 13:07 GMT

ಹೊಸದಿಲ್ಲಿ: ಸ್ವಘೋಷಿತ ಸಿಖ್‌ ಪ್ರಚಾರಕ ಮತ್ತು ಖಾಲಿಸ್ತಾನ ಬೆಂಬಲಿಗ ಅಮೃತ್‌ ಪಾಲ್‌ ಸಿಂಗ್‌ನನ್ನು ಪಂಜಾಬ್‌ ಪೊಲೀಸರು ಇಂದು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. 

ಸಿಂಗ್‌ ಜಲಂಧರ್‌ನ ಶಾಹಕೋಟ್‌ ತೆಹ್ಸಿಲ್‌ಗೆ ತೆರಳುತ್ತಿದ್ದಾಗ ಅವನು ಹಾಗೂ ಅವನ ಜನರಿದ್ದ ವಾಹನಗಳನ್ನು  ರಾಜ್ಯ ಪೊಲೀಸರ ವಿಶೇಷ ತಂಡ ಹಿಂಬಾಲಿಸಿ ಕೊನೆಗೂ ಸೆರೆಹಿಡಿಯುವಲ್ಲಿ ಸಫಲವಾಗಿದೆ.

ಅಮೃತ್‌ಪಾಲ್‌ ಬೆಂಬಲಿಗರು ಶಾಹಕೋಟ್‌ಗೆ ಬಂದು ಸೇರಬೇಕೆಂದು ಆತನ ಸಹಚರರು ವೀಡಿಯೋಗಳನ್ನು ಶೇರ್‌ ಮಾಡಲು ಆರಂಭಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ನಾಳೆ ಅಪರಾಹ್ನ 12 ಗಂಟೆ ತನಕ ಅಂತರ್ಜಾಲವನ್ನು ಸ್ಥಗಿತಗೊಳಿಸಲಾಗಿದೆ.

ಸಿಂಗ್‌ನ ಹುಟ್ಟೂರಾದ ಅಮೃತ್‌ಸರ್‌ನ ಜಲ್ಲುಪರ್‌ ಖೈರಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಗ್ರಾಮವನ್ನು ಪೊಲೀಸರು ಮತ್ತು ಅರೆಸೇನಾ ಪಡೆಗಳು ಸೀಲ್‌ ಮಾಡಿವೆ.

ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್‌ ಸಿಂಗ್‌ ವಾರಿಸ್‌ ಪಂಜಾಬ್‌ ದೇ ಎಂಬ ತೀವ್ರಗಾಮಿ ಸಂಘಟನೆ ನಡೆಸುತ್ತಿದ್ದು ಈ ಸಂಘಟನೆಯನ್ನು ನಟ ಮತ್ತು ಹೋರಾಟಗಾರ ದೀಪ್‌ ಸಿಧು ಆರಂಭಿಸಿದ್ದ. ಆತ ಕಳೆದ ವರ್ಷದ ಫೆಬ್ರವರಿಯಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ.

ಸಿಂಗ್‌ ಕಳೆದ ಕೆಲ ವರ್ಷಗಳಿಂದ ಪಂಜಾಬ್‌ನಲ್ಲಿ ಸಕ್ರಿಯನಾಗಿದ್ದು ಆತನನ್ನು ಹೆಚ್ಚಾಗಿ ಶಸ್ತ್ರಸಜ್ಜಿತ ಬೆಂಬಲಿಗರು ಸುತ್ತುವರಿದಿರುತ್ತಾರೆ.

ಆತನ ಪ್ರಮುಖ ಸಹವರ್ತಿ, ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್‌ ಸಿಂಗ್‌ ಬಂಧನ ವಿರೋಧಿಸಿ ಫೆಬ್ರವರಿ 23 ರಂದು ಅಮೃತ್‌ಪಾಲ್‌ ಸಿಂಗ್‌ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದ.

Similar News