ಅಪ್ರಾಪ್ತರಿಂದ ಕೆಲಸ ಮಾಡಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ: ಶ್ರೀಧರ
ಮಂಗಳೂರು,ಮಾ.18: ಅಪ್ರಾಪ್ತರಿಂದ ಕೆಲಸ ಮಾಡಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮಂಗಳೂರಿನ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂದ ಆಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರಡಿ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ ಕಾರ್ಮಿಕತೆಯನ್ನು ತೊಡೆದು ಹಾಕುವುದು ಹಾಗೂ ಮಕ್ಕಳು ಬಾಲಾಪರಾಧಿಗಳಾಗುವುದನ್ನು ತಡೆಗಟ್ಟುವ ಕೆಲಸದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯಾದರ್ಶಿ ಶಿವಕುಮಾರ್ ಬಿ.ಈ, ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು. ಅದನ್ನು ಹೋಗಲಾಡಿಸಲು ಕಲಂ 17 ರಡಿ ನೇಮಕಗೊಂಡ ವಿವಿಧ ಇಲಾಖೆಗಳ ನಿರೀಕ್ಷಕರುಗಳಾದ ಪಿ.ಡಿ.ಓಗಳು, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೆಲ್ತ್ ಇನ್ಸ್‌ಪೆಕ್ಟರ್ಸ್ ಹಾಗೂ ಪೊಲೀಸ್ ಇಲಾಖೆಯ ನಿರೀಕ್ಷಕರುಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವಲ್ಲಿ ಶ್ರಮಿಸಬೇಕು. ಬಾಲ ಕಾರ್ಮಿಕರನ್ನು ಮುಕ್ತಗೊಳಿಸಿ ಅವರಿಗೆ ಶಿಕ್ಷಣ ಕೊಡಿಸಲು ಸಹಕರಿಸುವಂತೆ ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜಾ ಮಾತನಾಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಸಿಬ್ಬಂದಿ ಮೇರಿ ಪಿ ಡಯಾಸ್ ಸ್ವಾಗತಿಸಿದರು. ಜೀವನ್ ಕುಮಾರ್ ನಿರೂಪಿಸಿದರು. ಹಿರಿಯ ವಕೀಲ ನಿಕೇಶ್ ಶೆಟ್ಟಿ ನಿರೂಪಿಸಿದರು.