2ನೇ ಏಕದಿನ: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ ಭರ್ಜರಿ ಜಯ, ಸರಣಿ ಸಮಬಲ

ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ, ಮಾರ್ಷ್, ಹೆಡ್ ಅರ್ಧಶತಕ

Update: 2023-03-19 12:09 GMT

    ವಿಶಾಖಪಟ್ಟಣ, ಮಾ.19: ವೇಗದ ಬೌಲರ್ ಮಿಚೆಲ್ ಸ್ಟಾರ್ಕ್(5-53) ನೇತೃತ್ವದ ಬೌಲರ್‌ಗಳ ಮಾರಕ ದಾಳಿ, ಮಿಚೆಲ್ ಮಾರ್ಷ್(66 ರನ್, 36 ಎಸೆತ) ಹಾಗೂ ಟ್ರಾವಿಸ್ ಹೆಡ್(ಔಟಾಗದೆ 51 ರನ್, 30 ಎಸೆತ) ಅರ್ಧಶತಕಗಳ ಕೊಡುಗೆ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಭಾರತ ಕ್ರಿಕೆಟ್ ತಂಡವನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ಮಣಿಸಿದೆ. 

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 26 ಓವರ್‌ಗಳಲ್ಲಿ ಕೇವಲ 117 ರನ್‌ಗೆ ಆಲೌಟಾಗಿದೆ. ಗೆಲ್ಲಲು ಸುಲಭ ಸವಾಲು ಪಡೆದ ಆಸ್ಟ್ರೇಲಿಯ ತಂಡ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್ ಗಳಿಸಿದೆ.

ಹೆಡ್ ಹಾಗೂ ಮಾರ್ಷ್ ಮೊದಲ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಆಸೀಸ್ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್ ವೈಫಲ್ಯಕ್ಕೊಳಗಾದ ಭಾರತದ ಪರ ವಿರಾಟ್ ಕೊಹ್ಲಿ(31 ರನ್, 35 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರೆ, ಅಕ್ಷರ್ ಪಟೇಲ್ ಔಟಾಗದೆ 29 ರನ್, ರವೀಂದ್ರ ಜಡೇಜ 16 ರನ್ ಗಳಿಸಿದರು.

ಆಸೀಸ್ ಪರ ಸ್ಟಾರ್ಕ್(5-53)ಯಶಸ್ವಿ ಪ್ರದರ್ಶನ ನೀಡಿದರೆ, ಸೀನ್ ಅಬಾಟ್(3-23) ಹಾಗೂ ನಥಾನ್ ಎಲ್ಲಿಸ್(2-13) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
 

Similar News