APCR ಅಧ್ಯಕ್ಷರಾಗಿ ನ್ಯಾಯವಾದಿ ಪಿ.ಉಸ್ಮಾನ್, ಕಾರ್ಯದರ್ಶಿಯಾಗಿ ಮಹಮ್ಮದ್ ನಿಯಾಝ್ ಮರು ಆಯ್ಕೆ

Update: 2023-03-19 14:25 GMT

ಬೆಂಗಳೂರು: ಹೈಕೋರ್ಟ್‌ನ ಹಿರಿಯ ವಕೀಲರಾದ ಅಡ್ವೋಕೇಟ್ ಪಿ.ಉಸ್ಮಾನ್ ಮತ್ತು ಅಡ್ವೋಕೇಟ್ ಮಹಮ್ಮದ್ ನಿಯಾಝ್ ಅವರು ಕ್ರಮವಾಗಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಕರ್ನಾಟಕ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ.

ತುಮಕೂರಿನ ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಷರೀಫ್ ಅವರು ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಪದಾಧಿಕಾರಿಗಳ ತಂಡದಲ್ಲಿ ಕೋಶಾಧಿಕಾರಿಯಾಗಿ ವಕೀಲ ಅಬ್ದುಲ್ ಸಲಾಂ, ಶೇಖ್ ಶಫಿ ಅಹಮದ್ ಆರ್‌ಟಿಐ ಸಂಯೋಜಕರಾಗಿ ಮತ್ತು ಪತ್ರಕರ್ತ ಇನಾಯತುಲ್ಲಾ ಗವಾಯಿ ಮಾಧ್ಯಮ ಸಂಯೋಜಕರಾಗಿ ಮರು ಆಯ್ಕೆಯಾದರು.

ಬೆಂಗಳೂರಿನ ಇಂಡಿಯನ್ ಅಗ್ರಿಕಲ್ಚರಲ್ ಇನ್ಸ್ಟಿಟ್ಯೂಟ್ ಸಭಾಂಗಣದಲ್ಲಿ ರವಿವಾರ ನಡೆದ ರಾಜ್ಯ ಎಪಿಸಿಆರ್‌ ಸಭೆಯಲ್ಲಿ ಮುಂದಿನ ಅವಧಿಗೆ ರಚಿಸಲಾದ ನೂತನ ಕಾರ್ಯಕಾರಿ ಸಮಿತಿಯಲ್ಲಿ ವಕೀಲ ಮಹಮೂದ್  ಖಾಜಿ, ಸುಮಯ್ಯ ರೋಷನ್, ನಸ್ರೀನ್ ತಾಜ್ ಮತ್ತು ಹುಸೇನ್ ಕೋಡಿ ಬೆಂಗ್ರೆ ಅವರನ್ನೂ ಸೇರಿಸಲಾಗಿದೆ. 

ಕರ್ನಾಟಕದ ವಿವಿಧ ಜಿಲ್ಲೆಗಳ ಎಪಿಸಿಆರ್ ಅಧ್ಯಕ್ಷರನ್ನು ವಕೀಲ ಮಹಮ್ಮದ್ ನಿಯಾಝ್ ಸ್ವಾಗತಿಸಿದರು.

ವಕೀಲ ಪಿ.ಉಸ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಪ್ರಸಕ್ತ ಪರಿಸ್ಥಿತಿಯನ್ನು ಎತ್ತಿ ತೋರಿಸಿದರು ಮತ್ತು ಆಯಾ ಜಿಲ್ಲೆಗಳಲ್ಲಿ ಯಾವುದೇ ಘಟನೆಗಳು ಸಂಭವಿಸಿದಾಗ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು. ದ್ವೇಷದ ಭಾಷಣ, ಎಲ್ಲಿಂದಲಾದರೂ ಯಾವುದೇ ನಿರ್ದೇಶನವನ್ನು ಕಾಯದೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಕಾರ್ಯಕರ್ತರನ್ನು ಆಗ್ರಹಿಸಿ‍ದರು. 

ನ್ಯಾಯವಾದಿ ಅಬ್ದುಲ್ ಸಲಾಂ ಸಭೆಯನ್ನು ನಡೆಸಿಕೊಟ್ಟರು, ಎಪಿಸಿಆರ್ ಆಪ್ತ ಮೌಲಾನಾ ಮಹಮ್ಮದ್ ಯೂಸುಫ್ ಕಣ್ಣಿ ಚುನಾವಣಾ ಪ್ರಕ್ರಿಯೆಯ ಅಧ್ಯಕ್ಷತೆ ವಹಿಸಿದ್ದರು. ಶೇಖ್ ಶಫಿ ಅಹಮದ್ ವಂದಿಸಿದರು. 

Similar News