ಲಂಡನ್ ಭಾರತೀಯ ಹೈಕಮಿಷನ್ ಮೇಲೆ ಹಾರುತ್ತಿದ್ದ ಭಾರತೀಯ ಧ್ವಜ ಕೆಳಗಿಳಿಸಿದ ಖಾಲಿಸ್ತಾನಿ ಬೆಂಬಲಿಗ

ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಪರ ಘೋಷಣೆ

Update: 2023-03-20 17:21 GMT

ಹೊಸದಿಲ್ಲಿ, ಮಾ. 20: ರವಿವಾರ ಖಾಲಿಸ್ತಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್ ಕಚೇರಿಯಲ್ಲಿ ದಾಂಧಲೆ ನಡೆಸಿ ತ್ರಿವರ್ಣ ಧ್ವಜವನ್ನು ಕೆಳಗೆಳೆದ ಘಟನೆ ನಡೆದಿದೆ. ವಾರಿಸ್ ಪಂಜಾಬ್ ಡೆ ಎಂಬ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಮತ್ತು ಅವನ ಬೆಂಬಲಿಗರ ವಿರುದ್ಧ ಪಂಜಾಬ್‌ನಲ್ಲಿ ಪೊಲೀಸರು ಬೃಹತ್ ದಮನ ಕಾರ್ಯಾಚರಣೆ ನಡೆಸುತ್ತಿರುವ ಸಮಯದಲ್ಲೇ ಲಂಡನ್‌ನಲ್ಲಿ ಈ ಬೆಳವಣಿಗೆ ನಡೆದಿದೆ.

ರವಿವಾರ ರಾತ್ರಿ ಬೆರಳೆಣಿಕೆಯಷ್ಟಿದ್ದ ಖಾಲಿಸ್ತಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದರು. ಅವರು ಈ ಸಂದರ್ಭದಲ್ಲಿ ‘ಖಾಲಿಸ್ತಾನಿ ಜಿಂದಾಬಾದ್’ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ, ಪ್ರತಿಭಟನಾಕಾರರ ಪೈಕಿ ಒಬ್ಬ ಭಾರತೀಯ ಧ್ವಜವನ್ನು ಕೆಳಗೆಳೆಯಲು ಪ್ರಯತ್ನಿಸಿದನು. ಆದರೆ, ಭಾರತದ ಧ್ವಜವನ್ನು ಸಂಪೂರ್ಣವಾಗಿ ಕಿತ್ತೆಸೆಯುವ ಆತನ ಯತ್ನ ಸಫಲವಾಗಲಿಲ್ಲ. ಧಾವಿಸಿ ಬಂದ ರಕ್ಷಣಾ ಸಿಬ್ಬಂದಿ ಆತನ ಪ್ರಯತ್ನವನ್ನು ವಿಫಲಗೊಳಿಸಿದರು. ಒಡೆದ ಕಿಟಿಕಿ ಗಾಜುಗಳು ಮತ್ತು ಕೆಲವು ವ್ಯಕ್ತಿಗಲು ‘ಇಂಡಿಯಾ ಹೌಸ್’ ಕಟ್ಟಡವನ್ನು ಹತ್ತುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. 

ಬ್ರಿಟನ್ ರಾಯಭಾರಿಗೆ ಪ್ರತಿಭಟನೆ ಸಲ್ಲಿಸಿದ ಭಾರತ
ಘಟನೆಯಿಂದ ಆಕ್ರೋಶಗೊಂಡಿರುವ ಭಾರತ, ಹೊಸದಿಲ್ಲಿಯಲ್ಲಿರುವ ಬ್ರಿಟನ್‌ನ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಕರೆಸಿಕೊಂಡು, ಸಂಪೂರ್ಣ ಭದ್ರತಾ ಲೋಪದ ಬಗ್ಗೆ ವಿವರಣೆ ನೀಡುವಂತೆ ಕೋರಿದೆ.

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್‌ನ ಆವರಣಗಳಲ್ಲಿರುವ ‘ಭದ್ರತಾ ಕೊರತೆ’ಗಳ ಬಗ್ಗೆ ವಿವರಣೆ ನೀಡುವಂತೆ ಭಾರತೀಯ ವಿದೇಶ ವ್ಯವಹಾರಗಳ ಸಚಿವಾಲಯವು ಬ್ರಿಟನ್ ಸರಕಾರವನ್ನು ಕೇಳಿದೆ ಹಾಗೂ ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಯ ಬಗ್ಗೆ ಬ್ರಿಟನ್ ಸರಕಾರ ಹೊಂದಿರುವ ‘‘ನಿರ್ಲಕ್ಷ್ಯ ಧೋರಣೆ’’ಯನ್ನು ಟೀಕಿಸಿದೆ.
‘‘ಹೊಸದಿಲ್ಲಿಯಲ್ಲಿರುವ ಅತ್ಯಂತ ಹಿರಿಯ ಬ್ರಿಟನ್ ರಾಜತಾಂತ್ರಿಕೆಯಾಗಿರುವ ಉಪ ಹೈಕಮಿಶನರ್ ಕ್ರಿಸ್ಟೀನಾ ಸ್ಕಾಟ್‌ರನ್ನು ರವಿವಾರ ತಡ ರಾತ್ರಿ ಕರೆಸಲಾಯಿತು ಹಾಗೂ ಭಾರತೀಯ ಹೈಕಮಿಶನ್‌ನಲ್ಲಿ ಪ್ರತ್ಯೇಕತಾವಾದಿ ಮತ್ತು ತೀವ್ರವಾದಿ ಶಕ್ತಿಗಳು ನಡೆಸಿರುವ ದಾಂಧಲೆಯ ವಿರುದ್ಧ ಬಲವಾದ ಪ್ರತಿಭಟನೆ ಸಲ್ಲಿಸಲಾಯಿತು’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾನ್‌ಫ್ರಾನ್ಸಿಸ್ಕೊದಲ್ಲೂ ಭಾರತೀಯ ಕೌನ್ಸುಲೇಟ್‌ನಲ್ಲಿ ಖಾಲಿಸ್ತಾನಿ ಬೆಂಬಲಿಗರ ದಾಂಧಲೆ
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್ ಕಟ್ಟಡದಲ್ಲಿ ದಾಂಧಲೆ ನಡೆಸಿದ ಕೆಲವೇ ಗಂಟೆಗಳ ಬಳಿಕ, ಖಾಲಿಸ್ತಾನಿ ಬೆಂಬಲಿಗರ ಗುಂಪೊಂದು ರವಿವಾರ ಅಮೆರಿಕದ ಸಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಯಲ್ಲಿಯೂ ದಾಂಧಲೆಗೈದಿದೆ. ಜನರ ಬೃಹತ್ ಗುಂಪೊಂದು ಮರದ ಕೋಲುಗಳಿಗೆ ಸಿಕ್ಕಿಸಲಾದ ಖಾಲಿಸ್ತಾನಿ ಧ್ವಜಗಳನ್ನು ಬೀಸುತ್ತಾ, ಕೌನ್ಸುಲೇಟ್ ಕಚೇರಿಯ ಗಾಜಿನ ಬಾಗಿಲುಗಳು ಮತ್ತು ಕಿಟಿಕಿಗಳನ್ನು ಒಡೆಯುತ್ತಾ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪೊಲೀಸರು ಸ್ಥಾಪಿಸಿದ ತಡೆಬೇಲಿಗಳನ್ನು ನಿವಾರಿಸಿಕೊಂಡು ಕೌನ್ಸುಲೇಟ್ ಕಚೇರಿಯತ್ತ ನಡೆದ ಪ್ರತಿಭಟನಾಕಾರರು ಖಾಲಿಸ್ತಾನಿ ಘೋಷಣೆಗಳನ್ನು ಕೂಗಿದರು ಹಾಗೂ ಕಟ್ಟಡದಲ್ಲಿ ಎರಡು ಖಾಲಿಸ್ತಾನಿ ಧ್ವಜಗಳನ್ನು ನೆಟ್ಟರು. ಈ ಧ್ವಜಗಳನ್ನು ಕೌನ್ಸುಲೇಟ್ ಸಿಬ್ಬಂದಿ ಬಳಿಕ ಕಿತ್ತೆಸೆದರು. ಪ್ರತಿಭಟನಕಾರರು ‘ಅಮೃತಪಾಲ್‌ರನ್ನು ಬಿಡುಗಡೆ ಮಾಡಿ’ ಎಂಬ ವಾಕ್ಯವನ್ನು ಸ್ಪ್ರೇ-ಪೇಂಟ್ ಮೂಲಕ ಕಟ್ಟಡದ ಹೊರಗೋಡೆಯ ಮೇಲೆ ಬರೆದರು.

48 ಗಂಟೆಗಳ ಬಳಿಕವೂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಅಮೃತಪಾಲ್ ಸಿಂಗ್ 

ಖಾಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್‌ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಬಂಧಿಸಲಾಗುವುದು ಎಂದು ಪಂಜಾಬ್ ಇನ್‌ಸ್ಪೆಕ್ಟರ್ ಜನರಲ್ ಸುಖ್‌ಚೈನ್ ಸಿಂಗ್ ಗಿಲ್ ಹೇಳಿದ್ದಾರೆ. ಅಮೃತಪಾಲ್ ಸಿಂಗ್‌ನ ವಾರಿಸ್ ಪಂಜಾಬ್ ಡಿ ಸಂಘಟನೆಯ ವಿರುದ್ಧ ಪೊಲೀಸರು ದಮನ ಕಾರ್ಯಾಚರಣೆ ಆರಂಭಿಸಿದ 48 ಗಂಟೆಗಳ ಬಳಿಕವೂ ಆತ ಪೊಲೀಸರಿಗೆ ಸಿಕ್ಕಿಲ್ಲ. ಸಿಂಗ್‌ನ ಐವರು ಸಂಗಡಿಗರನ್ನು ಎನ್‌ಎಸ್‌ಎ ಅಡಿ ಬಂಧಿಸಲಾಗಿದೆ. ಅವರ ಪೈಕಿ ನಾಲ್ವರನ್ನು ಅಸ್ಸಾಮ್‌ನಲ್ಲಿರುವ ದಿಬ್ರೂಗಢ ಜೈಲಿಗೆ ಕಳುಹಿಸಲಾಗಿದೆ.

ಅಮೃತಪಾಲ್ ಸಿಂಗ್‌ಗೆ ವಿದೇಶಗಳಿಂದ ನಿಧಿ ಪೂರೈಕೆಯಾಗುತ್ತಿದ್ದು, ಇದರಲ್ಲಿ ಪಾಕಿಸ್ತಾನದ ಐಎಸ್‌ಐನ ಪಾತ್ರವನ್ನು ಶಂಕಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದರು. ‘‘ಆರೋಪಿಯು ಉಗ್ರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಆನಂದಪುರ ಖಾಲ್ಸಾ ಫೌಝ್‌ಗೆ ಹಣ ಪೂರೈಕೆ ಮಾಡುತ್ತಿದ್ದನು ಎನ್ನುವುದಕ್ಕೂ ನಮ್ಮ ಬಳಿ ಪುರಾವೆಯಿದೆ’’ ಎಂದು ಅವರು ತಿಳಿಸಿದರು.

ಬಂಧನವನ್ನು ತಪ್ಪಿಸಿಕೊಳ್ಳವುದಕ್ಕಾಗಿ ಅಮೃತಪಾಲ್ ಸಿಂಗ್ ಮಾರ್ಗಗಳನ್ನು ಬದಲಿಸುತ್ತಿದ್ದಾನೆ ಎಂದು ಅವರು ಹೇಳಿದರು. ಈವರೆಗೆ ಅವನು ಮತ್ತು ಅವನ ಸಂಗಡಿಗರ ವಿರುದ್ಧ ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದರು.

Similar News