ಎಲ್ಲಿ ಹೋದವು ಚಿಂವ್ ಚಿಂವ್ ಗುಬ್ಬಚ್ಚಿಗಳು?

ಇಂದು ಗುಬ್ಬಚ್ಚಿ ದಿನ

Update: 2023-03-20 06:30 GMT

ಗುಬ್ಬಚ್ಚಿ ದಿನ ಅಂದ ತಕ್ಷಣ ನನಗೆ ನೆನಪಾಗುವುದು ನನ್ನ ಬಾಲ್ಯ. ನಮ್ಮ ಅಮ್ಮ ಮನೆಯ ಮುಂದಿನ ದೊಡ್ಡ ಅಂಗಳದ ತುದಿಯಲ್ಲಿ ನಿಂತುಕೊಂಡು ತಡ್ಪೆ ಯಲ್ಲಿ - ತಡ್ಪೆ ಅಂದರೆ ದೊಡ್ಡ ಮೊರ, ಗೆರಸೆ - ಅಕ್ಕಿ ಗೇರುತ್ತಾ ಇರುತ್ತಾರೆ. ಕೆಳಗೆ ಅಂಗಳದಲ್ಲಿ ಚಿಂವುಗುಡುತ್ತಿರುವ ಗುಪ್ಪಚ್ಚಿಗಳ ದಂಡು. ಅಕ್ಕಿ ಗೇರುವಾಗ ತಡ್ಪೆ ಯಿಂದ ಅರ್ಧ ಅಡಿ ಮೇಲಕ್ಕೆ ಅಕ್ಕಿ ಹಾರಿ ಮತ್ತೆ ತಡ್ಪೆಗೆ ಬೀಳುತ್ತಿತ್ತು. ಅಕ್ಕಿ ಹಾರುವಾಗಲೆಲ್ಲಾ ಅಮ್ಮನ ಬಾಯಿಯಿಂದ ‘ಉಶ್ಯು ಉಶ್ಯು’ ಎಂಬ ಉದ್ಗಾರ ಬರುತ್ತಿತ್ತು. ಜೊತೆಗೆ ತಡ್ಪೆಯನ್ನು ಕೆಳಬದಿಯಿಂದ ಹಿಡಿದ ನಾಲ್ಕು ಬೆರಳುಗಳು ಲಯಬದ್ದವಾಗಿ ತಾಳ ಹಾಕುತ್ತಿದ್ದವು. ತಡ್ಪೆಯ ತುದಿಯಲ್ಲಿ ಸಂಗ್ರಹವಾಗುತ್ತಿದ್ದ ನುಚ್ಚಕ್ಕಿಯನ್ನು ಬಲು ಚಾಕಚಕ್ಯತೆಯಿಂದ ಅಂಗೈಯಲ್ಲಿ ಹಿಡಿದು ಬದಿಯಲ್ಲಿದ್ದ ಗುಬ್ಬಿಗಳ ಕಡೆಗೆ ಎರ ಚುತ್ತಿದ್ದರು. ಅವುಗಳು ಕೋಳಿಪಿಳ್ಳೆಗಳ ಹಾಗೆ ನುಚ್ಚಕ್ಕಿಯನ್ನು ಆಯ್ದುಕೊಂಡು ತಿನ್ನುತ್ತಿದ್ದವು.

ಈಗ ಭತ್ತದ ಗದ್ದೆಯೂ ಇಲ್ಲ. ಅಂಗಳದಲ್ಲಿ ಬಿಸಿಲಿಗೆ ಅಕ್ಕಿ, ಭತ್ತ ಹರಡುವ ಪದ್ಧತಿಯೂ ಇಲ್ಲ. ಗುಬ್ಬಚ್ಚಿಗಳ ಸದ್ದೂ ಇಲ್ಲ. ಎಲ್ಲಿ ಹೋದವು, ಆ ನಮ್ಮ ಬಾಲ್ಯದ ಒಡನಾಡಿಗಳು? ಕಿಟಕಿಯಲ್ಲಿ ನುಗ್ಗಿ ಮನೆಯೊಳಗೆ ಬಂದು ಹಕ್ಕಿನಿಂದ ಕಾಳುಕಡ್ಡಿ ಎಗರಿಸುವ ಪುಟ್ಟ ಪಾಪಚ್ಚಿಗಳು?

ನಮ್ಮ ಬಾಲ್ಯದ ಒಡನಾಡಿಗಳಾದ ನಾಯಿ, ಬೆಕ್ಕು, ಕೋಳಿ, ದನಕರುಗಳಲ್ಲಿ ಹೆಣ್ಣು ಮತ್ತು ಗಂಡುಗಳನ್ನು ನಾವು ಸುಲಭದಲ್ಲಿ ಗುರುತಿಸುತ್ತಿದ್ದೆವು. ಆದರೆ ಗುಬ್ಬಚ್ಚಿಗಳಲ್ಲಿ ಹೆಣ್ಣು ಮತ್ತುಗಂಡುಗಳನ್ನು ಗುರುತಿಸುವುದು ಗೊತ್ತಾಗುತ್ತಿರಲಿಲ್ಲ. ನಮ್ಮ ಅಮ್ಮ ಒಂದು ಕಥೆ ಹೇಳಿ ಅದನ್ನು ಸುಗಮಗೊಳಿಸಿದ್ದರು. ಒಮ್ಮೆ ಹೆಣ್ಣು ಗುಬ್ಬಚ್ಚಿಯೊಂದು ತನ್ನ ಗಂಡನ ಬಳಿ ತಾನು ಕಣ್ಣಿಗೆ ಹಚ್ಚಿಕೊಳ್ಳುತ್ತಿರುವ ಕಣ್ಕಪ್ಪು (ಕಾಡಿಗೆ) ಮುಗಿದಿದೆ, ಪೇಟೆಗೆ ಹೋಗಿ ತಗೊಂಡು ಬಾ ಅಂದಿತಂತೆ. ಗಂಡು ಗುಬ್ಬಚ್ಚಿ ಪೇಟೆಗೆ ಹೋಗಿ ಕಾಡಿಗೆ ತಗೊಂಡು ಬರುವಾಗ ತಾನೂ ಸುಂದರವಾಗಿ ಕಾಣಬೇಕೆಂದು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಿತಂತೆ. ಹೆಣ್ಣಿನ ನಾಜೂಕುತನ ಇಲ್ಲದೆ ಕಾಡಿಗೆ ಕಣ್ಣಂಚಿನ ಸುತ್ತಮುತ್ತಲೆಲ್ಲಾ ಹರಡಿಕೊಂಡಿತಂತೆ. ಹಾಗಾಗಿ ಇವತ್ತಿಗೂ ಗಂಡು ಗುಬ್ಬಚ್ಚಿಯ ಕಣ್ಣಿನ ಸುತ್ತಮುತ್ತ ಕಪ್ಪು ಬಣ್ಣ ಹರಡಿಕೊಂಡಿದೆಯಂತೆ. ಗಮನಿಸಿ ನೋಡಿ, ಹೆಣ್ಣಿನ ಕೊರಳಿನ ಸುತ್ತ ಬೂದು ಬಣ್ಣವಿದೆ. ಗಂಡಿನ ಕೊರಳು ಮತ್ತು ಕಣ್ಣಿನ ಸುತ್ತ ಕಪ್ಪು ವರ್ತುಲಗಳಿವೆ.

ಗುಬ್ಬಚ್ಚಿ, ಸಣ್ಣದು ಎನ್ನುವುದಕ್ಕೆ ಅನ್ವರ್ಥನಾಮವೇ ಆಗಿ ರೂಢಿಯಲ್ಲಿ ಬೆಳೆದು ಬಂದಿದೆ. ತೀರಾ ಸಣ್ಣಗೆ ಇರುವವರನ್ನು ನಾವು ಗುಬ್ಬಚ್ಚಿ ಎಂದು ಕರೆಯುತ್ತೇವೆ. ಸಣ್ಣ  ಮನೆಗೆ ಗುಬ್ಬಚ್ಚಿ ಗೂಡು ಎನ್ನುತ್ತೇವೆ. ನಾನೂ ನನ್ನ ಮಗಳನ್ನು ಗುಬ್ಬಚ್ಚಿ ಎಂದೇ ಕರೆಯುತ್ತಿದ್ದೆ. ಶಾಲೆಗೆ ಸೇರಿಸುವಾಗ ಅವಳ ಟೀಚರ್ ಮಗುವಿನ ಪೆಟ್ ನೇಮ್ ಏನು ಎಂದು ಕೇಳಿದಾಗ ‘ಗುಬ್ಬಚ್ಚಿ’ ಎಂದಿದ್ದೆ. ಮುಂದೆ ಶಾಲೆಯಲ್ಲಿಯೂ ಗುಬ್ಬಚ್ಚಿ  ಎಂದೇ ಅವಳ ಟೀಚರ್ಸ್ ಮತ್ತು ಅವಳ ಕೆಲ ಗೆಳತಿಯರೂ ಕರೆಯುತ್ತಿದ್ದರು.

ಹೌದು. ಗುಬ್ಬಚ್ಚಿ ತುಂಬಾ ಚಿಕ್ಕ ಹಕ್ಕಿ. ಅದರ ತೂಕ ಸುಮಾರು ೧೩ರಿಂದ ೪೨ ಗ್ರಾಂಗಳು. ಹೆಣ್ಣಿಗಿಂತ ಗಂಡು ಸ್ವಲ್ಪ ದೊಡ್ಡದಿರುತ್ತದೆ. ಮೂಲತಃ ಏಶ್ಯ ಮತ್ತು ಯೂರೋ ಪಿನ ದೇಶಗಳಲ್ಲಿ ವಾಸಿಸುತ್ತಿದ್ದ ಈ ಹಕ್ಕಿಗಳು ಕ್ರಮೇಣ ಪರಪಂಚದಾದ್ಯಂತ ಹರಡಿದವು. ಈಗ ಅಳಿವಿನಂಚಿಗೆ ಜಾರುತ್ತಿವೆ. ಕಾರಣ ನಿಖರವಾಗಿ ಗೊತ್ತಾಗುತ್ತಿಲ್ಲ.

ಪಶ್ಚಿಮ ಘಟ್ಟದಂಚಿನ ನನ್ನೂರು ಸುಬ್ರಹ್ಮಣ್ಯದಲ್ಲೇ, ಆ ಹಳ್ಳಿಗಾಡಿನ ಪರಿಸರ ದಿಂದಲೇ ಗುಬ್ಬಚ್ಚಿಗಳು ಕಾಣೆಯಾಗಿವೆ ಅಂದರೆ ಅದಕ್ಕೆ ಕಾರಣವೇನಿರಬಹುದು ಎಂದು ನಾನೂ ಹಲವು ಬಾರಿ ತಲೆ ಕೆಡಿಸಿಕೊಂಡದ್ದಿದೆ. ಜಗತ್ತಿನ ಹಲವೆಡೆಯಲ್ಲಿ ಯೂ ಅನೇಕ ಪರಿಸರಪ್ರೇಮಿಗಳು ಮತ್ತು ಪಕ್ಷಿತಜ್ಞರು ಈ ಜಗತ್ತಿನಿಂದಲೇ ಕಣ್ಮರೆಯಾಗುತ್ತಿರುವ ಜೀವಿಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಈ ಭೂಗೋಳದಲ್ಲಿರುವ ಎಲ್ಲಾ ಜೀವಿಗಳು ಪರಸ್ಪರ ಅವಲಂಬಿಸಿಯೇ ಬದುಕುತ್ತವೆ.


ಈ ಜೀವಸರಪಳಿಯಲ್ಲಿ ಒಂದು ಕೊಂಡಿ ಕಳಚಿದರೂ ಇನ್ನೊಂದರ ಅಸ್ತಿತ್ವಕ್ಕೆ ಧಕ್ಕೆ ಯಾಗುತ್ತದೆ. ಅಂಥದ್ದೊಂದು ಬದುಕಿನ ಕೊಂಡಿ ಗುಬ್ಬಚ್ಚಿಯ ಜೀವ ಪರಿಸರದಲ್ಲಿ ಲುಪ್ತವಾಗಿರಬಹುದೇ? ಇನ್ನೂ ಆ ಬಗ್ಗೆ ಸಂಶೋಧನೆಯಾದಂತಿಲ್ಲ.

ಆದರೆ ಪರಿಸರ ಕಾಳಜಿಯುಳ್ಳ ಕೆಲವರು ಹೇಳುವ ಪ್ರಕಾರ, ಗುಬ್ಬಚ್ಚಿಗಳ ಸಂತನಾಭಿವೃದ್ಧಿ ಕ್ಷೀಣಿಸಿದೆ. ಅದಕ್ಕೆ ಕಾರಣ ಅವುಗಳಿಗೆ ಗೂಡು ಕಟ್ಟಿಕೊಳ್ಳಲು ಸರಿಯಾದ ಜಾಗ ಇಲ್ಲ. ಹಿಂದೆಲ್ಲಾ ಜನರು ಮಣ್ಣಿನಿಂದ ಮನೆ ಕಟ್ಟಿಕೊಳ್ಳುತ್ತಿದ್ದರು. ಹುಲ್ಲು ಅಥವಾ ಹಂಚಿನ ಮಾಡು ಮಾಡುತ್ತಿದ್ದರು. ಮರಮಟ್ಟುಗಳು ಮನೆ ಯಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದ್ದವು. ಇಂಥ ಮನೆಗಳ ಜಂತಿಗಳಲ್ಲಿ, ಮೂಲೆ ಗಳಲ್ಲಿ, ಪೊಟರೆಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿ ಮೊಟ್ಟೆಯಿಟ್ಟು ಸಂಸಾರ ನಡೆಸುತ್ತಿದ್ದವು. ಈಗ ಮನುಷ್ಯರು ಮನೆ ಕಟ್ಟಿಕೊಳ್ಳುವ ವಿನ್ಯಾಸವೇ ಬದಲಾಗಿದೆ.


ಹಾಗಾಗಿ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಮನುಷ್ಯ ಸ್ನೇಹಿ ಗುಬ್ಬಚ್ಚಿ ಗಳೂ ಮನುಷ್ಯರಿಂದ ದೂರ ಹೋಗಿವೆ. ಮೊಬೈಲ್ ಟವರ್‌ಗಳಿಂದ ಹೊಮ್ಮುವ ತರಂಗಾಂತರಗಳೂ ಗುಬ್ಬಚ್ಚಿಗಳ ಕಣ್ಮರೆಗಳಿಗೆ ಕಾರಣ ಎಂಬ ವಾದವೂ ಇದೆ.

ಇತ್ತೀಚೆಗೆ ನೆಲ್ಯಾಡಿ ಪೇಟೆ (ದಕ್ಷಿಣ ಕನ್ನಡ)ಯಲ್ಲಿ ನಡೆದುಕೊಂಡು ಹೋಗು ತ್ತಿದ್ದೆ. ಮಧ್ಯಾಹ್ನದ ಸಮಯ. ಬಿರು ಬಿಸಿಲು. ಗಾಳಿಯೂ ಚಲಿಸದ ನಿಶ್ಯಬ್ದದ ಹೊತ್ತು. ಹಕ್ಕಿಗಳ ಕಲರವ ಕಿವಿಗೆ ಬಿತ್ತು. ಧ್ವನಿ ಬಂದತ್ತ ಎಡಕ್ಕೆ ತಿರುಗಿ ನೋಡಿದೆ. ಅರೇ! ಗುಬ್ಬಚ್ಚಿಗಳು! ಅದೊಂದು ದಿನಸಿ ಅಂಗಡಿ. ಅಂಗಡಿ ಮುಂದೆ ಸಾಲಾಗಿ ಜೋಡಿಸಿಟ್ಟ ಗೋಣಿಚೀಲಗಳು. ಅವುಗಳಲ್ಲಿ ವಿವಿಧ ರೀತಿಯ ಧಾನ್ಯಗಳು. ಅವುಗಳೆಲ್ಲಾ ತಮ್ಮದೇ ಎಂಬಂತೆ ಮುತ್ತಿಕೊಳ್ಳುತ್ತಿದ್ದ ಗುಬ್ಬಚ್ಚಿಗಳು. ನಂಗೆ ತುಂಬಾ ಖುಷಿಯಾಗಿ ಆ ಅಂಗಡಿಯೊಳಗೆ ಹೊಕ್ಕೆ. ನನ್ನ ಆಶ್ಚರ್ಯ ಮತ್ತು ಆನಂದ ಆ ಅಂಗಡಿಯ ಯಜಮಾನರನ್ನೂ ಮುಟ್ಟಿದಂತಿತ್ತು. ನನ್ನನ್ನು ನಗುಮುಖದಿಂದ ಸ್ವಾಗತಿಸಿದರು. ಇದು ಹೇಗೆ ಸಾಧ್ಯ ಎಂದು ಅವರಲ್ಲಿ ಮಾತುಕತೆಗೆ ಮುಂದಾದೆ. ‘ಶ್ರಿ ದತ್ತಕೃಪಾ ಸ್ಟೋರ್’ ಎಂಬ ದಿನಸಿ ಅಂಗಡಿಯ ಮಾಲಕರಾದ ಪದ್ಮನಾಭ ಶೆಟ್ಟಿ ಹೇಳುತ್ತಾರೆ, ‘ನನಗೂ ಗೊತ್ತಿಲ್ಲ. ಇಲ್ಲಿ ಇಷ್ಟೆಲ್ಲಾ ಅಂಗಡಿಗಳಿವೆ. ಆದರೂ ಅವು ನಮ್ಮ ಅಂಗಡಿಯನ್ನೇ ಯಾಕೆ ಆಯ್ದುಕೊಂಡವು ಅಂತ?’ ಪ್ರಾಣಿ ಪಕ್ಷಿಗಳಿಗೆ ಗೊತ್ತಿವೆ, ತಮ್ಮನ್ನು ಯಾರು ಪ್ರೀತಿಸುತ್ತಾರೆ ಅಂತ. ಅಂಥವರ ಬಳಿ ಅವು ಮತ್ತೆ ಮತ್ತೆ ಸುಳಿದಾಡುತ್ತವೆ. ಅದಲ್ಲದೆ ಆ ಅಂಗಡಿಗೆ ಒಂದು ಇಳಿಜಾರಾದ ಮರದ ರೀಪುಗಳಿಂದ ಮಾಡಿದ ಹಂಚಿನ ಮಾಡಿದೆ. ಕಿಂಡಿಗಳಿವೆ. ಮರದ ಜಂತಿಯಿದೆ. ಅವುಗಳ ಮೇಲೆ ಕುಳಿತು ಗುಬ್ಬಚ್ಚಿಗಳು ವಿರಮಿಸಿಕೊಳ್ಳುತ್ತವೆ.

ಪಕ್ಷಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಬಲೆಗಳನ್ನು ಹಾಕುವ ಅನೇಕ ಜನರನ್ನು ನಮ್ಮ ಸುತ್ತಮುತ್ತ ಕಾಣುತ್ತೇವೆ. ಹಾಗಿರುವಾಗ ‘ಆ ಪುಟ್ಟ ಜೀವಿಗಳು ಎಷ್ಟು ಕಾಳುಗಳನ್ನು ತಿಂದಾವು? ತಿಂದುಕೊಳ್ಳಲಿ ಬಿಡಿ’ ಎಂದು ತಮ್ಮ ಅಂಗಡಿ ಯಲ್ಲಿ ಗುಬ್ಬಚ್ಚಿಗಳಿಗೆ ಸರ್ವ ಸ್ವಾತಂತ್ರ್ಯವನ್ನು ನೀಡಿರುವ ವ್ಯಾಪಾರಿಯೊಬ್ಬರ ಮನಸು ನನಗೆ ಬಹು ಅಮೂಲ್ಯವಾಗಿ ಕಂಡಿತು.

ಮೂರು ದಶಕಗಳ ಹಿಂದೆ ನಾನು ಬೆಂಗಳೂರಿಗೆ ನೆಲೆಸಲು ಹೋದಾಗಲೂ ಬೆಂಗಳೂರಲ್ಲಿ ಗುಬ್ಬಚ್ಚಿಗಳು ಇದ್ದವು. ಪ್ರತಿದಿನ ಕಿಟಕಿಯಲ್ಲಿ ಅವುಗಳಿಗೆ ನೀರು ಮತ್ತು ಅಕ್ಕಿಯನ್ನು ಇಡುತ್ತಿದ್ದೆ. ಒಮ್ಮೊಮ್ಮೆ ಅವುಗಳು ಚಿಲಿಪಿಲಿಗುಟ್ಟುತ್ತಾ ಮನೆಯೊಳಗೂ ಬರುತ್ತಿದ್ದವು. ಅಮೇಲಾಮೇಲೆ ಅವುಗಳು ಕಾಣಿಸಲೇ ಇಲ್ಲ.

ನಾನಿರುವ ಪರಿಸರದಲ್ಲಿ ಗುಬ್ಬಚ್ಚಿಗಳು ಕಾಣಿಸದೇ ಇರಬಹುದು. ಆದರೆ ಇನ್ನೂ ಕಾಂಕ್ರಿಟ್ ಜಂಗಲ್ ಆಗದ, ಗ್ರಾಮೀಣ ಪರಿಸರವನ್ನು ಉಳಿಸಿಕೊಂಡಿ ರುವ ಕೆಲವೆಡೆ ಈಗಲೂ ಗುಬ್ಬಚ್ಚಿಗಳನ್ನು ನಾವು ಯಥೇಚ್ಛವಾಗಿ ಕಾಣಬಹುದು.

ಉತ್ತರಾಖಂಡದ ಮುನಿಶ್ಯಾರಿ ಮತ್ತು ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿ ಯಲ್ಲಿ ನಾನು ತೆಗೆದ ಗುಬ್ಬಚ್ಚಿಗಳ ಪೋಟೋಗಳ ದೊಡ್ಡ ಸಂಗ್ರಹವೇ ನನ್ನಲ್ಲಿದೆ.

ಮಾರ್ಚ್ ೨೦ರ ಗುಬ್ಬಚ್ಚಿ ದಿನದ ನೆನಪಲ್ಲಿ ನನ್ನ ಬಾಲ್ಯದ ದಿನಗಳನ್ನು ಹೆಕ್ಕಲು ಮತ್ತು ಸ್ಮರಣೀಯ ಪ್ರವಾಸಗಳಲ್ಲೊಂದಾದ ಮುನಿಶ್ಯಾರಿಗೆ ಹೋಗಿಬರಲು ಕಾರಣವಾದ ಗುಬ್ಬಚ್ಚಿಗಳಿಗೆ ಧನ್ಯವಾದಗಳು.

Similar News

ಜಗದಗಲ
ಜಗ ದಗಲ