ಹೆಮ್ಮಾಡಿ: ವಸತಿ ಸಮುಚ್ಚಯದ ಕೊಠಡಿಯಲ್ಲಿ ಸಿಲುಕಿದ್ದ ವೃದ್ಧನಿಗೆ ನೆರವಾದ ಅಗ್ನಿಶಾಮಕ ದಳ

Update: 2023-03-20 10:18 GMT

ಕುಂದಾಪುರ, ಮಾ.20: ಅಪಾರ್ಟ್‌ಮೆಂಟ್ ಒಂದರ ಕೋಣೆಯಲ್ಲಿ ಸಿಲುಕಿಕೊಂಡಿದ್ದ ವೃದ್ಧರೊಬ್ಬರಿಗೆ ಅಗ್ನಿಶಾಮಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನೆರವಾದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯ ವಸತಿ ಸಮುಚ್ಚಯವೊಂದರಲ್ಲಿ ರವಿವಾರ ನಡೆದಿದೆ.

ಅಪಾರ್ಟ್‌ಮೆಂಟ್ ನ 4ನೇ ಮಹಡಿಯಲ್ಲಿನ ಫ್ಲ್ಯಾಟ್ ವೊಂದರಲ್ಲಿದ್ದ 70 ವರ್ಷ ಪ್ರಾಯದ ಮುಹಮ್ಮದ್ ಬಿ.ಎಸ್. ಎಂಬವರು ಕೊಠಡಿಯೊಳಗೆ ಒಂಟಿಯಾಗಿದ್ದ ವೇಳೆ ಹೊರಗಡೆಯಿಂದ ಬಾಗಿಲು ಲಾಕ್ ಆಗಿದೆ. ಈ ವಿಷಯ ಅರಿತು ತಕ್ಷಣ ಧಾವಿಸಿದ ಕುಂದಾಪುರ ಅಗ್ನಿಶಾಮಕ ದಳ ತಂಡವು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ.ಗೌಡ ನೇತೃತ್ವದಲ್ಲಿ ಜಲವಾಹನದ ಮೇಲ್ಗಡೆಯಿಂದ ಏಣಿಯನ್ನು ಇರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಆಸಿಫ್ ಅಲಿ ಎಂಬವರು ಏಣಿ ಮೂಲಕ ಅಪಾರ್ಟ್‌ಮೆಂಟ್ ಕಟ್ಟಡದ ಬಾಲ್ಕನಿಗೆ ತೆರಳಿ ಲಾಕ್ ತೆಗೆದು ವ್ಯಕ್ತಿಗೆ ಹೊರಬರಲು ನೆರವಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ರವೀಂದ್ರ ಎಸ್. ದೇವಾಡಿಗ, ಅಗ್ನಿಶಾಮಕ ಚಾಲಕ ಮುಸ್ತಫ, ಅಗ್ನಿಶಾಮಕರಾದ ಅಭಿಷೇಕ್ ಢಂಗ್, ಸಮೀರುಲ್ಲಾ ಮುಗುಟ ಖಾನ್ ಭಾಗಿಯಾಗಿದ್ದರು.

Similar News