ಅನಾಥ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಕಾಡುತ್ತಲೇ ಇರುತ್ತದೆ : ನರೇಂದ್ರ ರೈ ದೇರ್ಲ

ನಿಯಾಝ್ ಪಡೀಲ್‌ರ ‘ಯತೀಮ್’ ಕಾದಂಬರಿ ಬಿಡುಗಡೆ

Update: 2023-03-20 13:17 GMT

ಮಂಗಳೂರು: ಕೇವಲ ‘ಯತೀಮ್’ (ಅನಾಥ) ಮಕ್ಕಳಲ್ಲಿ ಮಾತ್ರ ಅನಾಥ ಪ್ರಜ್ಞೆಯಲ್ಲ, ಜಗತ್ತಿನ ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಕಾರಣಕ್ಕೆ ಅನಾಥ ಪ್ರಜ್ಞೆ ಕಾಡುತ್ತಲೇ ಇರುತ್ತದೆ. ಆ ಅನಾಥ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತಾ ಮನುಷ್ಯರಾಗುವ ಪ್ರಯತ್ನ ಮಾಡಬೇಕಿದೆ ಎಂದು ಹಿರಿಯ ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದ್ದಾರೆ.

ನಗರದ ಬಲ್ಮಠದಲ್ಲಿರುವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ಸಹಾಯಕ ಕನ್ನಡ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ‘ಯತೀಮ್’ ಕನ್ನಡ ಕಾದಂಬರಿಯ  ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಸಂವೇದನೆ ದೂರವಾಗುತ್ತಿದೆ. ಮೌಲ್ಯಗಳು ನಶಿಸಿಹೋಗುತ್ತಿವೆ. ಶಿಕ್ಷಣವು ಯಾಂತ್ರಿಕವಾಗುತ್ತಿದೆ. ಸಹಿಸುವ ಗುಣವು ಮರೆಯಾಗುತ್ತಿದೆ. ಮಾನಸಿಕ ಸ್ಥೈರ್ಯವು ಕುಸಿಯುತ್ತಿದೆ. ಇಂತಹ ಸನ್ನಿವೇಶದಲ್ಲಿ ನಾವು ಕೇವಲ ಪುಸ್ತಕದ ಕಟ್ಟು ಬಿಚ್ಚಿ ಪುಟಗಳನ್ನು ತಿರುಗಿಸಿದರೆ ಸಾಲದು. ನಮ್ಮೊಳಗಿನ ಕಟ್ಟು ಬಿಚ್ಚಬೇಕು, ನಮ್ಮೊಳಗಿನ ಕತ್ತಲೆಯನ್ನು ಓಡಿಸಬೇಕು, ನಮ್ಮೊಳಗಿನ ಯಾಂತ್ರಿಕತೆಯನ್ನು ಕಳಚುವ ಪ್ರಯತ್ನ ಮಾಡಬೇಕು ಎಂದು ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ‘ಯತೀಮ್’ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ‘ಕಾದಂಬರಿ ಬರೆಯುವುದು ಸುಲಭದ ಕೆಲಸವಲ್ಲ. ಅದಕ್ಕೆ ಸತತ ಪರಿಶ್ರಮ ಅಗತ್ಯವಿದೆ. ಒಳ್ಳೆಯ ಓದುವಿನಿಂದ ಮಾತ್ರ ಉತ್ತಮ ಸಾಹಿತ್ಯ ರಚಿಸಲು ಸಾಧ್ಯವಿದೆ. ಈ ಸಾಹಿತ್ಯದ ಮೂಲಕ ಲೇಖಕರು ಸಮಾಜದಲ್ಲಿ ಪರಿವರ್ತನೆಗೆ ಮುಂದಾಗಿದ್ದಾರೆ. ಯತೀಮ್ ಎಂಬುದು ಕೇವಲ ಒಂದು ಪದವಲ್ಲ. ಅದೊಂದು ಭಾವನಾತ್ಮಕ ವಿಚಾರವಾಗಿದೆ. ಪ್ರತಿಯೊಂದು ಧರ್ಮ ಕೂಡ ‘ಅನಾಥ’ ರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿವೆ ಎಂದರು.

ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್‌ ರಾಜ್ ಕುತ್ತಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತ್ತೋರ್ವ ಉಪಪ್ರಾಂಶುಪಾಲ ನಾರಾಯಣ ಸುಕುಮಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೇಖಕ ನಿಯಾಝ್ ಪಡೀಲ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಚೈತ್ರಾ ವಂದಿಸಿದರು. ಸಹ ಪ್ರಾಧ್ಯಾಪಕ ಡಾ. ದಿನಕರ್ ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು.

Similar News