ಎಸ್‌ಡಿಪಿಐಯೊಂದಿಗೆ ಒಳ ಒಪ್ಪಂದ, ಸುಳ್ಳು ಹೇಳಿಕೆಗಳೇ ಬಿಜೆಪಿ ಬಂಡವಾಳ: ಕಾಂಗ್ರೆಸ್

Update: 2023-03-20 14:01 GMT

ಉಡುಪಿ: ಪಿಎಫ್‌ಐಯನ್ನು ದೇಶ ವಿರೋಧಿ ಮುಸ್ಲಿಂ ಮೂಲಭೂತವಾದಿ ಸಂಘಟನೆ ಎಂದು ಬಿಜೆಪಿ  ನಿಷೇಧಿಸಿ ದ್ದರೂ ಅದರ ಅಂಗ ಸಂಸ್ಥೆ ಎಸ್‌ಡಿಪಿಐಯನ್ನು ನಿಷೇಧಿಸದೆ ಇರುವುದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸು ತ್ತದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತ ವಿಭಜನೆಗಾಗಿ ಬಿಜೆಪಿ ಎಸ್‌ಡಿಪಿಐಯೊಂದಿಗೆ ಒಳಒಪ್ಪಂದ ಮಾಡಿಕೊಳ್ಳುತ್ತದೆ ಅಷ್ಟೇ ಅಲ್ಲದೆ ಆರ್ಥಿಕ ಸಹಾಯ ನೀಡಿ ಸ್ಪರ್ಧಿಸಲು ಉತ್ತೇಜಿಸುತ್ತಿರುವುದು ಈಗಾಗಲೇ ಸ್ಥಳೀಯ ಚುನಾವಣೆಗಳಲ್ಲಿ ಜಗಜ್ಜಾಹೀರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು  ತಿಳಿಸಿದ್ದಾರೆ.

ಈ ಕುರಿತು ಉಡುಪಿ  ಬಿಜೆಪಿ  ಜಿಲ್ಲಾಧ್ಯಕ್ಷರ  ಹೇಳಿಕೆಗೆ  ಪ್ರತಿಕ್ರಿಯಿಸಿರುವ ಕೊಡವೂರು, ಚುನಾವಣೆಯಲ್ಲಿ ಮತಗಳು ಚದುರಿ ಹೋಗದಂತೆ ಎಲ್ಲಾ ರಾಷ್ಟೀಯ  ಪಕ್ಷಗಳು ಇತರ ಸ್ಪರ್ಧಿಗಳನ್ನು ಹಿಂತೆಗೆಯುವಂತೆ  ಮನವಿ ಮಾಡಿಕೊಳ್ಳುವುದು ಸ್ವಾಭಾವಿಕ. ಈ ಪ್ರಕ್ರಿಯೆ ಹೊಂದಾಣಿಕೆ ಆಗಲಾರದು.  ಬಿಜೆಪಿ ಸರಕಾರ ಸಂವಿಧಾನದ ತಿದ್ದುಪಡಿ ಮಾಡಲು ಹೊರಟಾಗ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್  ಪ್ರತಿಭಟಿಸಿದಾಗ, ಸಮಾನ ಮನಸ್ಕರು ಒಗ್ಗೂಡಿದರೆ ಅದು ಸಂವಿಧಾನದ  ಬದ್ಧತೆ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಐಎಫ್‌ಐ, ಎಸ್‌ಡಿಪಿಐ,  ಕೆಎಫ್‌ಡಿ ಕಾರ್ಯಕರ್ತರನ್ನು ಬಂಧನದಿಂದ ಮುಕ್ತಗೊಳಿಸಿದ್ದಾರೆ ಎಂಬ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ಸತ್ಯವಾಗಿಸುವ ಪ್ರಯತ್ನವಾಗಿದೆ. ಸಿದ್ದರಾಮಯ್ಯ ತಮ್ಮ ಅಧಿಕಾರದ  ಅವಧಿಯಲ್ಲಿ ಬಂಧನದಿಂದ ಮುಕ್ತಿಗೊಳಿಸಿದ ಎಸ್‌ಡಿಪಿಐ ಕಾರ್ಯಕರ್ತರ ದಾಖಲೆ ಒದಗಿಸುವಂತೆ ಲಿಖಿತವಾಗಿ ಸರಕಾರಕ್ಕೆ ಮನವಿ ಮಾಡಿಕೊಂಡರೂ  ಇಷ್ಟರವರೆಗೆ ಯಾವುದೇ ದಾಖಲೆಗಳನ್ನು ಸರಕಾರ ನೀಡಿಲ್ಲ. ಸರಕಾರ ದಾಖಲೆ ನೀಡದೆ ಬರೇ ಆರೋಪ ಮಾಡುವುದು ಖಂಡನೀಯ ಎಂದರು.

ಹೀಗಿರುವಾಗ ಬಿಜೆಪಿ ಅಧ್ಯಕ್ಷರ ಆರೋಪವು, ಚುನಾವಣೆ ಬರುವಾಗ  ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆಯಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಆರೋಪಿಸಿದರು.

Similar News