​ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2023-03-20 15:02 GMT

ಮಂಗಳೂರು, ಮಾ. 20: ಯುವತಿಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರಿನ ವೆಂಕಟೇಶ ರಾಮ ಬೋವಿ ಬಂಧಿತ ಆರೋಪಿ.

2008ರಲ್ಲಿ ನಡೆದ ಯುವತಿಯ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪವನ್ನು ಈತ ಎದುರಿಸುತ್ತಿದ್ದ. ಈತನಿಗೆ 2009ರಲ್ಲಿ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 4,000 ರೂ. ದಂಡ ವಿಧಿಸಿತ್ತು. ಬೆಳಗಾವಿ ಕಾರಾಗೃಹದಲ್ಲಿದ್ದ ಈತ 2011ರ ಜನವರಿಯಲ್ಲಿ ರಾಜ್ಯ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಅನಂತರ ಹೈಕೋರ್ಟ್ ಮೇಲ್ಮನವಿಯ ವಿಚಾರಣೆ ನಡೆಸಿ ಕೆಳ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ನ್ಯಾಯಾಂಗ ಬಂಧನ ಮುಂದುವರೆಸಿ ಆದೇಶ ನೀಡಿತ್ತು. ಆದರೆ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ನಾಯ್ಕರ ನಿರ್ದೇಶನದಂತೆ ಮಾ.15ರಂದು ಕಾವೂರು ಠಾಣಾ ಇನ್‌ಸ್ಪೆಕ್ಟರ್ ಗುರುರಾಜ್, ಎಸ್ಸೈಗಳಾದ ರೇವಣ್ಣ ಸಿದ್ಧಪ್ಪ, ರಘುನಾಯ್ಕ್ ಅವರ ಮಾರ್ಗದರ್ಶನದಂತೆ ಹೆಡ್‌ಕಾನ್‌ಸ್ಟೆಬಲ್ ಬಾಲಕೃಷ್ಣ, ಕಾನ್‌ಸ್ಟೆಬಲ್ ಸುರೇಶ್ ಕೊಳ್ಳಿ, ಶ್ರೀಧರ್ ವಿ. ಅವರನ್ನು ಒಳಗೊಂಡ ತಂಡವು ಆರೋಪಿಯನ್ನು ಶಿರಸಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರ ಕಚೇರಿಯ ಕಂಪ್ಯೂಟರ್ ವಿಭಾಗದ ಮನೋಜ್ ಸಹಕರಿಸಿದ್ದರು.

Similar News