ಆಹಾರ ಹಾಳಾಗಿರುವುದನ್ನು ಪತ್ತೆಹಚ್ಚಲು ಭಾರತೀಯ ವಿಜ್ಞಾನಿಯಿಂದ ಪುಟ್ಟ ಸಾಧನ ಸಂಶೋಧನೆ

Update: 2023-03-20 17:01 GMT

ಹೊಸದಿಲ್ಲಿ, ಮಾ. 20: ಆಹಾರ ಹಾಳಾಗಿರುವುದನ್ನು ಪತ್ತೆ ಹಚ್ಚುವ ಸಣ್ಣ ಹಾಗೂ ಕಡಿಮೆ ವೆಚ್ಚದ ಆಮ್ಲೀಯತೆಯ ಸಂವೇದಕವನ್ನು ಅಮೆರಿಕದಲ್ಲಿರುವ ಭಾರತೀಯ ಸಂಶೋಧಕರೋರ್ವರು ಅಭಿವೃದ್ಧಿಪಡಿಸಿದ್ದಾರೆ.  

ಸ್ಥಿತಿ ಸ್ಥಾಪಕ ಹೊಂದಿರುವ ಈ ಪಿಎಚ್ ಸಂವೇದಕ ಕೇವಲ 2 ಮಿಲ್ಲಿಮೀಟರ್ ಉದ್ದ ಹಾಗೂ 10 ಮಿಲ್ಲಿಮೀಟರ್ ಅಗಲ ಹೊಂದಿದೆ. ಪ್ಲಾಸ್ಟಿಕ್‌ನಿಂದ ಸುತ್ತಲಾಗುವ ಹಾಲಿ ಆಹಾರ ಪ್ಯಾಕೇಜಿಂಗ್ ವಿಧಾನದಲ್ಲಿ ಈ ಸಾಧನವನ್ನು ಸುಲಭವಾಗಿ ಅಳವಡಿಸಬಹುದು. 
ಕೈಗಾರಿಕೆಗಳು ಸಾಮಾನ್ಯವಾಗಿ ದೊಡ್ಡ ಮೀಟರ್‌ಗಳನ್ನು ಬಳಸುತ್ತವೆ. ಅದು ಸುಮಾರಾಗಿ 1 ಇಂಚು ಉದ್ದ ಹಾಗೂ 5 ಇಂಚು ಎತ್ತರ ಇರುತ್ತದೆ. ಇದರಿಂದ ಪಿಎಚ್ ಮಟ್ಟ ಅಥವಾ ಆಹಾರದಲ್ಲಿರುವ ಆಮ್ಲೀಯತೆಯ ಮಟ್ಟವನ್ನು ಅಳೆಯಲು ಸಾಧ್ಯ. ಆದರೆ, ಇದು ಆಹಾರದ ತಾಜಾತನದ ಮೇಲೆ ನಿಗಾ ಇರಿಸಲು ಪ್ರತಿ ಪ್ಯಾಕೇಜ್‌ನಲ್ಲಿ ಅಳವಡಿಸಲು ಸೂಕ್ತವಲ್ಲ. 

‘‘ನಾವು ಅಭಿವೃದ್ಧಿಪಡಿಸಿದ ಪಿಎಚ್ ಸೆನ್ಸಾರ್‌ಗಳು  ಸಣ್ಣ ವಯರ್‌ಲೆಸ್ ರೇಡಿಯೊ-ಆವರ್ತನಾಂಕ ಗುರುತಿಸುವ ಸಾಧನದಂತೆ ಕಾರ್ಯ ನಿರ್ವಹಿಸುತ್ತದೆ. ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿದ ಬಳಿಕ ನಮ್ಮ ಸರಕುಗಳಿಗೆ ಟ್ಯಾಗ್ ನೀಡುವಂತೆೆ’’ ಎಂದು ಅಮೆರಿಕದ ಟೆಕ್ಸಾಸ್‌ನ ಸೌಥರ್ನ್ ಮೆಥಡಿಸ್ಟ್ ಯುನಿವರ್ಸಿಟಿಯ ಪಿಎಚ್‌ಡಿ ವಿದ್ಯಾರ್ಥಿ ಖೆಂಗಡೌಲಿಯು ಚವಾಂಗ್ ತಿಳಿಸಿದ್ದಾರೆ. 

‘‘ನಮ್ಮ ಸಾಧನದೊಂದಿಗೆ ಆಹಾರ ಪ್ಯಾಕೇಜ್‌ಗಳು ಶಿಪ್ಪಿಂಗ್ ಲಾಜಿಸ್ಟಿಕ್ ಕೇಂದ್ರ, ಬಂದರು, ಗೇಟ್‌ಗಳು ಹಾಗೂ ಸೂಪರ್ ಮಾರ್ಕೆಟ್‌ನ ಪ್ರವೇಶದ್ವಾರದಂತಹ ತಪಾಸಣಾ ಕೇಂದ್ರಗಳನ್ನು ಹಾದು ಹೋಗುವಾಗ ಅದು ಪ್ರತಿ ಬಾರಿ  ಸ್ಕ್ಯಾನ್ ಮಾಡುತ್ತದೆ   ಹಾಗೂ ದತ್ತಾಂಶವನ್ನು ಪಿಎಚ್ ಮೌಲ್ಯವನ್ನು ಪರಿಶೀಲಿಸುವ ಸರ್ವರ್‌ಗೆ ಕಳುಹಿಸಿಕೊಡುತ್ತದೆ’’ ಎಂದು ಚವಾಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಈ ಸಾಧನ ನಿರಂತರ  ಪಿಎಚ್‌ನ ಬಗ್ಗೆ ನಿಗಾ ವಹಿಸುತ್ತದೆ  ಹಾಗೂ ರೈತನಿಂದ ಗ್ರಾಹಕನ ಮನೆಯ ವರೆಗೆ ಸಂಪೂರ್ಣ ತಾಜಾತನದ ಮಿತಿಯನ್ನು ನಿಖರವಾಗಿ ಗುರುತಿಸುತ್ತದೆ ಎಂದು ಚವಾಂಗ್ ಹೇಳಿದ್ದಾರೆ. 

Similar News