ಯೋಚಿಸಿ ಮತ ನೀಡೋಣ

Update: 2023-03-20 18:46 GMT

ಮಾನ್ಯರೇ,

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಎದುರಿಸಲಿರುವ ಚುನಾವಣೆಯಲ್ಲಿ ರಾಜ್ಯದ ಜನತೆ ತಮ್ಮ ಮತವನ್ನು ಪ್ರಾಮಾಣಿಕವಾಗಿ ಚಲಾಯಿಸಿ ಉತ್ತಮವಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಮುಂದಿನ ಐದು ವರ್ಷಗಳಲ್ಲಿ ನಾವು ಸುಖವಾಗಿ, ನೆಮ್ಮದಿಯಾಗಿ ಬದುಕಬಹುದಲ್ಲದೆ ನಮ್ಮ ವ್ಯವಸ್ಥೆ, ಸಮಾಜವೂ ಭ್ರಷ್ಟಾಚಾರ ಮುಕ್ತವಾಗಲು ಸಹಕಾರಿಯಾಗಬಹುದು. ಅಲ್ಲದೆ ನಮಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ವಸತಿ, ಶಿಕ್ಷಣ ಮತ್ತು ನೈರ್ಮಲ್ಯದ ವಾತಾವರಣದಲ್ಲಿ ಬದುಕಲು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈಗಿನ ಕಾಲಘಟ್ಟದಲ್ಲಿ ಸೂಕ್ತ ಅಭ್ಯರ್ಥಿ ಪರ ಮತ ಚಲಾಯಿಸುವ ಮುನ್ನ ಮತದಾರರಾದ ನಾವು ಸಾಕಷ್ಟು ಆಲೋಚಿಸಬೇಕಿದೆ. ಸ್ಪರ್ಧಿಸುವ ಅಭ್ಯರ್ಥಿಗಳ ಹಿನ್ನೆಲೆಯನ್ನು ಮತ್ತು ಅವರ ವ್ಯಕ್ತಿತ್ವ ಅರಿಯುವುದರ ಜೊತೆಗೆ ಅವರಿಂದ ಕ್ಷೇತ್ರದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆಯೇ? ಎಂಬುದನ್ನು ಕೂಡ ಯೋಚಿಸಬೇಕು. ಬೇರೆ ಬೇರೆ ಸ್ವರೂಪಗಳಲ್ಲಿ ಆಸೆ-ಆಕಾಂಕ್ಷೆಗಳನ್ನು ಒಡ್ಡುತ್ತಾ ಬರುವವರಿಗೆ ಮತ ನೀಡಬಾರದು. ತಮ್ಮ ಕ್ಷೇತ್ರದ ಬಗ್ಗೆ ಕಾಳಜಿಯುಳ್ಳ ಅಭ್ಯರ್ಥಿ ಪರ ಮತ ಚಲಾಯಿಸುವುದು ಒಳ್ಳೆಯದು
80-90 ರ ದಶಕಗಳ ಹಿಂದಿನ ಚುನಾವಣೆಗಳಿಗೂ ಈಗಿನ ಚುನಾವಣೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಆಗ ಜನರೇ ಅಭ್ಯರ್ಥಿಗಳನ್ನು ಆಹ್ವಾನಿಸಿ ಹಣ ನೀಡಿ ಗೆಲ್ಲಿಸಲು ಸಹಕಾರಿಯಾಗುತ್ತಿದ್ದರು. ಈಗ ಅಭ್ಯರ್ಥಿಗಳೇ ಮತದಾರರಿಗೆ ದುಡ್ಡು ಕೊಟ್ಟು ಗೆಲ್ಲುವ ಹಂತಕ್ಕೆ ತಲುಪಿದ್ದಾರೆ. ಹೆಚ್ಚಿನವರು ಭ್ರಷ್ಟಾಚಾರದಲ್ಲಿ ಮುಳುಗಿ ಬೇಕಾದಷ್ಟು ದುಡ್ಡು ಮಾಡಿಕೊಂಡಿದ್ದಾರೆಯೇ ಹೊರತು ಅಭಿವೃದ್ಧಿಯಂತೂ ಶೂನ್ಯ! ಬರೀ ಸ್ವಂತದ ಸಂಪಾದನೆಯೇ ಅವರದ್ದಾಗಿದೆ. ಆ ಕಾರಣಕ್ಕೆ ಜನರನ್ನು ಮಂಕಾಗಿಸಿ ಆಮಿಷಗಳಿಗೆ ಒಳಗಾಗುವಂತೆ ಮಾಡುತ್ತಿದ್ದಾರೆ. ಜನರ ಕಲ್ಯಾಣ ಯೋಜನೆಗಳು ಜನರಿಗೆ ಮಾತ್ರ ತಲುಪುತ್ತಲೇ ಇಲ್ಲ.
ಭ್ರಷ್ಟಾಚಾರ ರಹಿತ ಆಡಳಿತ ಇಂದಿನ ಅಗತ್ಯವಾಗಿದೆ. ಜಾರಿಗೊಳಿಸುವ ಯೋಜನೆಗಳನ್ನು ಕ್ಷೇತ್ರದ ಜನರ ಮನೆಯ ಬಳಿಗೆ ಖುದ್ದಾಗಿ ತೆಗೆದುಕೊಂಡು ಹೋಗುವ ಜನಪ್ರತಿನಿಧಿ, ಸರಕಾರ ಬರಬೇಕಾದ ಅನಿವಾರ್ಯತೆಯ ಜರೂರತ್ತಿದೆ.
ಮುಂದಿನ ಚುನಾವಣೆ ಜಾತಿ, ಧರ್ಮದ ಆಧಾರಿತವಲ್ಲದ ಸ್ವಚ್ಛ ಮತ್ತು ಪಾರದರ್ಶಕವಾದ ಚುನಾವಣೆಯಾಗಬೇಕಿದೆ.
 

Similar News