ಬಿಫೆಸ್: ತೆರೆಗೆ ಬರಲಪ್ಪಣೆಯೆ ದೊರೆಯೇ?

Update: 2023-03-21 07:37 GMT

ಎಲ್ಲವೂ ಸರಿಯಾದರೆ, ಮಾರ್ಚ್ 23ರಿಂದ ಬೆಂಗಳೂರಿನಲ್ಲಿ ಸಿನೆಮಾ ಹಬ್ಬದ ವಾತಾವರಣ. ಓರಾಯನ್ ಮಾಲ್ ಚಿತ್ರ ಮಂದಿಯ ಚಿತ್ರಸಂತೆಯಾಗಲಿದೆ. ಮೆಟ್ರೋದಲ್ಲಿ ವಿಶ್ವ ಸಿನೆಮಾದ ಜನ ತಮ್ಮ ಪ್ರತಿನಿಧಿ ಕಾರ್ಡ್ ತಗಲಿಸಿಕೊಂಡು ಉಳಿದವರಿಗೆ ಕಾಣಸಿಗುತ್ತಾರೆ. ಓರಾಯನ್ ಮಾಲ್‌ನಲ್ಲಿ ತಮ್ಮ ಇಷ್ಟದ ಚಿತ್ರಗಳನ್ನು ಅರಸುತ್ತಾ, ಒಂದು ತೆರೆಯಿಂದ, ಇನ್ನೊಂದು ತೆರೆಗೆ ಓಡುತ್ತಿರುವ, ಸರತಿಯಲ್ಲಿ ಕಾಯುತ್ತಿರುವವರ ಚಿತ್ರ ನೋಡಲಾದರೂ ಒಮ್ಮೆ ಜನಸಾಮಾನ್ಯರು ಓರಾಯನ್ ಮಾಲ್‌ಗೆ ತೆರಳಿದರೆ, ಅಂಥವರು ಚಿತ್ರ ಸಂತೆಯ ವೀಕ್ಷಣೆ ಮಾಡಬಹುದು.

ಎರಡು ತಿಂಗಳ ಹಿಂದೆ ಅಂದರೆ ಈ ವರ್ಷದ ಜನವರಿ ತಿಂಗಳಲ್ಲಿ, ಹದಿಮೂರು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ, ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್) ತನ್ನ ಹದಿನಾಲ್ಕನೇ ಆವೃತ್ತಿ ಚಿತ್ರೋತ್ಸವವನ್ನು ನಡೆಸುವುದೇ, ಇಲ್ಲವೇ? ಎಂಬ ಪ್ರಶ್ನೆ ಕನ್ನಡದ ಸಿನಿಲೋಕದ ಆಸಕ್ತರನ್ನು ‘ಗಾಢ’ವಾಗಿ ಕಾಡುತ್ತಿತ್ತು. ಕಾರಣ; ಚಿತ್ರೋತ್ಸವ ನಡೆಸುವುದಕ್ಕೆ ಧನಸಹಾಯ ನೀಡುವ ಆಡಳಿತಾರೂಢ ಸರಕಾರ, ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯತ್ತ ತನ್ನೆಲ್ಲ ಗಮನವನ್ನು ಕೇಂದ್ರೀಕರಿಸಿ, ಚಿತ್ರೋತ್ಸವಕ್ಕೆ ಸಂಬಂಧಿಸಿದ ಹಣಕಾಸಿನ ಕಡತವನ್ನು ಪಕ್ಕಕ್ಕಿಟ್ಟಿದ್ದು. ಆದರೆ, ಚಿತ್ರೋತ್ಸವವೇ ತನ್ನ ಮುಖ್ಯ ಕಾರ್ಯಕ್ರಮವಾಗಿಸಿಕೊಂಡಿರುವ, ಕರ್ನಾಟಕದ ಚಲನಚಿತ್ರಕ್ಕೆ ಸಂಬಂಧಿಸಿದ ಉಳಿದೆಲ್ಲ ಯೋಜನೆಗಳು ಗೌಣವೆಂದು ಭಾವಿಸಿರುವ ಕರ್ನಾಟಕ ಚಲನಚಿತ್ರ ಅಕಾಡಮಿ (ಕೆಸಿಎ), ಯಾವುದೇ ಕಾರಣಕ್ಕೂ ಚಿತ್ರೋತ್ಸವಕ್ಕೆ ಧಕ್ಕೆಯಾಗಕೂಡದೆಂದು ಭಾವಿಸಿದ ಕಾರಣ, ಬಹುನಿರೀಕ್ಷೆಯ ಹದಿನಾಲ್ಕನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್)ಕ್ಕೆ ‘ಅಂತೂ ಇಂತೂ’ ಕಾಲ ಕೂಡಿ ಬಂದಿದೆ. ಈ ಚಿತ್ರೋತ್ಸವಕ್ಕಾಗಿ ಸರಕಾರ ನಾಲ್ಕೂವರೆ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಷ್ಟು ಹಣ ಸಾಕಲ್ಲವೇ? ಕೆಸಿಎ ಕೇಂದ್ರ ಸ್ಥಾನವಾಗಿರುವ ನಂದಿನಿ ಲೇಔಟ್‌ನ ಅಮೃತೋತ್ಸವ ಭವನದಲ್ಲಿ ನಡೆದಿರುವ ಸಿದ್ಧತೆ ನೋಡಿದರೆ ಸಾಕೆನ್ನಿಸುತ್ತದೆ.

ಈ ತಿಂಗಳ 23ರಿಂದ 30ರವರೆಗೆ ಬೆಂಗಳೂರು ನಗರದಲ್ಲಿ ಸಿನಿಮೀಯ ವಾತಾವರಣ ಕಾಣಲಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕೊಟ್ಟಂತೆ ನಡೆದುಕೊಂಡಿಲ್ಲ ಎಂಬ ಸಣ್ಣ ಅಸಮಾಧಾನ ಚಿತ್ರಲೋಕದವರಲ್ಲಿ ಕಾಣುತ್ತಿದೆ. ಕಳೆದ ವರ್ಷ ಬಿಫೆಸ್ ಉದ್ಘಾಟನೆಯ ಸಂದರ್ಭದಲ್ಲಿ; ‘‘ಪ್ರತೀ ವರ್ಷ ಮಾರ್ಚ್ ತಿಂಗಳ 3ರಂದು ಚಿತ್ರೋತ್ಸವಕ್ಕೆ ತೆರೆ ಏಳುತ್ತದೆ ಎಂದು ಬೊಮ್ಮಾಯಿ ವಾಗ್ದಾನ ಮಾಡಿದ್ದರು. (ಏಕೆಂದರೆ ಕನ್ನಡದ ಪ್ರಥಮ ವಾಕ್ಚಿತ್ರ ‘ಸತಿ ಸುಲೋಚನ’ 1934ರಲ್ಲಿ ಬಿಡುಗಡೆಯಾದದ್ದು ಮಾರ್ಚ್ 3 ರಂದು. ಆ ದಿನವನ್ನು ವಿಶ್ವ ಕನ್ನಡ ಚಲನಚಿತ್ರ ದಿನವೆಂದು ಘೊಷಣೆ ಮಾಡಲಾಗಿದೆ.) ಆದರೆ ಚುನಾವಣೆ, ಬಜೆಟ್, ಪ್ರಧಾನಿ, ಗೃಹ ಸಚಿವರ ‘ಸತತ’ ರಾಜ್ಯ ಭೇಟಿಯ ದೃಷ್ಟಿಯಿಂದ ಬೊಮ್ಮಾಯಿ ಮಾತು ಉಳಿಸಿಕೊಳ್ಳಲಾಗಿಲ್ಲ ಎನ್ನಿಸುತ್ತದೆ. ಇರಲಿ. ಅಂತಿಮವಾಗಿ ಬಿಫೆಸ್ ಮಾರ್ಚ್ ತಿಂಗಳಲ್ಲಿಯೇ ನಡೆಯುತ್ತಿರುವುದು ಸಮಾಧಾನ ತರುವ ಸಂಗತಿ.

ಬಿಫೆಸ್ ಮತ್ತು ಅಂತರ್‌ರಾಷ್ಟ್ರೀಯ ಮನ್ನಣೆ
ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್) ಅಂತರ್‌ರಾಷ್ಟ್ರೀಯ ಮನ್ನಣೆ ಪಡೆದನಂತರ ನಡೆಯುತ್ತಿರುವ ಎರಡನೇ ಚಿತ್ರೋತ್ಸವ ಇದು. ಈ ಮನ್ನಣೆ ಪಡೆಯಲು ಬಿಫೆಸ್ ದಶಕದ ಪ್ರಯತ್ನ ನಡೆಸಬೇಕಾಯಿತು. ಹಲವು ವರ್ಷಗಳ ಪ್ರಯತ್ನದ ನಂತರ ಚಲನಚಿತ್ರ ನಿರ್ಮಾಪಕರ ಸಂಘಗಳ ಅಂತರ್‌ರಾಷ್ಟ್ರೀಯ ಒಕ್ಕೂಟ ಈ ಮನ್ನಣೆ ನೀಡಿದೆ. ವಿಶ್ವದಾದ್ಯಂತ ನಡೆಯುವ 5,000ಕ್ಕೂ ಹೆಚ್ಚು ಚಿತ್ರೋತ್ಸವಗಳ ಪೈಕಿ ಈ ಮಾನ್ಯತೆ ಪಡೆದ 46 ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗ ಬಿಫೆಸ್ ಕೂಡ ಒಂದು. ಅಷ್ಟೇ ಅಲ್ಲ. ದೇಶದಲ್ಲಿ ನಡೆಯುವ ಐದು ಮಾನ್ಯತೆ ಪಡೆದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗ ಬಿಫೆಸ್‌ಗೆ ಕೂಡ ಅಗ್ರ ಸ್ಥಾನ. ವಿಶ್ವದ ಒಂದೊಂದು ಚಿತ್ರೋತ್ಸವಕ್ಕೂ ಒಂದೊಂದು ಪ್ರದೇಶದ ಚಿತ್ರಗಳನ್ನು ಮೀಸಲಿಡಲಾಗುತ್ತದೆ. ಈ ಪ್ರಕಾರದಲ್ಲಿ ಬಿಫೆಸ್ ಅನ್ನು ಏಶ್ಯ ದೇಶಗಳ ಚಿತ್ರಗಳ ವಿಶೇಷ ಆವೃತ್ತಿ ಎಂದು ಗುರುತಿಸಲಾಗಿದೆ. ಏಶ್ಯನ್ ಸ್ಪರ್ಧಾ ವಿಭಾಗದಲ್ಲಿ ಕನ್ನಡದ ಹಾಗೂ ಭಾರತೀಯ ಚಿತ್ರಗಳೂ ಸೇರಿದಂತೆ 14 ಉತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಚಿತ್ರೋತ್ಸವದ ಉದ್ಘಾಟನೆ ಈ ಬಾರಿ ಮತ್ತೆ ವಿಧಾನ ಸೌಧದ ಮೆಟ್ಟಿಲಿಗೆ ಹಿಂದಿರುಗಿದೆ. ಕಳೆದ ಬಾರಿ ದೂರದ ಕ್ಯಾಂಪಸ್ ಒಂದರಲ್ಲಿ ನಡೆದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದ್ದನ್ನು ಗಮನದಲ್ಲಿರಿಸಿಕೊಂಡು, ಉದ್ಘಾಟನೆಯ ತಾಣವನ್ನು ಬದಲಿಸಲಾಗಿದೆ. ವಿಶ್ವದ ಐವತ್ತಕ್ಕೂ ಹೆಚ್ಚು ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು ಓರಾಯನ್ ಮಾಲ್‌ನಲ್ಲಿರುವ 11 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಜೊತೆಯಲ್ಲಿ, ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಬನಶಂಕರಿಯ ಸುಚಿತ್ರಾ ಚಿತ್ರ ಸಮಾಜ ತೆರೆಗಳಲ್ಲಿ ಕೂಡ ಚಿತ್ರ ಪ್ರದರ್ಶನವಿರುತ್ತದೆ. ಪ್ರತಿಬಾರಿಯಂತೆ ಈ ಬಾರಿಯೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ನಿರ್ಮಾಪಕರ ಸಂಘ, ಕಲಾವಿದರ ಸಂಘಗಳೂ ಸೇರಿದಂತೆ ಚಿತ್ರರಂಗದ ಎಲ್ಲ ಸಂಘಟನೆಗಳೂ ಕೈಜೋಡಿಸಿವೆ ಎನ್ನುತ್ತಾರೆ ಕೆಸಿಎ ಅಧ್ಯಕ್ಷ, ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್.

‘‘ಸಮಯದ ಅಭಾವವಿದ್ದರೂ, ಚಿತ್ರ ಆಯ್ಕೆಯ ಸಮಿತಿ ಹಗಲು ರಾತ್ರಿ ಶೋಧಿಸಿ, ವಿಶ್ವದ ಐವತ್ತು ರಾಷ್ಟ್ರಗಳ ಅತ್ಯುತ್ತಮ ಎನ್ನಲಾದ 65 ಚಿತ್ರಗಳನ್ನು ಆಯ್ಕೆ ಮಾಡಿದೆ. ಅಲ್ಲದೆ, ಈ ಬಾರಿ ಭಾರತೀಯ ಹಾಗೂ ಕನ್ನಡದ ಕ್ಲಾಸಿಕ್ ಹಣೆಪಟ್ಟಿ ಕಟ್ಟಿಕೊಂಡಿರುವ ಹಲವು ಚಿತ್ರಗಳನ್ನು ಸಿನಿ ಆಸಕ್ತರಿಗೆ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ’’ ಎನ್ನುವುದು ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಕಲಾತ್ಮಕ ನಿರ್ದೇಶಕ ಎಚ್.ಎನ್. ನರಹರಿ ರಾವ್ ನೀಡುವ ಸಮರ್ಥನೆ. ಇಳಿವಯಸ್ಸಿನಲ್ಲಿಯೂ ಅವರಲ್ಲಿರುವ ಚಿತ್ರ ಪ್ರೀತಿಯೇ ಇದಕ್ಕೆ ಕಾರಣ ಎಂದು ನಿಸ್ಸಂಕೋಚವಾಗಿ ಹೇಳಬಹುದು.

‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’

ನರಹರಿ ರಾವ್ ಪ್ರಕಾರ ಚಿತ್ರಗಳ ವರ್ಗೀಕರಣಗಳ ನಡುವಿನ ಗೆರೆ ತೆಳುವಾಗುತ್ತಿದೆ. ‘‘ಈ ಮುನ್ನ ಕಲಾತ್ಮಕ ಹಾಗೂ ವಾಣಿಜ್ಯಾತ್ಮಕವೆಂಬ ಎರಡು ವರ್ಗಗಳ ಚಿತ್ರಗಳ ನಡುವೆ ಆಯ್ಕೆ ನಡೆಯತ್ತಿತ್ತು. ಕಲಾತ್ಮಕ ಚಿತ್ರಗಳ ಮೇಲೆ ಹೆಚ್ಚಿನ ಒತ್ತು ಇರುತ್ತಿತ್ತು. ಕಾರಣ; ಅವು ಬೇರೆಬೇರೆ ದೇಶಗಳ, ಸಂಸ್ಕೃತಿಗಳ ಬದುಕಿನ ಚಿತ್ರ ಕಟ್ಟಿಕೊಡುವುದೇ ಅಲ್ಲದೆ, ನಮ್ಮಿಂದ ದೂರವಿರುವ ಸಮಾಜಗಳ ತೊಳಲಾಟ, ಸಮಸ್ಯೆ, ಮಾನವೀಯ ಸಂಬಂಧಗಳ ಸಂಕೀರ್ಣತೆ, ಸ್ಥಳೀಯ ಕಥಾನಕಗಳ ಮೂಲಕ ಜಾಗತಿಕ ಸಮಸ್ಯೆಗಳಿಗೆ ತಳಕು ಹಾಕುವ ಪ್ರಯತ್ನ. ಆದರೆ ಇಂದಿನ ತಾಂತ್ರಿಕ ಪ್ರಗತಿಯ ಡಿಜಿಟಲ್ ಕಾಲಘಟ್ಟದಲ್ಲಿ, ಈ ಗೆರೆ ತೆಳುವಾಗುತ್ತಾ ಸಾಗಿ ಅಳಿಸಿ ಹೋಗುವ ಮಟ್ಟ ತಲುಪಿದೆ. ಜನರಿಗೆ ಇಂದಿನ ವರ್ಗೀಕರಣವೆಂದರೆ, ಒಳ್ಳೆಯ ಹಾಗೂ ಕೆಟ್ಟ ಚಿತ್ರ, ಅದು ಅವರವರ ಭಾವಕ್ಕೆ ಅವರವರ ಭಕುತಿಗೆ..’’

14ನೇ ಆವೃತ್ತಿಯ ವಿಶೇಷತೆ
ಬಿಫೆಸ್ ಜಾಲತಾಣ(ವೆಬ್‌ಸೈಟ್) ಪ್ರಕಾರ ವಿಶ್ವ ಚಿತ್ರರಂಗದಲ್ಲಿ ಈ ವರ್ಷ ತೆರೆಕಂಡು ಸುದ್ದಿ ಮಾಡಿದ, ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ 65 ಚಿತ್ರಗಳನ್ನು ಹೊರತುಪಡಿಸಿ, ಕನ್ನಡ, ಭಾರತೀಯ ಹಾಗೂ ಏಶ್ಯನ್ ಸ್ಪರ್ಧಾ ವಿಭಾಗಗಳಲ್ಲಿ ಒಟ್ಟು 42 ಗುಣಾತ್ಮಕ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ದಕ್ಷಿಣ ಕೊರಿಯಾಗೆ ಒತ್ತು ನೀಡಲಾಗಿದ್ದು, ಹಾಂಕಾಂಗ್ ಪ್ರದೇಶದ ಖ್ಯಾತ ಚಲನಚಿತ್ರ ನಿರ್ದೇಶಕ ಚಿತ್ರಕಥೆಗಾರ ಹಾಗೂ ನಿರ್ಮಾಪಕ ವಾಂಗ್ ಕಾರ್-ವಾಯ್ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ವಾಯ್ ಚಿತ್ರಗಳ ಗುಣವೆಂದರೆ ನೇರ ಕಥಾನಕ ಶೈಲಿಗಿಂತ ಭಿನ್ನವಾಗಿರುವುದು. ಅವರ ಚಿತ್ರಗಳ ವಾತಾವರಣದ ಸಂಗೀತ ಹಾಗೂ ವಿಶಿಷ್ಟವೆನ್ನಿಸುವ ಛಾಯಾಗ್ರಹಣದ ಚೌಕಟ್ಟು, ದಟ್ಟವಾದ ಆದರೆ ಆರ್ದ್ರವಾದ ಬಣ್ಣದ ಕುಶಲತೆಯ ಕೆತ್ತನೆಗಾಗಿ ವಿಶ್ವದಾದ್ಯಂತ ಸಿನಿ ಪ್ರಿಯರು ಅವರ ಚಿತ್ರಗಳನ್ನು ಆರಾಧಿಸುತ್ತಾರೆ. ವಾಯ್ ಅವರ ‘ಚುಂಗ್-ಕಿಂಗ್ ಎಕ್ಸ್‌ಪ್ರೆಸ್’, ‘ಫಾಲನ್ ಏಂಜಲ್ಸ್’, ‘ಇನ್ ದಿ ಮೂಡ್ ಫಾರ್ ಲವ್’, ‘ಹ್ಯಾಪಿ ಟುಗೆದರ್’ ಮುಂತಾದ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಬಿಫೆಸ್‌ನ ಹದಿನಾಲ್ಕನೇ ಆವೃತ್ತಿಯ ಪ್ರಮುಖ ಆಕರ್ಷಣೆಯೆಂದರೆ, ಈ ವರ್ಷ ಆಸ್ಕರ್ ಪ್ರಶಸ್ತಿ ಪಡೆದಿರುವ, ಡೇನಿಯಲ್ ಕ್ವಾನ್-ಡೇನಿಯಲ್ ಷೀನರ್ಟ್ ನಿರ್ದೇಶನದ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’ ಚಿತ್ರ. ಇದರೊಂದಿಗೆ ಆಫ್ಟರ್ ಸನ್, ‘ಟ್ರಯಾಂಗಲ್ ಆಫ್ ಸ್ಯಾಡ್ನೆಸ್’, ‘ದಿ ವ್ಹೇಲ್’, ‘ನೋ ಬೇರ್ಸ್ ವರ್ಲ್ಡ್’ನಂಥ ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಾಣಲಿವೆ.

ಅಷ್ಟೇ ಅಲ್ಲ. ವಿಶ್ವದ ಬೇರೆಬೇರೆ ದೇಶಗಳ, ಭಾರತದ ವಿವಿಧ ಭಾಗಗಳಿಂದ ಬರುವ ನೂರಾರು ಸಿನೆಮಾಸಕ್ತರು, ಚಿತ್ರ ವಿಮರ್ಶಕರು, ಸಿನೆಮಾ ವಿದ್ಯಾರ್ಥಿಗಳು, ಸಿನೆಮಾ ಪತ್ರಕರ್ತರು, ಒಂದು ವರ್ಷದ ಅವಧಿಯಲ್ಲಿ ಚಿತ್ರ ವಿಶ್ವ ಕಂಡ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಹೊಸ ಆವಿಷ್ಕಾರಗಳನ್ನು ಮೈಗೂಡಿಸಿಕೊಳ್ಳಲು ಕಾತುರರಾಗಿದ್ದು, ಅವರಿಗೆ ತೊಂಭತ್ತರ ಗಡಿದಾಟಲಿರುವ ಕನ್ನಡ ಚಿತ್ರರಂಗದ ಪರಿಚಯ ಮಾಡಿಕೊಡಲು ಬಿಫೆಸ್ ಎಲ್ಲ ಸಿದ್ಧತೆ ನಡೆಸಿದೆ. ಅಂತರ್‌ರಾಷ್ಟ್ರೀಯ ವಿಮರ್ಶಕರ ಸಂಘಟನೆ, (ಫಿಪ್ರೆಸ್ಕಿ) ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ನೀಡಿದ ಏಳು ಚಿತ್ರಗಳು ವಿಮರ್ಶಕ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ. ಪುನರಾವಲೋಕನ ವಿಭಾಗದಲ್ಲಿ ಆಫ್ರಿಕಾ (ಸೆನೆಗಲ್) ದೇಶದ ಚಿತ್ರ ಪಿತಾಮಹ ಎಂದೇ ಗೌರವ ಪಡೆದಿರುವ ‘ಬ್ಲ್ಯಾಕ್‌ಗರ್ಲ್’, ‘ಗ್ಸಾಲಾ’ ಮುಂತಾದ ಚಿತ್ರಗಳ ನಿರ್ದೇಶಕ ಔಸ್ಮಾನ್ ಸೆಂಬೆನೆ ಅವರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ವಿ.ಕೆ. ಮೂರ್ತಿ ಮತ್ತು ಪ್ಯಾಸಾ
ಎಲ್ಲಕ್ಕಿಂತ ಮುಖ್ಯ ಆಕರ್ಷಣೆಯೆಂದರೆ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡದ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ಕನ್ನಡದವರೇ ಆದ ನಟ ಗುರುದತ್ ಅಭಿನಯದ ‘ಪ್ಯಾಸಾ’, ‘ಕಾಗಝ್ ಕಾ ಫೂಲ್’, ‘ಸಾಹೇಬ್, ಬೀಬಿ ಔರ್ ಗುಲಾಮ್’ ಮುಂತಾದ ಚಿತ್ರಗಳ ಪ್ರದರ್ಶನವಿದೆ. ಇದು ವಿ.ಕೆ. ಮೂರ್ತಿ ಅವರ ಜನ್ಮ ಶತಾಬ್ದಿ ವರ್ಷ. ಹಾಗಾಗಿ ಈ ಆಚರಣೆ. ಬಿಸಿಲ ಕೋಲು ಮೂಲಕ ಚಲನಚಿತ್ರ ಛಾಯಾಗ್ರಹಣದ ಹೊಸ ಆಯಾಮಗಳನ್ನು ಪರಿಚಯಿಸಿದ ವಿ.ಕೆ. ಮೂರ್ತಿ ಅವರ ಛಾಯಾ ಚಾತುರ್ಯಗಳನ್ನು ಕುರಿತು ಅವರ ಶಿಷ್ಯರಾದ ಗೋವಿಂದ್ ನಿಹಾಲಾನಿ ಮಾಸ್ಟರ್ ಕ್ಲಾಸ್ ನಡೆಸಲಿದ್ದಾರೆ. ಇದೇ ಮಾದರಿಯಲ್ಲಿ, ಇರಾನ್ ದೇಶದ ಖ್ಯಾತ ನಿರ್ದೇಶಕ ಜಾಫರ್ ಫನಾಹಿ ಅವರ ಪುತ್ರ ಅವರಷ್ಟೇ ಖ್ಯಾತರಾದ ಪನಾ ಫನಾಹಿ ಚಿತ್ರಕಥೆಯ ಬಗ್ಗೆ, ಚಿತ್ರನಿರ್ಮಾಣದ ಬಗ್ಗೆ ತಮ್ಮ ಆನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಚಿತ್ರಗಳ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್, ಶ್ರೀಲಂಕಾದ ಚಲನಚಿತ್ರ ನಿರ್ದೇಶಕ ವಿಮುಕ್ತಿ ಜಯಸುಂದರ್ ತಮ್ಮ ಚಿತ್ರ ನಿರ್ಮಾಣದ ಅನುಭವಗಳನ್ನು ಸಿನೆಮಾಸಕ್ತ ವರ್ಗದೊಂದಿಗೆ ಹಂಚಿಕೊಳ್ಳಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಪ್ರಮುಖ ಆಕರ್ಷಣೆಯೆಂದರೆ; ‘ಕೆಜಿಎಫ್’, ‘ಕಾಂತಾರ’ ಚಿತ್ರಗಳ ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ‘ಕಾಂತಾರ’ದ ರೂವಾರಿ ರಿಷಭ್ ಶೆಟ್ಟಿ ಸಂವಾದ ನಡೆಸಲಿದ್ದಾರೆ.

ಪ್ಯಾಸಾ

ಒಟ್ಟಿನಲ್ಲಿ ಎಲ್ಲವೂ ಸರಿಯಾದರೆ, ಮಾರ್ಚ್ 23ರಿಂದ ಬೆಂಗಳೂರಿನಲ್ಲಿ ಸಿನೆಮಾ ಹಬ್ಬದ ವಾತಾವರಣ. ಓರಾಯನ್ ಮಾಲ್ ಚಿತ್ರ ಮಂದಿಯ ಚಿತ್ರಸಂತೆಯಾಗಲಿದೆ. ಮೆಟ್ರೋದಲ್ಲಿ ವಿಶ್ವ ಸಿನೆಮಾದ ಜನ ತಮ್ಮ ಪ್ರತಿನಿಧಿ ಕಾರ್ಡ್ ತಗಲಿಸಿಕೊಂಡು ಉಳಿದವರಿಗೆ ಕಾಣಸಿಗುತ್ತಾರೆ. ಓರಾಯನ್ ಮಾಲ್‌ನಲ್ಲಿ ತಮ್ಮ ಇಷ್ಟದ ಚಿತ್ರಗಳನ್ನು ಅರಸುತ್ತಾ, ಒಂದು ತೆರೆಯಿಂದ, ಇನ್ನೊಂದು ತೆರೆಗೆ ಓಡುತ್ತಿರುವ, ಸರತಿಯಲ್ಲಿ ಕಾಯುತ್ತಿರುವವರ ಚಿತ್ರ ನೋಡಲಾದರೂ ಒಮ್ಮೆ ಜನಸಾಮಾನ್ಯರು ಓರಾಯನ್ ಮಾಲ್‌ಗೆ ತೆರಳಿದರೆ, ಅಂಥವರು ಚಿತ್ರ ಸಂತೆಯ ವೀಕ್ಷಣೆ ಮಾಡಬಹುದು.

Similar News

ಜಗದಗಲ
ಜಗ ದಗಲ