ಆರೆಸ್ಸೆಸ್-ತಾಲಿಬಾನ್ ಹೋಲಿಕೆ ಪ್ರಕರಣ: ಜಾವೇದ್ ಅಖ್ತರ್ ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

Update: 2023-03-21 18:34 GMT

ಹೊಸದಿಲ್ಲಿ, ಮಾ. 21: ಇತ್ತೀಚೆಗೆ ಆರೆಸ್ಸೆಸ್ ಅನ್ನು ತಾಲಿಬಾನ್‌ನೊಂದಿಗೆ ಹೋಲಿಸಿ ಹೇಳಿಕೆ ನೀಡಿದ ಪ್ರಕರಣದಲ್ಲಿ ತನ್ನ ವಿರುದ್ಧ ಮ್ಯಾಜಿಸ್ಟ್ರೇಟ್ ಜಾರಿಗೊಳಿಸಿದ ಸಮನ್ಸ್ ಅನ್ನು ಪ್ರಶ್ನಿಸಿ ಗೀತರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ ಅರ್ಜಿಯನ್ನು ಮುಂಬೈಯ ಸೆಷನ್ಸ್ ನ್ಯಾಯಲಯ ತಿರಸ್ಕರಿಸಿದೆ. 

ಮುಲುಂದ್‌ನ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನೀಡಿದ ಸಮನ್ಸ್ ಕಾನೂನು ಬದ್ಧವಾಗಿದೆ ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪ್ರೀತಿ ಕುಮಾರ್ ಗೋಲೆ ತನ್ನ ಆದೇಶದಲ್ಲಿ ಅಭಿಪ್ರಾಯಿಸಿದ್ದಾರೆ.

ಮುಂಬೈ ಮೂಲದ ನ್ಯಾಯವಾದಿ ಸಂತೋಷ್ ದುಬೆ ಅವರು ಜಾವೇದ್ ಅಖ್ತರ್ ವಿರುದ್ಧ ಮುಲುಂದ್‌ನ ಉಪನಗರ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲದ ಮುಂದೆ 2021 ಅಕ್ಟೋಬರ್‌ನಲ್ಲಿ ವಿವಿಧ ಸೆಕ್ಷನ್ ಅಡಿಯಲ್ಲಿ ದೂರು ಸಲ್ಲಿಸಿದ್ದರು. ವಾದಿ-ಪ್ರತಿವಾದಿಗಳ ವಾದವನ್ನು ಆಲಿಸಿ ಮ್ಯಾಜಿಸ್ಟ್ರೇಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾವೇದ್ ಅಖ್ತರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.

78ರ ಹರೆಯದ ಜಾವೇದ್ ಅಖ್ತರ್ ತನ್ನ ವಕೀಲರ ಮೂಲಕ ಸಮನ್ಸ್ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
‘‘ಮುಲುಂದ್ ನ್ಯಾಯಾಲಯದ ಆದೇಶದ ವಿರುದ್ಧ ಜಾವೇದ್ ಅಖ್ತರ್ ಸಲ್ಲಿಸಿದ ಪರಿಷ್ಕರಣಾ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತು’’ ಎಂದು ದುಬೆ ಹೇಳಿದ್ದಾರೆ.

ಆದುದರಿಂದ ಅಖ್ತರ್ ಅವರು ಮಾರ್ಚ್ 31ರಂದು ಮುಲುಂದ್ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Similar News