ಗಾಯಾಳು ಪುರುಷೋತ್ತಮ ಪೂಜಾರಿಗೆ ಸರಕಾರ ನೆರವು ನೀಡಿಲ್ಲ: ಗುರುಬೆಳದಿಂಗಳು ಫೌಂಡೇಶನ್‌ನ ಅಧ್ಯಕ್ಷ ಪದ್ಮರಾಜ್ ಆರ್

​ಕುಕ್ಕರ್ ಸ್ಫೋಟ ಪ್ರಕರಣ

Update: 2023-03-22 13:02 GMT

ಮಂಗಳೂರು: ಕಳೆದ ವರ್ಷದ ನವೆಂಬರ್‌ನಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟ ಪ್ರಕರಣದ ಗಾಯಾಳು ಪುರುಷೋತ್ತಮ ಪೂಜಾರಿಗೆ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಆಸ್ಪತ್ರೆಯ ವೆಚ್ಚವನ್ನೂ ಕೂಡ ಸರಕಾರ ಭರಿಸಿಲ್ಲ ಎಂದು ಗುರುಬೆಳದಿಂಗಳು ಫೌಂಡೇಶನ್‌ನ ಅಧ್ಯಕ್ಷ ಪದ್ಮರಾಜ್ ಆರ್. ಹೇಳಿದ್ದಾರೆ.

ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾದ ಮನೆಯನ್ನು ಇಂದು ಪುರುಷೋತ್ತಮ ಪೂಜಾರಿಗೆ ಹಸ್ತಾಂತರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಘಟನೆ ನಡೆದಾಗ ಸಚಿವರು, ಶಾಸಕರು, ಜಿಲ್ಲಾಧಿಕಾರಿಯು ನೆರವಿನ ಭರವಸೆ ನೀಡಿದ್ದರು. ಆದರೆ ಕೊಟ್ಟ ಭರವಸೆಯನ್ನು ಅವರು ಯಾರೂ ಈಡೇರಿಸಿಲ್ಲ. ಹಾಗಾಗಿ ನಾವು ಆಗಲೇ ನೀಡಿದ ಆಶ್ವಾಸನೆಯಂತೆ ಮನೆಯನ್ನು ನವೀಕರಿಸಿ ಕೊಟ್ಟಿದ್ದೇವೆ ಎಂದರು.

ಪುರುಷೋತ್ತಮ ಪೂಜಾರಿಯ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಗೃಹ ಸಚಿವರು ಅಂದು ಹೇಳಿಕೆ ನೀಡಿದ್ದರು. ಆದರೆ ಸರಕಾರ ಇನ್ನೂ ಪರಿಹಾರ ನೀಡಿಲ್ಲ. ಚಿಕಿತ್ಸೆಯ ವೆಚ್ಚವನ್ನೂ ಭರಿಸಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯು ಪುರುಷೋತ್ತಮ ಪೂಜಾರಿಯ ಮಗಳನ್ನು ಕರೆಸಿ 10 ಲಕ್ಷ ರೂ.ವರೆಗಿನ ಇಎಸ್‌ಐ ಸೌಲಭ್ಯ ಪಡೆಯುವ ಅವಕಾಶವಿದೆ. ಚಿಕಿತ್ಸೆಯ ವೆಚ್ಚ 10 ಲಕ್ಷ ರೂ. ದಾಟಿದರೆ ಬಾಕಿ ಹಣವನ್ನು ಭರಿಸುವುದಾಗಿ ಹೇಳಿರುವುದು ಗುಟ್ಟಾಗಿ ಉಳಿದಿಲ್ಲ. ಒಂದೆಡೆ ಪರಿಹಾರ ನೀಡುವೆವು, ಚಿಕಿತ್ಸೆಯ ವೆಚ್ಚ ಭರಿಸುವೆವು ಎನ್ನುವುದು ಮತ್ತು ಇನ್ನೊಂದೆಡೆ ಇಎಸ್‌ಐ ಸೌಲಭ್ಯವನ್ನು ಬಳಸಿಕೊಳ್ಳಿ ಎನ್ನುತ್ತಾರೆ. ಇಂತಹ ಗೊಂದಲಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಪದ್ಮರಾಜ್ ಆರ್. ಹೇಳಿದರು.

ಶಾಸಕರು ರಿಕ್ಷಾ ತೆಗೆಸಿಕೊಟ್ಟಿದ್ದಾರೆ. ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ವೈಯಕ್ತಿಕ ಪರಿಹಾರ ನೀಡಿದ್ದಾರೆ. ಅದು ಬಿಟ್ಟರೆ  ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಪರಿಹಾರ ಕಲ್ಪಿಸಬೇಕು ಎಂದು ಪದ್ಮರಾಜ್ ಆರ್. ನುಡಿದರು.

ಗಾಯಾಳು ಪುರುಷೊತ್ತಮ ಪೂಜಾರಿ ಮಾತನಾಡಿ ‘ಘಟನೆ ನಡೆದ ಬಳಿಕ ನಾನು ತುಂಬಾ ಅಧೀರನಾಗಿದ್ದೆ. ಚಿಕಿತ್ಸೆಯ ವೆಚ್ಚ, ಮನೆಯ ದುರಸ್ತಿ, ಮಗಳ ಮದುವೆ ಇತ್ಯಾದಿಯ ಖರ್ಚು ಭರಿಸಬೇಕಿತ್ತು. ಈ ಸಂದರ್ಭ ಗುರುಬೆಳದಿಂಗಳು ಫೌಂಡೇಶನ್‌ನ ಅಧ್ಯಕ್ಷ ಪದ್ಮರಾಜ್ ಮತ್ತವರ ತಂಡದ ಸದಸ್ಯರು ತುಂಬಾ ಸಹಕಾರ ನೀಡಿದ್ದಾರೆ. ಈಗಾಗಲೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚ 8 ಲಕ್ಷ ರೂ. ಆಗಿದೆ. ಇನ್ನೂ 2 ಲಕ್ಷ ರೂ. ಕೊಡಲು ಬಾಕಿಯಿದೆ. ಮಗಳ ಇಎಸ್‌ಐ ಸೌಲಭ್ಯದಿಂದ ಚಿಕಿತ್ಸೆ ಪಡೆದುಕೊಂಡಿದ್ದೇನೆ.  ಫಿಸಿಯೋಥೆರಪಿಗೂ ತುಂಬಾ ಖರ್ಚು ಬರುತ್ತಿದೆ ಎಂದರು.

Similar News