ಅಸಮ್ಮತಿಯು ದ್ವೇಷ ಮತ್ತು ಹಿಂಸೆಗೆ ಕಾರಣವಾಗಬಾರದು: ಸಿಜೆಐ ಚಂದ್ರಚೂಡ್

Update: 2023-03-23 08:59 GMT

ಹೊಸದಿಲ್ಲಿ: ವೈವಿಧ್ಯಮಯ ದೃಷ್ಟಿಕೋನಗಳಿಗೆ ಗೌರವ ನೀಡಬೇಕು ಎಂದು ಬುಧವಾರ ಒತ್ತಿ ಹೇಳಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ (CJI DY Chandrachud), "ಅಸಮ್ಮತಿಯು (Disagreement) ದ್ವೇಷಕ್ಕೆ ಕಾರಣವಾಗಬಾರದು ಮತ್ತು ದ್ವೇಷವು ಹಿಂಸೆಗೆ ರೂಪಾಂತರಗೊಳ್ಳಲು ಅನುಮತಿ ನೀಡಬಾರದು" ಎಂದು ಕಿವಿ ಮಾತು ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.

ಹೊಸ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ಪ್ರಧಾನ ಮಾಡುವ ರಮಾನಾಥ ಗೋಯೆಂಕಾ ಪ್ರಶಸ್ತಿಯ 16ನೇ ಆವೃತ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, "ನಮ್ಮ ದೇಶ ಹಾಗೂ ಜಗತ್ತಿನಾದ್ಯಂತ ಹಲವಾರು ಪತ್ರಕರ್ತರು ಕಠಿಣ ಮತ್ತು ಅನ್ಯೋನ್ಯವಿಲ್ಲದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪ್ರತಿಕೂಲ ಹಾಗೂ ವಿರೋಧಿ ಪರಿಸ್ಥಿತಿಯನ್ನು ದಣಿವರಿಯದೆ ಎದುರಿಸುತ್ತಿದ್ದಾರೆ. ಈ ಗುಣವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬುದು ಮುಖ್ಯವಾಗಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಪ್ರಜೆಗಳಾಗಿ ನಾವು ಪತ್ರಕರ್ತರು ಅಳವಡಿಸಿಕೊಂಡಿರುವ ಅಥವಾ ತಲುಪಿರುವ ನಿರ್ಣಯವನ್ನು ಒಪ್ಪದೇ ಇರಬಹುದು. ನಾನೂ ಕೂಡಾ ಹಲವಾರು ಪತ್ರಕರ್ತರೊಂದಿಗೆ ಅಸಮ್ಮತಿ ಹೊಂದಿದ್ದೇನೆ. ಇಷ್ಟಕ್ಕೂ ನಮ್ಮಲ್ಲಿ ಯಾರು ಇತರೆಲ್ಲರ ಮಾತುಗಳನ್ನು ಒಪ್ಪುತ್ತೇವೆ? ಆದರೆ, ಅಸಮ್ಮತಿಯು ದ್ವೇಷಕ್ಕೆ ದಾರಿಯಾಗಬಾರದು ಮತ್ತು ದ್ವೇಷವು ಹಿಂಸೆಯಾಗಿ ರೂಪಾಂತರಗೊಳ್ಳಲು ಅವಕಾಶ ನೀಡಬಾರದು" ಎಂದು ಅವರು ಕಿವಿ ಮಾತು ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಮುಕ್ತ ಪತ್ರಿಕೋದ್ಯಮದ ಅವಶ್ಯಕತೆಯನ್ನು ಎತ್ತಿ ಹಿಡಿದ ಅವರು, "ಸರ್ಕಾರದ ಜನನಕ್ಕೆ ಮಾಧ್ಯಮ ನಾಲ್ಕನೆ ಸ್ತಂಭವಾಗಿದ್ದು, ಹೀಗಾಗಿ ಅದು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನೊಡ್ಡುವ ಸಾಂಸ್ಥಿಕ ಪತ್ರಿಕೋದ್ಯಮದ ಬೆಳವಣಿಗೆಯನ್ನು ಕಾರ್ಯನಿರ್ವಾಹಕ ಹಾಗೂ ಆರೋಗ್ಯಕರ ಪ್ರಜಾಪ್ರಭುತ್ವವು ಪ್ರೋತ್ಸಾಹಿಸಬೇಕು. ಅಥವಾ ಸಾಮಾನ್ಯವಾಗಿ ತಿಳಿದಿರುವಂತೆ, ಪ್ರಭುತ್ವಕ್ಕೆ ಸತ್ಯ ಹೇಳಬೇಕು. ಒಂದು ದೇಶ ಪ್ರಜಾಸತ್ತಾತ್ಮಕವಾಗಿ ಉಳಿಯಬೇಕಿದ್ದರೆ ಪತ್ರಿಕೋದ್ಯಮವು ಸ್ವತಂತ್ರವಾಗಿ ಉಳಿಯಲೇಬೇಕು" ಎಂದು ಪ್ರತಿಪಾದಿಸಿದ್ದಾರೆ.

ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಸಂಸದರಾದ ರವಿ ಶಂಕರ್ ಪ್ರಸಾದ್, ಸಂಜಯ್ ಜೈಸ್ವಾಲ್, ಮನೋಜ್ ತಿವಾರಿ, ಅನಿಲ್ ಬಲೂನಿ, ಟಿಎಂಸಿ ನಾಯಕ ಡೆರೆಕ್ ಓ'ಬ್ರಿಯೆನ್, ಆಪ್ ಸಂಸದ ಸಂಜಯ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಕಪಿಲ್ ಸಿಬಲ್, ಅರುಣ್ ಶೌರಿ, ಮನೀಶ್ ತಿವಾರಿ, ಕೆ.ಜೆ.ಅಲ್ಫೋನ್ಸ್, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ನಸೀಂ ಝೈದಿ, ಸುನೀಲ್ ಅರೋರಾ, ಎಸ್.ವೈ.ಖುರೇಷಿ, ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ದೀಪಕ್ ಗುಪ್ತಾ, ದಿಲ್ಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ.ಶಾ, ಜಿ-20 ಶೆರ್ಪಾ ಅಮಿತಾಭ್ ಕಾಂತಾ, ಸಿಪಿಐ ನಾಯಕ ಡಿ.ರಾಜಾ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ದಯವಿಟ್ಟು ನೀವು ಈಗಲಾದರೂ ಕೇಳಿಸಿಕೊಳ್ಳುತ್ತೀರಾ?: ಡೆತ್ ನೋಟ್ ನಲ್ಲಿ 17 ವರ್ಷದ ಬಾಲಕಿಯ ಮನವಿ

Similar News