ಕೋವಿಡ್‌ ವಿಚಾರದಲ್ಲಿ ಮುಸ್ಲಿಮರನ್ನು ಗುರಿಪಡಿಸಿದ್ದಕ್ಕೆ ವಿಜಯ ಕರ್ನಾಟಕ ಪತ್ರಿಕೆಗೆ ಪ್ರೆಸ್‌ ಕೌನ್ಸಿಲ್‌ ಛೀಮಾರಿ

Update: 2023-03-23 18:29 GMT

ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಮುಸ್ಲಿಮ್‌ ಸಮುದಾಯವನ್ನು ಗುರಿಯಾಗಿಸಿ ಮಾಡಿದ್ದ ವರದಿಗಾಗಿ ಇಂದು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಕನ್ನಡ ಪತ್ರಿಕೆ ವಿಜಯ ಕರ್ನಾಟಕಕ್ಕೆ ಛೀಮಾರಿ ಹಾಕಿದೆ ಎಂದು newsclick.in ವರದಿ ಮಾಡಿದೆ. 

ಪತ್ರಿಕೆಯು ಮಾರ್ಚ್‌ 28, 2020 ರಂದು ''ಸತ್ತವರೆಲ್ಲ ಒಂದೇ ಸಮುದಾಯದವರು. ಈಗಲೂ ಪ್ರಾರ್ಥನೆ ಹೆಸರಲ್ಲಿ ಗುಂಪು ಸೇರುವುದೇಕೆ?'' ಎಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಪ್ರಕಟಿಸಿತ್ತು. ಲೇಖನವು ಪತ್ರಿಕೋದ್ಯಮ ನಡವಳಿಕೆಯ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ದೂರುದಾರರು ವಾದಿಸಿದರು. ಕೊರೋನಾ ಹರಡುವಿಕೆಗೆ ಮುಸ್ಲಿಮರು ಕಾರಣವಲ್ಲ ಎಂದು ಪತ್ರಿಕೆ ಸ್ಪಷ್ಟೀಕರಣ ನೀಡಬೇಕು ಮತ್ತು ಕ್ಷಮೆ ಯಾಚಿಸಬೇಕು ಎಂದೂ ಅವರು ಆಗ್ರಹಿಸಿದರು. 

ಬೆಂಗಳೂರು ಮೂಲದ ʼದ್ವೇಷ ಭಾಷಣ ವಿರುದ್ಧ ಅಭಿಯಾನʼ ಎಂಬ ಸಂಘಟನೆಯ ಕಾರ್ಯಕರ್ತರೋರ್ವರು ಈ ಕುರಿತು ದೂರು ನೀಡಿದ್ದರು. ಈ ಹಿಂದೆ ಟೈಮ್ಸ್ ನೌ, ನ್ಯೂಸ್ 18 ಕನ್ನಡ, ಸುವರ್ಣ ನ್ಯೂಸ್ ಮತ್ತು ಸ್ಟಾರ್ ಆಫ್ ಮೈಸೂರು ವಿರುದ್ಧ ಈ ಹಿಂದೆ ದೂರು ನೀಡಲಾಗಿತ್ತು. ಎಲ್ಲಾ ನಾಲ್ಕು ಪ್ರಕರಣಗಳಲ್ಲಿ, ಅವರು ಯಶಸ್ವಿಯಾಗಿ ವಾದಿಸಿದರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿದ್ದರು. ವಿಜಯ ಕರ್ನಾಟಕ ಎರಡು ವಿಭಿನ್ನ ಸಂದರ್ಭಗಳಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI) ನ ಸಮನ್ಸ್‌ಗೆ ಹಾಜರಾಗಲು ವಿಫಲವಾಯಿತು, ಅದರ ನಂತರ PCI ಸಂಪಾದಕರ ವಿರುದ್ಧ ಜಾಮೀನು ಸಹಿತ ವಾರಂಟ್ ಹೊರಡಿಸಿತ್ತು.

ಪತ್ರಿಕೆ ನೀಡಿದ ಸಮರ್ಥನೆಯಲ್ಲಿ, ಅವರು ಯಾವುದೇ ನಿರ್ದಿಷ್ಟ ಸಮುದಾಯದ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಪತ್ರಿಕೆಯು ಕೇವಲ ಸಮುದಾಯಕ್ಕೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ವಾದಿಸಿತು. PCI ತನಿಖಾ ಸಮಿತಿಯು ಈ ವಾದವನ್ನು ತಳ್ಳಿಹಾಕಿದ್ದು, "ಮಕ್ಕಾಕ್ಕೆ ಭೇಟಿ ನೀಡಿದ ವ್ಯಕ್ತಿಗಳು ನಂತರ ಕೊರೋನಾದಿಂದ ಸಾವನ್ನಪ್ಪಿದ್ದಾರೆಂದು ಹೇಳಲಾದ ಉಲ್ಲೇಖವಿದೆ. ಮುಚ್ಚಿದ ಬಾಗಿಲುಗಳ ಹಿಂದೆ ನಮಾಝ್ ಮಾಡುವ ಜನರ ಉಲ್ಲೇಖವಿದೆ. ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಕರ್ಫ್ಯೂ ಅನ್ನು ಗೌರವಿಸಿದ್ದಾರೆ ಎಂದು ಹೇಳಲಾಗಿದೆ ಎಂದು ತಿಳಿಸಿದರು.

ಮಕ್ಕಾ ಮತ್ತು ನಮಾಝ್ ನ ಉಲ್ಲೇಖವು ಲೇಖಕರು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂಬುವುದನ್ನು ಸೂಚಿಸುತ್ತದೆ ಎಂಬುವುದನ್ನು ಪ್ರೆಸ್‌ ಕೌನ್ಸಿಲ್‌ ಗಮನಿಸಿತ್ತು.

"ಸಾಂಕ್ರಾಮಿಕ ಸಮಯದಲ್ಲಿ ವಿಜಯ ಕರ್ನಾಟಕವು ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಿದೆ ಮತ್ತು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದೆ ಹಾಗೂ ಅದರ ನಡವಳಿಕೆಯು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪತ್ರಿಕೋದ್ಯಮ ನಡವಳಿಕೆಯ ಮಾನದಂಡಗಳನ್ನು ಉಲ್ಲಂಘಿಸುತ್ತದೆ" ಎಂದು ಸಮಿತಿಯು ತೀರ್ಮಾನಿಸಿದೆ ಎಂದು newsclick ತನ್ನ ವರದಿಯಲ್ಲಿ ತಿಳಿಸಿದೆ.

ದ್ವೇಷದ ಭಾಷಣದ ವಿರುದ್ಧ ಅಭಿಯಾನವು ಈ ಹಿಂದೆ ನ್ಯೂಸ್ 18 ಕನ್ನಡ, ಟೈಮ್ಸ್ ನೌ, ಸುವರ್ಣ ನ್ಯೂಸ್ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ವಿರುದ್ಧ ತಮ್ಮ ಪ್ರಸಾರದಲ್ಲಿ ತಬ್ಲೀಘಿ ಜಮಾತ್‌ನ ಚಿತ್ರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿತ್ತು.

1,00,000 ರೂ. ದಂಡವನ್ನು ಪಾವತಿಸಲು ಮತ್ತು ಪ್ರಸಾರದಲ್ಲಿ ಕ್ಷಮೆಯಾಚಿಸಲು NBSA ನ್ಯೂಸ್ 18 ಕನ್ನಡಕ್ಕೆ ನಿರ್ದೇಶಿಸಿತ್ತು. 50 ಸಾವಿರ ದಂಡ ಕಟ್ಟುವಂತೆ ಸುವರ್ಣ ನ್ಯೂಸ್ ಗೆ ಸೂಚಿಸಲಾಗಿತ್ತು. ಟೈಮ್ಸ್ ನೌಗೆ ಎನ್‌ಬಿಎಸ್‌ಎಯಿಂದ ಛೀಮಾರಿ ಹಾಕಲಾಗಿತ್ತು.

ಡಿಸೆಂಬರ್ 16, 2022 ರಂದು, PCI ಮುಸ್ಲಿಮರ ಕುರಿತಾದ ಸಂಪಾದಕೀಯಕ್ಕಾಗಿ ಸ್ಟಾರ್ ಆಫ್ ಮೈಸೂರು ಪತ್ರಿಕೆಗೆ ಛೀಮಾರಿ ಹಾಕಿತ್ತು.

Similar News