ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಕಾಂಗ್ರೆಸ್ ನಾಯಕಿ

Update: 2023-03-24 04:58 GMT

ಹೊಸದಿಲ್ಲಿ: ಸಂಸತ್ ಅಧಿವೇಶನದ ವೇಳೆ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ’ಶೂರ್ಪನಖಿ’ ಎಂದು ಸಂಬೋಧಿಸಿದ್ದರು ಎನ್ನಲಾದ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪ್ರಕಟಿಸಿದ್ದಾರೆ.

"ನ್ಯಾಯಾಲಯಗಳು ಎಷ್ಟು ತ್ವರಿತವಾಗಿ ವಿಚಾರಣೆ ನಡೆಸುತ್ತವೆ ಎಂದು ನೋಡೋಣ" ಎಂದು ಕೇಂದ್ರದ ಮಾಜಿ ಸಚಿವೆಯೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.

ರಾಮಾಯಣ ಧಾರಾವಾಹಿ ಪ್ರಸಾರವಾಗುತ್ತಿದ್ದ ಕೆಲ ದಿನಗಳ ಬಳಿಕ ರೇಣುಕಾಚೌಧರಿ ಮಾತು ಮುಂದುವರಿಸಲು ಅವಕಾಶ ನೀಡುವಂತೆ ರಾಜ್ಯಸಭೆಯ ಅಧ್ಯಕ್ಷರಿಗೆ ನರೇಂದ್ರ ಮೋದಿ ಕೇಳಿಕೊಳ್ಳುತ್ತಿರುವ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಗುವುದು ಕೇಳಿಸುತ್ತಿದೆ.

"ಈ ವರ್ಗರಹಿತ ಆತ್ಮವೈಭವದ ವ್ಯಕ್ತಿ ನನ್ನನ್ನು ಸದನದಲ್ಲಿ ಶೂರ್ಪನಖಿ ಎಂದು ಕರೆದಿದ್ದಾರೆ" ಎಂದು 2019ರ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ಗಾಂಧಿಗೆ ಶಿಕ್ಷೆಯಾದ ಬಳಿಕ ಚೌಧರಿ ಟ್ವೀಟ್ ಮಾಡಿದ್ದಾರೆ. ಎಲ್ಲ ಕಳ್ಳರಿಗೆ ಮೋದಿ ಅಡ್ಡ ಹೆಸರು (ಸರ್‌ನೇಮ್) ಏಕೆ ಬರುತ್ತದೆ ಎಂದು ರಾಹುಲ್ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಹುಲ್‌ಗೆ ಶಿಕ್ಷೆ ವಿಧಿಸಲಾಗಿದೆ.

ಆದರೆ ನರೇಂದ್ರ ಮೋದಿಯವರು ಶೂರ್ಪನಖಿ ಎಂದು ಹೇಳಿಕೆ ನೀಡಿಲ್ಲ ಹಾಗೂ ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ಅವರು ನ್ಯಾಯಾಲಯದ ಮೊರೆ ಹೋಗುವಂತಿಲ್ಲ ಎಂದು ಸಾಮಾಜಿಕ ಜಾಲತಾಣಿಗರು ಕಾಂಗ್ರೆಸ್ ನಾಯಕಿಗೆ ನೆನಪಿಸಿದ್ದಾರೆ.

"ಭ್ರಷ್ಟಾಚಾದ ವಿರುದ್ಧದ ಹೋರಾಟಕ್ಕಾಗಿ ರಾಹುಲ್‌ಗಾಂಧಿ ಕ್ಷಮೆ ಯಾಚಿಸಿಲ್ಲ. ಫ್ಯಾಸಿಸಂ ವಿರುದ್ಧದ ಹೋರಾಟದ ಸಲುವಾಗಿ ಅವರು ಕ್ಷಮೆ ಯಾಚಿಸಿಲ್ಲ. ಸತ್ಯ ಹೇಳಿದ ಕಾರಣದಿಂದ ಅವರು ಕ್ಷಮೆ ಯಾಚಿಸಲು ಮುಂದಾಗಿಲ್ಲ" ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.

ಸೂರತ್ ನ್ಯಾಯಾಲಯದ ತೀರ್ಪಿನ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ವಿರೋಧ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ವಿರೋಧ ಪಕ್ಷಗಳ ಮುಖಂಡದ ಧ್ವನಿಯನ್ನು ಅಡಗಿಸಲು ಕಾನೂನು ಜಾರಿ ನಿರ್ದೇಶನಾಲಯ, ಸಿಬಿಐ ಎಫ್‌ಐಆರ್, ಮಾನಹಾನಿ ಪ್ರಕರಣಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.

Similar News