ಮಹಿಳೆಯ ಹಿಜಾಬ್ ಎಳೆದ ಘಟನೆ | ಬಿಹಾರ ಸಿಎಂ ನಿತೀಶ್ ಕುಮಾರ್ ಬೇಷರತ್ ಕ್ಷಮೆಯಾಚಿಸಬೇಕು: ನಟಿ ಝೈರಾ ವಸೀಂ
Photo source: X
ಪಾಟ್ನಾ: ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರ ಹಿಜಾಬ್ ಅನ್ನು ವೇದಿಕೆಯಲ್ಲೇ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿ ಮಾಜಿ ನಟಿ ಝೈರಾ ವಸೀಂ, ಮಹಿಳೆಗೆ CM ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ ಝೈರಾ ವಸೀಂ, “ಮಹಿಳೆಯ ಘನತೆ ಮತ್ತು ನಮ್ರತೆಯು ಆಟವಾಡುವ ಸಾಧನವಲ್ಲ. ಕನಿಷ್ಠ ಸಾರ್ವಜನಿಕ ವೇದಿಕೆಯಲ್ಲಿ ಈ ಬಗ್ಗೆ ಎಚ್ಚರ ವಹಿಸಬೇಕು. ಮುಸ್ಲಿಂ ಮಹಿಳೆಯಾಗಿ, ಇನ್ನೊಬ್ಬ ಮಹಿಳೆಯ ನಿಖಾಬ್ ಅನ್ನು ಅಸಡ್ಡೆಯ ನಗುವಿನೊಂದಿಗೆ ಆಕಸ್ಮಿಕವಾಗಿ ಎಳೆಯುವುದನ್ನು ನೋಡುವುದು ನನಗೆ ತೀವ್ರ ಆಕ್ರೋಶ ಉಂಟುಮಾಡಿದೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಅಧಿಕಾರವು ಮಿತಿಗಳನ್ನು ಮೀರಲು ಅನುಮತಿ ನೀಡುವುದಿಲ್ಲ. ನಿತೀಶ್ ಕುಮಾರ್ ಅವರು ಆ ಮಹಿಳೆಗೆ ಬೇಷರತ್ ಕ್ಷಮೆಯಾಚಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ಘಟನೆಯು ಪಾಟ್ನಾದಲ್ಲಿ ಮುಖ್ಯಮಂತ್ರಿ ಕಚೇರಿಯ ‘ಸಂವಾದ್’ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಭವಿಸಿದೆ. ಈ ವೇಳೆ 1,000ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿತ್ತು. ಮುಖದ ಮೇಲೆ ಹಿಜಾಬ್ ಧರಿಸಿ ವೇದಿಕೆಗೆ ಬಂದ ನೂತನವಾಗಿ ನೇಮಕಗೊಂಡ ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಅವರ ಸರದಿ ಬಂದಾಗ, ಮುಖ್ಯಮಂತ್ರಿ ನಿತೀಶ್ ಕುಮಾರ್, “ಇದು ಏನು?” ಎಂದು ಪ್ರಶ್ನಿಸಿ, ಕೆಳಕ್ಕೆ ಬಾಗಿ ಅವರ ಹಿಜಾಬ್ ಅನ್ನು ಎಳೆದಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗಲಿಬಿಲಿಗೊಂಡ ವೈದ್ಯೆಯನ್ನು ಅಲ್ಲಿದ್ದ ಅಧಿಕಾರಿಯೊಬ್ಬರು ವೇದಿಕೆಯಿಂದ ಪಕ್ಕಕ್ಕೆ ಕರೆದುಕೊಂಡು ಹೋಗಿರುವುದು ಹಾಗೂ ಮುಖ್ಯಮಂತ್ರಿ ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಮಧ್ಯಪ್ರವೇಶಿಸಲು ಪ್ರಯತ್ನಿಸಿರುವುದು ವೀಡಿಯೊ ದೃಶ್ಯಗಳಲ್ಲಿ ಕಾಣಿಸುತ್ತದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.
ಝೈರಾ ವಸೀಂ 2019ರಲ್ಲಿ ಬಿಡುಗಡೆಯಾದ ಶೋನಾಲಿ ಬೋಸ್ ನಿರ್ದೇಶನದ ‘ದಿ ಸ್ಕೈ ಈಸ್ ಪಿಂಕ್’ ಚಿತ್ರದ ನಂತರ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ತಮ್ಮ ವೃತ್ತಿ ವೈಯಕ್ತಿಕ ನಂಬಿಕೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಆಗಾಗ ಹೇಳಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಅವರು ವಿವಾಹವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೊಟೋ ಹಂಚಿಕೊಂಡಿದ್ದರು.