ಕೇಸುಗಳು ದಾಖಲಾಗುತ್ತಿದ್ದರೂ, ರ್ಯಾಲಿಗಳಲ್ಲಿ ಮುಸ್ಲಿಮರ ಹತ್ಯೆಗೆ ಕರೆ ನೀಡುವುದನ್ನು ಮುಂದುವರಿಸಿರುವ ರಾಜಾ ಸಿಂಗ್‌

Update: 2023-03-24 14:32 GMT

ಹೊಸದಿಲ್ಲಿ, ಮಾ.24: ಅಮಾನತುಗೊಂಡಿರುವ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು ಕಳೆದೊಂದು ತಿಂಗಳಿನಿಂದಲೂ ಮಹಾರಾಷ್ಟ್ರದಲ್ಲಿ ಹಲವಾರು ರ್ಯಾಲಿಗಳಲ್ಲಿ ಪಾಲ್ಗೊಂಡು ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ ಹಾಗೂ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಬಹಿಷ್ಕಾರಕ್ಕೆ ಬಹಿರಂಗ ಕರೆಗಳನ್ನು ನೀಡುತ್ತಿದ್ದಾರೆ. ಫೆ.19ರಂದು ಲಾತೂರಿನಲ್ಲಿ ಶಿವ ಜಯಂತಿ ಸಂಭ್ರಮಾಚರಣೆಯಲ್ಲಿ ಮತ್ತು ಜ.19ರಂದು ಮುಂಬೈನಲ್ಲಿ ಹಿಂದು ಜನ ಆಕ್ರೋಶ ಮೋರ್ಚಾದಲ್ಲಿ ಸಿಂಗ್ ಮಾಡಿದ್ದ ದ್ವೇಷ ಭಾಷಣಗಳನ್ನು altnews.in ಈಗಾಗಲೇ ದಾಖಲೀಕರಿಸಿದೆ.

ಮಹಾರಾಷ್ಟ್ರದಲ್ಲಿ ಬೆಂಕಿಯುಗುಳುವ ಭಾಷಣಗಳಿಗಾಗಿ ಸಿಂಗ್ ವಿರುದ್ಧ ಹಲವಾರು ಎಫ್ಐಆರ್ಗಳು ದಾಖಲಾಗಿವೆ. ತೀರ ಇತ್ತೀಚಿನ ಎಫ್ಐಆರ್ ಮಾ.19ರಂದು ದಾಖಲಾಗಿದ್ದು, ಔರಂಗಾಬಾದ್ನಲ್ಲಿ ಸಕಲ ಹಿಂದು ಏಕತ್ರೀಕರಣ ಸಮಿತಿಯು ಆಯೋಜಿಸಿದ್ದ ಹಿಂದು ಜನಗರ್ಜನಾ ರ್ಯಾಲಿಯಲ್ಲಿ ಸಿಂಗ್ ಮತ್ತು ಸುದರ್ಶನ ನ್ಯೂಸ್ನ ಮುಖ್ಯ ಸಂಪಾದಕ ಸುರೇಶ ಚಾವಂಕೆ ಅವರು ಕೋಮುದ್ವೇಷದ ಭಾಷಣಗಳನ್ನು ಮಾಡಿದ್ದರು. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕೆಲವರು ‘ಐ ಲವ್ ಔರಂಗಾಬಾದ್ ’ಎಂಬ ಬೃಹತ್ ನಾಮಫಲಕವನ್ನು ಒಡೆದುಹಾಕಿದ್ದರು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದರು. ಕೆಲವರು ನಿರಾಲಾ ಬಝಾರ್ನಲ್ಲಿಯ ಬ್ಯಾಂಕೊಂದಕ್ಕೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಹುಡಿ ಮಾಡಿದ್ದರು,ಬ್ಯಾನರ್ಗಳು ಮತ್ತು ಫ್ಲೆಕ್ಸ್ಗಳನ್ನು ಹರಿದುಹಾಕಿದ್ದರು.

ಮಾ.10ರಂದು ಅಹ್ಮದ್ನಗರದಲ್ಲಿ ಸಂಘಟನೆಯೊಂದು ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವಹೇಳನಕಾರಿ ಭಾಷಣವನ್ನು ಮಾಡಿದ್ದ ಆರೋಪದಲ್ಲಿ ಸ್ಥಳೀಯ ನಿವಾಸಿಯೋರ್ವರ ದೂರಿನ ಮೇರೆಗೆ ಅಲ್ಲಿಯ ಶ್ರೀರಾಮಪುರ ಸಿಟಿ ಪೊಲೀಸರು ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಜ.19ರಂದು ಹಳೆಯ ಹೇಳಿಕೆಯೊಂದಕ್ಕಾಗಿ ಸಿಆರ್ಪಿಸಿಯಡಿ ಪೊಲೀಸರು ಸಿಂಗ್ಗೆ ನೋಟಿಸ್ ಹೊರಡಿಸಿದ್ದರು. ಹಿಂದು ಜನ ಆಕ್ರೋಶ ಮೋರ್ಚಾದಲ್ಲಿ ಭಾಷಣದ ಬಳಿಕ ಜ.30ರಂದು ಅವರ ವಿರುದ್ಧ ಇನ್ನೊಂದು ನೋಟಿಸ್ ಹೊರಡಿಸಲಾಗಿತ್ತು. ಫೆ.2ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯೋರ್ವರು ಮುಂಬೈನಲ್ಲಿ ಫೆ.5ರಂದು ಹಮ್ಮಿಕೊಳ್ಳಲಾಗಿದ್ದ ಹಿಂದು ಜನ ಆಕ್ರೋಶ ಮೋರ್ಚಾದ ಕಾರ್ಯಕ್ರಮದ ವಿರುದ್ಧ ತುರ್ತು ವಿಚಾರಣೆಗೆ ಕೋರಿದ್ದರು. ಜ.29ರಂದು ನಗರದಲ್ಲಿ ನಡೆದಿದ್ದ ಇಂತಹುದೇ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಬಹಿಷ್ಕಾರಕ್ಕೆ ಕರೆಗಳನ್ನು ನೀಡಲಾಗಿತ್ತು ಎಂದು ಅವರು ವಾದಿಸಿದ್ದರು. ಆದರೂ ಫೆ.5ರ ಹಿಂದು ಜನ ಆಕ್ರೋಶ ರ್ಯಾಲಿಗೆ ಅನುಮತಿಸಿ ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು.

ಸಿಂಗ್ ಕಳೆದೊಂದು ತಿಂಗಳಲ್ಲಿ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಮಾಡಿರುವ ಎಲ್ಲ ಭಾಷಣಗಳು ಅವರ ಯು ಟ್ಯೂಬ್ ಚಾನೆಲ್ನಲ್ಲಿ ಲಭ್ಯವಿವೆ. ಈ ಎಲ್ಲ ಭಾಷಣಗಳಲ್ಲಿ ಅವರು ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳಿಂದ ವಿಚಲಿತಗೊಳ್ಳದ ಟಿ.ರಾಜಾ ಸಿಂಗ್ ತನ್ನ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ನಿಂದನೆಯನ್ನು ಮುಂದುವರಿಸಿದ್ದಾರೆ. ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ನಂತಹ ಪಿತೂರಿ ಸಿದ್ಧಾಂತಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ. ಬಲಪಂಥೀಯ ನಾಯಕರು ತಮ್ಮ ಭಾಷಣಗಳಲ್ಲಿ ಪದೇ ಪದೇ ಹೇಳುತ್ತಿರುವ ಸುಳ್ಳುಗಳನ್ನೂ ಸಿಂಗ್ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ತನ್ನ ಇತ್ತೀಚಿನ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಆರ್ಥಿಕ ದಿಗ್ಬಂಧನಕ್ಕೆ ಕರೆಗಳ ಜೊತೆಗೆ ಹಿಂದು ರಾಷ್ಟ್ರಕ್ಕಾಗಿ ತನ್ನ ಆಗ್ರಹವನ್ನು ಹೆಚ್ಚಿಸುತ್ತಲೇ ಇದ್ದಾರೆ.

Similar News