"ಕೇಂದ್ರದ ನಿರ್ಧಾರಗಳ ವಿರುದ್ಧ ಮಾತನಾಡದಂತೆ ಕಾನೂನು ಸಚಿವರಿಂದ ನಿವೃತ್ತ ನ್ಯಾಯಾಧೀಶರುಗಳಿಗೆ ಬೆದರಿಕೆ"

ತ್ರಿಪುರ ಬಾರ್‌ ಕೌನ್ಸಿಲ್ ಆರೋಪ

Update: 2023-03-24 16:55 GMT

ಅಗರ್ತಲಾ,ಮಾ.25: ನಿವೃತ್ತ ನ್ಯಾಯಾಧೀಶರುಗಳ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ನೀಡಿರುವ ಹೇಳಿಕೆಗಳನ್ನು ತ್ರಿಪುರಾ ಬಾರ್ ಕೌನ್ಸಿಲ್ ಗುರುವಾರ ಬಲವಾಗಿ ಖಂಡಿಸಿದ್ದು, ನ್ಯಾಯಾಂಗದಲ್ಲಿ ಹಸ್ತಕ್ಷೇಪ ನಡೆಸುವ ಕೇಂದ್ರದ ಪ್ರಯತ್ನ ಇದಾಗಿದೆಯೆಂದು ಆರೋಪಿಸಿದೆ.

ರಿಜಿಜು ಅವರು ಮಾರ್ಚ್ 18ರಂದು ನಡೆದ ಶೃಂಗಸಭೆಯೊಂದರಲ್ಲಿ ಮಾತನಾಡುತ್ತಾ, ಭಾರತ ವಿರೋಧಿ ಕೂಟದ ಭಾಗವಾಗಿರುವ ಕೆಲವು ನಿವೃತ್ತ ನ್ಯಾಯಾಧೀಶರು ಹಾಗೂ ಇತರ ಕೆಲವು ಕಾರ್ಯಕರ್ತರು. ಭಾರತದ ನ್ಯಾಯಾಂಗವು ಪ್ರತಿಪಕ್ಷದ ಪಾತ್ರವನ್ನು ವಹಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದರು.

ದೇಶದ ವಿರುದ್ಧ ಕಾರ್ಯಾಚರಿಸುವವರು, ಅದಕ್ಕೆ ಬೆಲೆ ತೆರಲಿದ್ದಾರೆಂದು ಕೇಂದ್ರ ಸಚಿವರು ಈ ಸಂದರ್ಭ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ. ತ್ರಿಪುರಾ ಬಾರ್ ಕೌನ್ಸಿಲ್ ಅಧ್ಯಕ್ಷ ಪುರುಷೋತ್ತಮ ರೇ ಬರ್ಮನ್ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಸರಕಾರದ ನಿರ್ಧಾರಗಳ ವಿರುದ್ಧ ಮಾತನಾಡದಂತೆ ಮಾಜಿ ನ್ಯಾಯಾಧೀಶರನ್ನು ನಿರ್ಬಂಧಿಸುವ ಮೂಲಕ ಕೇಂದ್ರ ಸರಕಾರವು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ‘‘ ಸರಕಾರದ ಎದುರು ತಲೆಬಾಗಲು ನಿರಾಕರಿಸುವ ನ್ಯಾಯಾಧೀಶರಿಗೆ ಒಡ್ಡಲಾದ ಬೆದರಿಕೆ ಇದಾಗಿದೆ .

ಭಾರತೀಯ ನ್ಯಾಯಾಂಗ ಸೇರಿದಂಎತೆ ಎಲ್ಲಾ ಪ್ರಜಾತಾಂತ್ರಿಕರ ಸಂಸ್ಥಾಪನೆಗಳನ್ನು ವಶಪಡಿಸಿಕೊಳ್ಳಲು ಕೇಂದ್ರ ಸರಕಾರವು ಯತ್ನಿಸುತ್ತಿದೆ. ಸುಪ್ರೀಂಕೋರ್ಟ್ ಹಾಗೂ ಸಮಗ್ರ ನ್ಯಾಯಾಂಗವು ತನ್ನ ಹೆಬ್ಬೆರಳಿನಡಿ ಇರಬೇಕೆಂದು ಕೇಂದ್ರ ಸರಕಾರ ಬಯಸುತ್ತಿದೆ. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ ಧನಕರ್ ಅವರು ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಇದು ಸುಸ್ಪಷ್ಟವಾಗಿದೆ’’ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತ್ರಿಪುರಾ ಹೈಕೋರ್ಟ್ಗೆ ಖಾಯಂ ಮುಖ್ಯ ನ್ಯಾಯಮೂರ್ತಿಯ ನೇಮಕ ಹಾಗೂ  ಖಾಲಿಬಿದ್ದಿರುವ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಹಾಗೂ ಕೊಲೆಜಿಯಂನ ಇತರ ಸದಸ್ಯರಿಗೆ ಪತ್ರ ಬರೆದಿರುವುದಾಗಿ ಪುರುಷೋತ್ತಮ ರೇ ತಿಳಿಸಿದ್ದಾರೆ.

Similar News