ಚಿಂತನ ಚಿಲುಮೆ CPR ವಿರುದ್ಧ ಕ್ರಮ ಭಾರತದಲ್ಲಿ ಸಂಶೋಧನೆಗೆ ಹಾನಿಯನ್ನುಂಟು ಮಾಡಲಿದೆ: ಅಂತಾರಾಷ್ಟ್ರೀಯ ವಿದ್ವಾಂಸರು
ಹೊಸದಿಲ್ಲಿ,ಮಾ.24: ಪ್ರಭಾವಿ ಚಿಂತನ ಚಿಲುಮೆ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (ಸಿಪಿಆರ್)ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪರವಾನಿಗೆಯನ್ನು ಅಮಾನತುಗೊಳಿಸುವ ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಅಂತರಾಷ್ಟ್ರೀಯ ಸಂಶೋಧಕರು ಮತ್ತು ಶಿಕ್ಷಣ ತಜ್ಞರ ಗುಂಪೊಂದು ಕೇಂದ್ರಕ್ಕೆ ಬರೆದಿರುವ ಬಹಿರಂಗ ಪತ್ರದಲ್ಲಿ ಆಗ್ರಹಿಸಿದೆ.
ಈ ಕ್ರಮವು ಪ್ರಮುಖ ಸಂಶೋಧನಾ ಸಂಸ್ಥೆಯನ್ನು ದುರ್ಬಲಗೊಳಿಸುವ ಮತ್ತು ಅದರ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುವ ಸ್ಪಷ್ಟವಾದ ಉದ್ದೇಶವನ್ನು ಹೊಂದಿದೆ. ಇದು ದೇಶದಲ್ಲಿ ಸಂಶೋಧನೆ ಮತ್ತು ಸ್ವತಂತ್ರ ತೀರ್ಪಿನ ಅನ್ವೇಷಣೆಯನ್ನು ದುರ್ಬಲಗೊಳಿಸುವ ಅಪಾಯಕಾರಿ ಪೂರ್ವನಿದರ್ಶನಕ್ಕೂ ನಾಂದಿ ಹಾಡಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಫೆ.27ರಂದು ಸಿಪಿಆರ್ನ ವಿದೇಶಿ ದೇಣಿಗೆ ಪರವಾನಿಗೆಯನ್ನು 180 ದಿನಗಳ ಅವಧಿಗೆ ಅಮಾನತುಗೊಳಿಸಿದೆ. ಅಮಾನತಿನಿಂದಾಗಿ ದಿಲ್ಲಿ ಮೂಲದ ಸಿಪಿಆರ್ ವಿದೇಶಗಳಿಂದ ಹೊಸ ದೇಣಿಗೆಗಳನ್ನು ಸ್ವೀಕರಿಸಲು ಅಥವಾ ಗೃಹ ಸಚಿವಾಲಯದ ಅನುಮತಿಯಿಲ್ಲದೆ ತನ್ನ ಬಳಿ ಪ್ರಸ್ತುತ ಇರುವ ವಿದೇಶಿ ವಿನಿಮಯವನ್ನು ಬಳಸಲು ಸಾಧ್ಯವಾಗುವುದಿಲ್ಲ.
ಸಿಪಿಆರ್ಗೆ ಬೆಂಬಲವನ್ನು ವ್ಯಕ್ತಪಡಿಸಿರುವವರಲ್ಲಿ ಬ್ರೌನ್ ವಿವಿಯ ಅಶುತೋಷ ವರ್ಷ್ನಿ,ಕೊಲಂಬಿಯಾ ವಿವಿಯ ಕರುಣಾ ಮಂಟೇನಾ ಮತ್ತು ಆಡಂ ಟೂಝ್,ಕಾರ್ನಿಜಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನ ಮಿಲನ್ ವೈಷ್ಣವ ಹಾಗು ಜಾನ್ ಹಾಪ್ಕಿನ್ಸ್ ವಿವಿಯ ರೀನಾ ಅಗರವಾಲ್ ಸೇರಿದ್ದಾರೆ.
ಸಿಪಿಆರ್ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಕೆಲವು ನಿಬಂಧನೆಗಳನ್ನು ಪಾಲಿಸಿಲ್ಲ ಎನ್ನುವುದಕ್ಕೆ ಪ್ರಾಥಮಿಕ ಸಾಕ್ಷಾಧಾರಗಳಿವೆ ಎಂದು ಸರಕಾರವು ಹೇಳಿತ್ತು. ಆದರೆ ತಾನು ಕಾಯ್ದೆಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಸಿಪಿಆರ್ ಸ್ಪಷ್ಟಪಡಿಸಿತ್ತು.