ರಾಹುಲ್ ಗಾಂಧಿ ಅವರ ಅನರ್ಹತೆ ದುರದೃಷ್ಟಕರ, ಪ್ರಜಾಪ್ರಭುತ್ವ ವಿರೋಧಿ: ವೈ.ಎಸ್. ಶರ್ಮಿಳಾ

Update: 2023-03-25 09:23 GMT

ಹೈದರಾಬಾದ್: "ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ದುರದೃಷ್ಟಕರ ಹಾಗೂ  ಪ್ರಜಾಸತ್ತಾತ್ಮಕ ವಿರೋಧಿ,  ಪಕ್ಷಪಾತಿ ಹಾಗೂ  ವಿಲಕ್ಷಣ ನಿರ್ಧಾರ'' ಎಂದು ವೈಎಸ್‌ಆರ್ ತೆಲಂಗಾಣ ಪಕ್ಷದ ನಾಯಕಿ ವೈಎಸ್ ಶರ್ಮಿಳಾ ಅವರು ಬಣ್ಣಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ  ಅವರು ಅನರ್ಹತೆಯನ್ನು ಕರಾಳ ದಿನ ಎಂದು ಕರೆದರು. ರಾಹುಲ್ ಅವರಿಗೆ ವಾದಗಳನ್ನು ಮಂಡಿಸಲು 30 ದಿನಗಳ ಕಾಲಾವಕಾಶವಿದ್ದರೂ, ಈ ಏಕಪಕ್ಷೀಯ ಮತ್ತು ಕ್ರೂರ ಹೆಜ್ಜೆಯನ್ನು ರಾಜಕೀಯ ಸೇಡು ತೀರಿಸಿಕೊಳ್ಳಲು  ಮಾತ್ರ  ಇಡಲಾಗಿದೆ ಎಂದು ಆಘಾತ ವ್ಯಕ್ತಪಡಿಸಿದರು.

“ಪ್ರಜಾಪ್ರಭುತ್ವದಲ್ಲಿ ಜನರ ಕಳವಳವನ್ನು ವ್ಯಕ್ತಪಡಿಸುವಲ್ಲಿ ಮತ್ತು ಆಡಳಿತ ಪಕ್ಷದ ದೌರ್ಜನ್ಯಗಳ ವಿರುದ್ಧ ಹೋರಾಡುವಲ್ಲಿ ವಿರೋಧ ಪಕ್ಷವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಸ್ವಾತಂತ್ರ್ಯ ಹಾಗೂ  ಅಭಿವ್ಯಕ್ತಿಯ ಹಕ್ಕು.  ಅಧಿಕಾರವು ಶಾಶ್ವತವಲ್ಲದ ಕಾರಣ ತಾವೂ ಅದೇ ಪರಿಸ್ಥಿತಿಗೆ ಸಿಲುಕುತ್ತಾರೆ ಎಂಬುದನ್ನು ಆಡಳಿತ ಪಕ್ಷಗಳು ಅರಿತುಕೊಳ್ಳಬೇಕು ”ಎಂದು ಶರ್ಮಿಳಾ ಹೇಳಿದರು.

“ಸಾಂವಿಧಾನಿಕ ಹಕ್ಕುಗಳು ಯಾವಾಗಲೂ ರಾಜಕೀಯ ಹಿತಾಸಕ್ತಿಗಳಿಗಿಂತ ಮಿಗಿಲು . ಬಿಜೆಪಿ ಇಂದು ದೇಶದ ಪ್ರಜಾಸತ್ತಾತ್ಮಕ ಚೇತನಕ್ಕೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಹೇಳಿದ ಅವರು, ಈ ನಿರಂಕುಶಾಧಿಕಾರದ ಕೃತ್ಯಗಳನ್ನು ಖಂಡಿಸುವುದು ಎಲ್ಲ ಪಕ್ಷಗಳ ಕರ್ತವ್ಯವಾಗಿದೆ ಎಂದು ಹೇಳಿದರು.

Similar News