ಬಿಜೆಪಿಯ ಆಡಳಿತದಲ್ಲಿ ಉತ್ತರ ಪ್ರದೇಶ ಚಿತ್ರಣ ಬದಲಾಗಿದೆ: ಮುಖ್ಯಮಂತ್ರಿ ಆದಿತ್ಯನಾಥ್

Update: 2023-03-25 09:11 GMT

ಲಕ್ನೊ: ಬಿಜೆಪಿಯ ಆರು ವರ್ಷದ ಆಡಳಿತದಲ್ಲಿ ಜನರ ದೃಷ್ಟಿಯಲ್ಲಿನ ಉತ್ತರ ಪ್ರದೇಶದ ಚಿತ್ರಣವು ಮಾಫಿಯಾ ಮತ್ತು ಗೂಂಡಾ ರಾಜ್ಯದಿಂದ  ಬದಲಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ ರಾಜ್ಯದ ಎಲ್ಲ ವಲಯಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಲಾಗಿದೆ ಎಂದು ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ ಎಂದು thehindu.com ವರದಿ ಮಾಡಿದೆ.

ತಮ್ಮ ಸರ್ಕಾರದ ಎರಡನೆ ಅವಧಿಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭವನ್ನುದ್ದೇಶಿಸಿ  ಆದಿತ್ಯನಾಥ್ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಹಾಗೂ ಬ್ರಜೇಶ್ ಪಾಠಕ್, ಉತ್ತರ ಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಆರು ವರ್ಷಗಳಲ್ಲಿನ ಸರ್ಕಾರದ ಸಾಧನೆಗಳನ್ನು ಎಲ್ಲ 403 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನ ಪ್ರತಿನಿಧಿಗಳು ಪ್ರದರ್ಶಿಸಲಿದ್ದಾರೆ ಎಂದು  ಆದಿತ್ಯನಾಥ್ ತಿಳಿಸಿದ್ದಾರೆ.

"ಇಂದು ಉತ್ತರ ಪ್ರದೇಶ ಹಬ್ಬಗಳಿಗೆ ಹೆಸರಾಗಿದೆಯೇ ಹೊರತು ಮಾಫಿಯಾಗಳಿಗಲ್ಲ" ಎಂದು ಅವರು ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಹೇಳಿದ್ದಾರೆ.

"ಈ ಹಿಂದೆ ಇಸ್ಪೀಟ್ ಕಾರ್ಡಿನಂತೆ ಬದಲಾಗುತ್ತಿದ್ದ ಅಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಇದೀಗ ತಮ್ಮ ಪೂರ್ಣಾವಧಿಯನ್ನು ಪೂರೈಸುತ್ತಿದ್ದಾರೆ. ಅವರು ಸಮಾಜದ ಎಲ್ಲ ವರ್ಗಗಳಿಗೂ ಸರ್ಕಾರದ ಯೋಜನೆಗಳ ಕೊಡುಗೆಯನ್ನು ಒದಗಿಸುತ್ತಿದ್ದಾರೆ" ಎಂದೂ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಇತಿಹಾಸದಲ್ಲಿಯೇ ಆರು ವರ್ಷಗಳ ಸುದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ಹೆಗ್ಗಳಿಕೆಗೆ  ಆದಿತ್ಯನಾಥ್ ಪಾತ್ರರಾಗಿದ್ದಾರೆ. ಶುಕ್ರವಾರ ಸಮಾರಂಭವೊಂದರಲ್ಲಿ ಭಾಗವಹಿಸಲು ವಾರಾಣಸಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥರ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Similar News