ಮಹಾತ್ಮ ಗಾಂಧಿ ಯಾವುದೇ ವಿಶ್ವವಿದ್ಯಾಲಯದ ಪದವಿ ಹೊಂದಿರಲಿಲ್ಲ ಎಂಬ ಸಿನ್ಹಾ ಹೇಳಿಕೆಯನ್ನು ಅಲ್ಲಗಳೆದ ತುಷಾರ್ ಗಾಂಧಿ

Update: 2023-03-25 09:47 GMT

ಹೊಸ ದಿಲ್ಲಿ: ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಯಾವುದೇ ವಿಶ್ವವಿದ್ಯಾಲಯದ ಪದವಿಯನ್ನು ಹೊಂದಿರಲಿಲ್ಲ ಎಂಬ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರ ಹೇಳಿಕೆಯನ್ನು ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅಲ್ಲಗಳೆದಿದ್ದಾರೆ ಎಂದು thehindu.com ವರದಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ತುಷಾರ್ ಗಾಂಧಿ, "ಮೋಹನ್ ದಾಸ್ ಕರಮ್‌ಚಂದ್ ಗಾಂಧಿ ಅವರು ಎರಡು ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಮೊದಲನೆಯದು ರಾಜಕೋಟ್‌ನ ಆಲ್ಫ್ರೆಡ್ ಪ್ರೌಢಶಾಲೆಯಲ್ಲಾದರೆ, ಎರಡನೆಯದು ಅದಕ್ಕೆ ಸಮನಾದ ಬ್ರಿಟಿಷ್ ಮೆಟ್ರಿಕ್ಯುಲೇಶನ್ ಅನ್ನು ಲಂಡನ್‌ನಲ್ಲಿ ಪೂರೈಸಿದ್ದರು. ನಂತರ ಲಂಡನ್ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟ ಇನ್ನರ್ ಟೆಂಪಲ್ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿದರು. ಇದೇ ಸಮಯದಲ್ಲಿ ಲ್ಯಾಟಿನ್ ಹಾಗೂ ಫ್ರೆಂಚ್ ಭಾಷೆಯಲ್ಲಿ ಎರಡು ಡಿಪ್ಲೊಮಾ ಪೂರೈಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಿಳಿವಳಿಕೆ ನೀಡಲು ಈ ಮಾಹಿತಿಯನ್ನು ಹಂಚಲಾಗಿದೆ" ಎಂದು ಹೇಳಿದ್ದಾರೆ.

ಗುರುವಾರ ಗ್ವಾಲಿಯರ್‌ನ ಐಟಿಎಂನಲ್ಲಿರುವ ಡಾ. ರಾಮಮನೋಹರ ಲೋಹಿಯಾ ಸ್ಮಾರಕದಲ್ಲಿ ಮುಖ್ಯ ಭಾಷಣಕಾರರಾಗಿ ಉಪನ್ಯಾಸ ನೀಡಿದ್ದ ಮನೋಜ್ ಸಿನ್ಹಾ, ಮಹಾತ್ಮ ಗಾಂಧಿಯವರ ವಿದ್ಯಾರ್ಹತೆ ಕುರಿತು ಮಾತನಾಡಿದ್ದರು.

"ಗಾಂಧೀಜಿಯವರು ಯಾವುದೇ ವಿಶ್ವವಿದ್ಯಾಲಯದ ಪದವಿ ಪಡೆದಿರಲಿಲ್ಲ ಎಂಬ ಸಂಗತಿ ನಿಮಗೆ ಗೊತ್ತೆ? ನಮ್ಮಲ್ಲಿ ಬಹುತೇಕರು ಮಹಾತ್ಮ ಗಾಂಧಿ ಕಾನೂನು ಪದವಿ ಹೊಂದಿದ್ದರು ಎಂದು ಭಾವಿಸಿದ್ದೇವೆ. ಇಲ್ಲ, ಅವರು ಹೊಂದಿರಲಿಲ್ಲ. ಅವರ ಒಂದೇ ವಿದ್ಯಾರ್ಹತೆ ಪ್ರೌಢಶಾಲೆಯ ಡಿಪ್ಲೊಮಾ. ಅದರಿಂದ ಅವರು ವಕೀಲರಾಗಲು ಅರ್ಹತೆ ಪಡೆದರು. ಅವರು ಕಾನೂನು ಪದವಿ ಹೊಂದಿಲ್ಲ" ಎಂದು ಮನೋಜ್ ಸಿನ್ಹಾ ತಮ್ಮ ಉಪನ್ಯಾಸದಲ್ಲಿ ಪ್ರತಿಪಾದಿಸಿದ್ದರು.

ಮಹಾತ್ಮ ಗಾಂಧಿ ಕುರಿತ ಹೇಳಿಕೆಯನ್ನು ಟೀಕಿಸಿರುವ ತುಷಾರ್ ಗಾಂಧಿ, "ನಾನು ಜಮ್ಮು ಮತ್ತು ಕಾಶ್ಮೀರ ರಾಜಭವನಕ್ಕೆ ಬಾಪು ಅವರ ಆತ್ಮಕತೆಯ ಪ್ರತಿಯೊಂದನ್ನು ರವಾನಿಸಿದ್ದೇನೆ. ಅದನ್ನು ಉಪ ರಾಜ್ಯಪಾಲರು ಒಂದು ವೇಳೆ ಓದಿ, ತಮಗೆ ತಾವು ತಿಳಿವಳಿಕೆ ಮೂಡಿಸಿಕೊಳ್ಳಲಿ ಎಂಬ ಆಶಯದೊಂದಿಗೆ. ನಾನು ಒಪ್ಪುತ್ತೇನೆ, ಬಾಪು ಸಮಗ್ರ ಕಾನೂನಿನಲ್ಲಿ ಯಾವುದೇ ಪದವಿ ಹೊಂದಿಲ್ಲ ಎಂಬ ಸಂಗತಿಯನ್ನು!" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

Similar News