ಲೇಆಫ್‌: ಉದ್ಯೋಗ ಕಳೆದುಕೊಂಡಿರುವ ಭಾರತದ 82 ಸ್ಟಾರ್ಟ್‌ಅಪ್‌ಗಳ 23,000 ಕ್ಕೂ ಅಧಿಕ ಟೆಕ್ಕಿಗಳು

Update: 2023-03-25 09:54 GMT

ಹೊಸದಿಲ್ಲಿ: ಆರ್ಥಿಕ ಹಿಂಜರಿತ ಭೀತಿಗಳ ನಡುವೆ ಹಲವು ಕಂಪೆನಿಗಳಲ್ಲಿ ಲೇಆಫ್‌ಗಳು ಮುಂದುವರಿದಿವೆ. ಭಾರತದಲ್ಲಿ ಕನಿಷ್ಠ 82 ಸ್ಟಾರ್ಟ್‌ಅಪ್‌ಗಳಲ್ಲಿ 23,000 ಕ್ಕೂ ಅಧಿಕ ಉದ್ಯೋಗಿಗಳು ಈಗಾಗಲೇ ಕೆಲಸ ಕಳೆದುಕೊಂಡಿದ್ದು ಈ ಪಟ್ಟಿ ಬೆಳೆಯುತ್ತಲೇ ಇದೆ.

ವರದಿಯೊಂದರ ಪ್ರಕಾರ ನಾಲ್ಕು ಯೂನಿಕಾರ್ನ್‌ಗಳು ಸೇರಿದಂತೆ 19 ಎಡ್‌ಟೆಕ್‌ ಸ್ಟಾರ್ಟ್‌ಅಪ್‌ಗಳು ಇಲ್ಲಿಯ ತನಕ 8,460 ಕ್ಕೂ ಅಧಿಕ ಉದ್ಯೋಗಿಗಳನ್ನು ಕೈಬಿಟ್ಟಿವೆ. ಲೇಆಫ್‌ ನಡೆಸಿದ ಸ್ಟಾರ್ಟ್‌ಅಪ್‌ಗಳಲ್ಲಿ ಬೈಜೂಸ್‌, ಓಲಾ, ಓಯೋ, ಮೀಶೋ, ಎಂಪಿಎಪಿಎಲ್‌, ಲಿವ್‌ಸ್ಪೇಸ್‌, ಇನ್ನೋವೇಕರ್‌, ಉಡಾನ್‌, ಅನ್‌ಅಕಾಡೆಮಿ ಮತ್ತು ವೇದಾಂತು ಸೇರಿವೆ.

ತನ್ನ ವೆಚ್ಚ ಕಡಿತ ಕ್ರಮದ ಭಾಗವಾಗಿ ಗೃಹ ಇಂಟೀರಿಯರ್‌ ಮತ್ತು ನವೀಕರಣ ಸಂಸ್ಥೆ ಲಿವ್‌ಸ್ಪೇಸ್‌ ಈ ವಾರ 100ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದ್ದರೆ, ಕಳೆದ ವಾರ ಆನ್‌ಲೈನ್‌ ಸ್ಟೋರ್‌ಗಳ ಸಾಸ್‌ ಪ್ಲಾಟ್‌ಫಾರ್ಮ್ ದುಕಾನ್‌ ತನ್ನ ಶೇ 30 ರಷ್ಟು ಉದ್ಯೋಗಿಗಳನ್ನು (ಸುಮಾರು 60 ಮಂದಿ) ಕೈಬಿಟ್ಟಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಸಂಸ್ಥೆಯಲ್ಲಿನ ಎರಡನೇ ಲೇಆಫ್‌ ಆಗಿದೆ.

ಹೆಲ್ತ್‌ಕೇರ್‌ ಕ್ಷೇತ್ರದ ಯೂನಿಕಾರ್ನ್‌ ಪ್ರಿಸ್ಟಿನ್‌ ಕೇರ್‌ ಸುಮಾರು 350 ಉದ್ಯೋಗಿಗಳನ್ನು ಕೈಬಿಟ್ಟಿದ್ದರೆ. ಆನ್‌ಲೈನ್‌ ಉನ್ನತ ಶಿಕ್ಷಣ ಸಂಸ್ಥೆ ಉಪ್‌ಗ್ರೇಡ್‌ ತನ್ನ ಅಂಗಸಂಸ್ಥೆ ಕ್ಯಾಂಪಸ್‌ನ ಸುಮಾರು 30 ಶೇಕಡಾ ಉದ್ಯೋಗಿಗಳನ್ನು ಕೈಬಿಟ್ಟಿದೆ.

ಫೆಬ್ರವರಿ ಕೊನೆ ಭಾಗದಲ್ಲಿ ಫಾರ್‌ಐ ಸಂಸ್ಥೆ 90 ಉದ್ಯೋಗಿಗಳನ್ನು ಕೈಬಿಟ್ಟಿತ್ತು. ಕಳೆದ ಎಂಟು ತಿಂಗಳ ಅವಧಿಯಲ್ಲಿ ಇದು ಸಂಸ್ಥೆಯ್ಲಲಿನ ಎರಡನೇ ಲೇಆಫ್‌ ಆಗಿದೆ. ಶೇರ್‌ಚೇಟ್‌ ತನ್ನ ಶೇ 20 ರಷ್ಟು ಉದ್ಯೋಗಿಗಳು, ಅಂದರೆ ಸುಮಾರು 500 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.

Similar News